ಮರಿಯಮ್ಮನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಮರಿಯಮ್ಮನಹಳ್ಳಿ ಪಟ್ಟಣದ ಹಿರಿಯ ರಂಗ ಕಲಾವಿದೆ ಹಾಗೂ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತೆ ಡಿ. ಹನುಮಕ್ಕ (58) ಅವರು ಅನಾರೋಗ್ಯದಿಂದ ಶುಕ್ರವಾರ ಬೆಳಿಗ್ಗೆ ಕೊಪ್ಪಳದಲ್ಲಿ ನಿಧನರಾದರು.
ಸಹೋದರಿಯರ ಜೊತೆಯಲ್ಲಿದ್ದ ಅವರು ಒಂದು ವರ್ಷದಿಂದ ಮಿದುಳಿನ ಗಡ್ಡೆ ಕಾಯಿಲೆಯಿಂದ ಬಳಲುತ್ತಿದ್ದರು. ಎರಡು ತಿಂಗಳಿಂದ ಅವರು ಕೋಮಾವಸ್ಥೆಯಲ್ಲಿದ್ದರು.
ಹೆಗ್ಗೋಡಿನ ‘ನೀನಾಸಂ’ ಪದವೀಧರೆಯಾದ ಹನುಮಕ್ಕ, ಬಿ.ವಿ.ಕಾರಂತ, ಕೆ.ವಿ.ಸುಬ್ಬಣ್ಣ, ಸಿಜಿಕೆ, ಸಿ.ಬಸವಲಿಂಗಯ್ಯ, ಮೇಕಪ್ ನಾಣಿ, ಕೀರ್ತಿನಾಥ ಕುರ್ತಕೋಟಿ, ಯು.ಆರ್.ಅನಂತಮೂರ್ತಿ, ಕೀ.ರಂ.ನಾಗರಾಜ ಮೊದಲಾದವರ ಮಾರ್ಗದರ್ಶನದಲ್ಲಿ ಬೆಳೆದವರು. ನೀನಾಸಂ ತಿರುಗಾಟ, ಸಾಣೆಹಳ್ಳಿ ಶಿವಸಂಚಾರ ಹನುಮಕ್ಕ ಅವರ ಕಲಾ ಪ್ರತಿಭೆಗೆ ಪುಟವಿಟ್ಟವು. ‘ತುಘಲಕ್’, ‘ಅಗ್ನಿ ಮತ್ತು ಮಳೆ’, ‘ಬೆರಳ್‌ಗೆ ಕೊರಳ್’, ‘ನಾಗಮಂಡಲ’, ‘ಚಿರಬಂದೆವಾಡೆ’, ‘ಸ್ಮಶಾನ ಕುರುಕ್ಷೇತ್ರ’, ‘ಚಾಳೇಶ’, ‘ಜೋಕುಮಾರಸ್ವಾಮಿ’, ‘ಬೇಲಿ ಮತ್ತು ಹೊಲ’, ‘ಶರೀಫ’, ‘ಒಡಲಾಳ’, ‘ಸೂರ್ಯಶಿಕಾರಿ’ ಮೊದಲಾದ ನಾಟಕಗಳಲ್ಲಿ ಅಭಿನಯಿಸಿದ್ದಾರೆ.
ರಂಗ ನಿರಂತರ, ರೂಪಾಂತರ, ಕನ್ನಡ ಕಲಾ ಸಂಘ ತಂಡಗಳಲ್ಲೂ ಹನುಮಕ್ಕ ಅಭಿನಯಿಸಿದ್ದರು. ಅವರು ವಸ್ತ್ರವಿನ್ಯಾಸ, ರಂಗನಿರ್ವಹಣೆಯಲ್ಲೂ ನಿಷ್ಣಾತರಾಗಿದ್ದರು.‘ಫೈಲ್ ನಂ.11’ ಎಂಬ ನಾಟಕ ನಿರ್ದೇಶಿಸಿದ್ದರು.
ಹಿರಿಯ ರಂಗಕರ್ಮಿ ದುರ್ಗಾದಾಸ ಅವರ ನಾಲ್ಕನೇ ಪುತ್ರಿಯಾದ ಹನುಮಕ್ಕ ಅವರು 2017ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾದವರು. ಈ ಮೂಲಕ ಅಪ್ಪ (1980ರಲ್ಲಿ ಪ್ರಶಸ್ತಿ), ಮಗಳು ಇಬ್ಬರಿಗೂ ಈ ಪ್ರಶಸ್ತಿ ಒಲಿದಂತಾಗಿದೆ.
ಹನುಮಕ್ಕ ಅವರು ಮುಂಬೈ ಕನ್ನಡ ಸಂಘದ ಸ್ಪರ್ಧೆಯಲ್ಲಿ ಹಾಗೂ ರಾಜ್ಯ ನಾಟಕ ಸ್ಪರ್ಧೆಯಲ್ಲಿ ತಲಾ ಎರಡು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಗಳಿಸಿದ್ದಾರೆ. ಕನ್ನಡ ಕಲಾ ಸಂಘದ ಟಿ.ಪಿ.ಕೈಲಾಸಂ ಪ್ರಶಸ್ತಿ, ಕೊಟ್ಟೂರು ಮತ್ತು ಕೂಡ್ಲಿಗಿಯಲ್ಲಿ ರಂಗ ಗೌರವ ಸಂದಿದೆ. 2023ನೇ ಸಾಲಿನ ಜೋಳದರಾಶಿ ದೊಡ್ಡನಗೌಡ ರಂಗತೋರಣ ಪುರಸ್ಕಾರಕ್ಕೂ ಇವರು ಪಾತ್ರರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.