ADVERTISEMENT

ಹೊಸಪೇಟೆ: ಮಾಜಿ ದೇವದಾಸಿ ಪುತ್ರಿಯ ಸಾಗರೋಲ್ಲಂಘನೆ

ಸಮಾಜ ಕಲ್ಯಾಣ ಇಲಾಖೆಯ ಪ್ರಬುದ್ಧ ಯೋಜನೆ– ಸಸೆಕ್ಸ್ ವಿ.ವಿಯಲ್ಲಿ ಪಿಎಚ್‌.ಡಿ ಅಧ್ಯಯನ

ಎಂ.ಜಿ.ಬಾಲಕೃಷ್ಣ
Published 5 ಆಗಸ್ಟ್ 2025, 22:14 IST
Last Updated 5 ಆಗಸ್ಟ್ 2025, 22:14 IST
ಕಾಮಾಕ್ಷಿ
ಕಾಮಾಕ್ಷಿ   

ಹೊಸಪೇಟೆ (ವಿಜಯನಗರ): ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ದೇವದಾಸಿ ಕುಟುಂಬದಲ್ಲಿ ಜನಿಸಿದ್ದ ಕಾಮಾಕ್ಷಿ, ಅಂತರರಾಷ್ಟ್ರೀಯ ಇಂಗ್ಲಿಷ್‌ ಭಾಷಾ ಪರೀಕ್ಷೆಯಲ್ಲಿ (ಐಇಎಲ್‌ಟಿಎಸ್) ಉತ್ತೀರ್ಣರಾಗಿ, ಇಂಗ್ಲೆಂಡ್‌ನ ಸಸೆಕ್ಸ್ ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ವ್ಯಾಸಂಗಕ್ಕೆ ಅರ್ಹತೆ ಗಳಿಸಿದ್ದಾರೆ.

ಶಾಲಾ ಶಿಕ್ಷಣದಿಂದ ಪದವಿಯವರೆಗೆ ಅವರು ಕನ್ನಡ ಮಾಧ್ಯಮದಲ್ಲೇ ಓದಿದ್ದಾರೆ. 

ರಾಜ್ಯ ಸರ್ಕಾರದ ಸಮಾಜ ಕಲ್ಯಾಣ ಇಲಾಖೆಯ ‘ಪ್ರಬುದ್ಧ’  ಯೋಜನೆಯಡಿ ವಿದೇಶದಲ್ಲಿ ಉನ್ನತ ಸಂಶೋಧನೆ ಮಾಡಲು ಆಯ್ಕೆಯಾದ ದೇವದಾಸಿ ಕುಟುಂಬದಿಂದ ಬಂದ ಮೊದಲ ಯುವತಿ ಕಾಮಾಕ್ಷಿ. ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್‌ಗೆ ಪ್ರಯಾಣ ಬೆಳೆಸುವರು. ನಾಲ್ಕು ವರ್ಷಗಳ ಅವರ ಅಧ್ಯಯನದ ಸಂಪೂರ್ಣ ವೆಚ್ಚವನ್ನು ಇಲಾಖೆ ಭರಿಸುತ್ತದೆ.

ADVERTISEMENT

ಕಠಿಣ ಹಾದಿ: ಕಾಮಾಕ್ಷಿ ಅವರು ಈವರೆಗೆ ಸವೆಸಿದ ಹಾದಿ ಕಠಿಣವಾದದ್ದು. ಬಡತನಕ್ಕಿಂತ ‘ಅಪ್ಪ ಯಾರು’ ಎಂಬ ಕೊಂಕು ಅವರನ್ನು ಹೆಚ್ಚು ಬಾಧಿಸಿತು. ಶಾಲೆ, ಕಾಲೇಜುಗಳಲ್ಲಿ ಮುಜುಗರ ಅನಭವಿಸಿದರು. ತಮ್ಮಂತೆಯೇ ಇತರರು ನೋವು ಅನುಭವಿಸಬಾರದು ಎಂದು ಪಣತೊಟ್ಟರು.

‘ಪದವಿಯವರೆಗೆ ಕನ್ನಡ ಮಾಧ್ಯಮದಲ್ಲೇ ಓದಿದೆ. ಹೊಸಪೇಟೆಯಲ್ಲಿ ದೇವದಾಸಿಯರ ಜೀವನಮಟ್ಟ ಸುಧಾರಿಸಲು ಶ್ರಮಿಸುತ್ತಿರುವ ಸಖಿ ಟ್ರಸ್ಟ್‌ನಲ್ಲಿ ಕೆಲಸ ಮಾಡಿದೆ. ಅದರ ಮುಖ್ಯಸ್ಥೆ ಭಾಗ್ಯಲಕ್ಷ್ಮಿ ಮತ್ತು ಸದಸ್ಯೆ ನಸ್ರೀನ್ ನೆರವಾದರು. ಮುಂಬೈಯ ಟಾಟಾ ಇನ್‌ಸ್ಟಿಟ್ಯೂಟ್‌ ಆಫ್‌ ಸೋಷಿಯಲ್ ಸೈನ್ಸ್‌ನಿಂದ (ಟಿಸ್‌) ದೇವದಾಸಿಯರ ಕುರಿತು ಅಧ್ಯಯನಕ್ಕೆ ಸಖಿ ಟ್ರಸ್ಟ್‌ಗೆ ಬಂದ ಸಂಶೋಧನಾ ವಿದ್ಯಾರ್ಥಿನಿ ಅರುಣಾಚಲ ಪ್ರದೇಶದ ರಿಮಿ ತಾಡು ಅವರ ಪರಿಚಯವಾಯಿತು. ‘ಟಿಸ್‌’ನಲ್ಲಿ ಸ್ನಾತಕೋತ್ತರ ಪದವಿ ಪಡೆದೆ. ಸದ್ಯ ನವದೆಹಲಿಯಲ್ಲಿ ‘ಕ್ರಿಯೇಟ್‌ನಟ್’ ಎಂಬ ಸ್ವಯಂಸೇವಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ಕಾಮಾಕ್ಷಿ ಹೇಳಿದರು.

‘ದೇವದಾಸಿ ಕುಟುಂಬದ ಸಾವಿರಾರು ಮಕ್ಕಳು ‘ಅಪ್ಪ ಯಾರು’ ಎಂಬ ಕೊಂಕು ಮಾತಿನಿಂದ ನೋವು ಅನುಭವಿಸುತ್ತಾರೆ. ದೇವದಾಸಿಯರ ಮಕ್ಕಳು ಸ್ವತಃ ಉನ್ನತ ಶಿಕ್ಷಣ ಪಡೆದರೆ ತಮ್ಮ ಸಮುದಾಯದಲ್ಲಿನ ಸಮಸ್ಯೆಗಳನ್ನು ತೊಡೆದುಹಾಕಲು ಸಾಧ್ಯವಾಗಬಹುದು’ ಎಂದರು.

ತಂದೆ ಇಲ್ಲವೇ ಎಂಬ ಪ್ರಶ್ನೆ ಪದೇ ಪದೇ ಮನಸ್ಸು ಗಾಸಿಗೊಳಿಸಿದೆ. ದೇವದಾಸಿಯರ ಮಕ್ಕಳು ಅದನ್ನು ಮೀರಿ ಸಾಗಬೇಕಿದೆ. ಉನ್ನತ ಶಿಕ್ಷಣ ಪಡೆಯುವುದರಿಂದ ಸಾಧನೆ ಸಾಧ್ಯ
ಕಾಮಾಕ್ಷಿ ಸಸೆಕ್ಸ್‌ ವಿ.ವಿಯಲ್ಲಿ ಪಿಎಚ್.ಡಿ ಅಧ್ಯಯನಕ್ಕೆ ಆಯ್ಕೆ ಆದವರು
ಪ್ರಬುದ್ಧ ಯೋಜನೆಗೆ ಕಾಮಾಕ್ಷಿ ಅವರು ಅರ್ಹ ಅಭ್ಯರ್ಥಿ. ಉನ್ನತ ವ್ಯಾಸಂಗ ಮಾಡಿ ದೇವದಾಸಿಯರ ಜೀವನ ಸುಧಾರಿಸಲು ಶ್ರಮಿಸಿದರೆ ಸರ್ಕಾರದ ಉದ್ದೇಶ ಸಾರ್ಥಕವಾಗುತ್ತದೆ.
ಆನಂದ ತಾಲಿ ಉಪನಿರ್ದೇಶಕ ಸಮಾಜ ಕಲ್ಯಾಣ ಇಲಾಖೆ

ಸಮಗ್ರ ಪುನರ್ವಸತಿಗೆ ಯತ್ನ

ಸರ್ಕಾರದ ಅಂಕಿ ಅಂಶದ ಪ್ರಕಾರ ರಾಜ್ಯದಲ್ಲಿ 46660 ದೇವದಾಸಿಯರಿದ್ದು ವಿಜಯನಗರ ಜಿಲ್ಲೆಯಲ್ಲಿ ಅತ್ಯಧಿಕ 8191 ಮಂದಿ ಇದ್ದಾರೆ. ಆದರೆ. ಎಲ್ಲರಿಗೂ ಪಿಂಚಣಿ ನಿವೇಶನ ಮನೆ ಬ್ಯಾಂಕ್ ಸಾಲ ಸೌಲಭ್ಯ ಸಿಗಬೇಕು ಎಂಬುದಕ್ಕೆ ನಿರಂತರ ಯತ್ನ ನಡೆದಿದೆ. ಮರು ಸಮೀಕ್ಷೆ ಮತ್ತು ಸಮಗ್ರ ಪುನರ್ವಸತಿ ಕಲ್ಪಿಸಲು ಸರ್ಕಾರ ಮುಂದಾಗಿದೆ. ದೇವದಾಸಿ ಮಕ್ಕಳಿಗೆ ಪಿತೃತ್ವ ಹಕ್ಕು ಕಲ್ಪಿಸುವ ಕರ್ನಾಟಕ ದೇವದಾಸಿ ಪದ್ಧತಿ ತಡೆ ಮಸೂದೆಯೂ ಅದರ ಒಂದು ಭಾಗ.

‘ವೀಸಾಕ್ಕೆ ಹಣ ಹೊಂದಿಸಬೇಕು

ಕಾಮಾಕ್ಷಿ ಅವರು ಇಂಗ್ಲೆಂಡ್‌ಗೆ ಹೋಗಲು ವೀಸಾ ವ್ಯವಸ್ಥೆ ಮಾಡಿಕೊಳ್ಳಬೇಕು. ಅದಕ್ಕೆ ₹3.50 ಲಕ್ಷ ಅಗತ್ಯವಿದೆ. ಸದ್ಯಕ್ಕೆ ₹2 ಲಕ್ಷ ಸಂಗ್ರಹವಾಗಿದೆ. ಇನ್ನೂ ಒಂದೂವರೆ ಲಕ್ಷ ಸಂಗ್ರಹ ಆಗಬೇಕಿದೆ. ಅದಕ್ಕಾಗಿ ಪ್ರಯತ್ನ ಮುಂದುವರಿದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.