ADVERTISEMENT

ರಾಜ್ಯ ದ್ವಿಭಾಷಾ ಸೂತ್ರ ಒಪ್ಪಿಕೊಳ್ಳಲಿ: ಮರುಳಸಿದ್ದಪ್ಪ

ಹಂಪಿ ಕನ್ನಡ ವಿಶ್ವವಿದ್ಯಾಲಯದ 34ನೇ ನುಡಿಹಬ್ಬ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2026, 4:41 IST
Last Updated 28 ಫೆಬ್ರುವರಿ 2026, 4:41 IST
   

ಹೊಸಪೇಟೆ (ವಿಜಯನಗರ): ‘ತಮಿಳುನಾಡು ಮತ್ತು ಕೇರಳ ಸರ್ಕಾರಗಳು ದ್ವಿಭಾಷಾ ನೀತಿಯನ್ನು ಅನುಸರಿಸಿದ ರೀತಿ ಕರ್ನಾಟಕ ಸರ್ಕಾರವೂ ದ್ವಿಭಾಷಾ ಸೂತ್ರವನ್ನು ಒಪ್ಪಬೇಕು. ರಾಷ್ಟ್ರೀಯ ಶಿಕ್ಷಣ ನೀತಿಯ ತ್ರಿಭಾಷಾ ಸೂತ್ರವನ್ನು ನಿರಾಕರಿಸಬೇಕು’ ಎಂದು ಚಿಂತಕ ಪ್ರೊ.ಕೆ.ಮರುಳಸಿದ್ದಪ್ಪ ಸಲಹೆ ನೀಡಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 34ನೇ ನುಡಿಹಬ್ಬದಲ್ಲಿ ಘಟಿಕೋತ್ಸವಲ್ಲಿ ಮಾತನಾಡಿದ ಅವರು, ‘ಕುವೆಂಪು ಅವರು ಬಹುಹಿಂದೆಯೇ ಬಹುಭಾಷೆಗಳಲ್ಲಿ ದ್ವಿಭಾಷೆ ಎಂಬ ಸೂತ್ರ ಪ್ರತಿಪಾದಿಸಿದ್ದಾರೆ’ ಎಂದರು.

‘ಹಿಂದಿಯನ್ನು ರಾಷ್ಟ್ರ ಭಾಷೆ ಎಂಬಂತೆ ಬಿಂಬಿಸುತ್ತಿರುವುದು ಹಿಂದಿಯೇತರ ರಾಜ್ಯಗಳಿಗೆ ತೊಡಕಾಗಿದೆ. ವಾಸ್ತವವಾಗಿ ನಮ್ಮ ಸಂವಿಧಾನವು ಯಾವುದೇ ಭಾಷೆಯನ್ನು ರಾಷ್ಟ್ರಭಾಷೆ ಎಂಬುದಾಗಿ ಘೋಷಿಸಿಲ್ಲ. ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳನ್ನು ಸಂಪರ್ಕ ಭಾಷೆಗಳೆಂದು ಕರೆಯಲಾಗಿದೆ. ಎಲ್ಲ ರಾಜ್ಯ ಭಾಷೆಗಳೂ ರಾಷ್ಟ್ರ ಭಾಷೆಗಳು’ ಎಂದರು.

ADVERTISEMENT

‘ವಿಷಯಗಳ ಕಲಿಕೆಗೆ ಮಹತ್ವವಿರಬೇಕೇ ಹೊರತು ಭಾಷಾ ಕಲಿಕೆಗಲ್ಲ ಎಂಬ ತತ್ವ ಗಾಳಿಗೆ ತೂರಲಾಗಿದೆ. ಯಾವುದೇ ಭಾಷೆಯನ್ನು ಕಡ್ಡಾಯವಾಗಿ ಕಲಿಸಲು ಯತ್ನಿಸಿದರೆ, ಅದು ಪ್ರತಿರೋಧ ಹೆಚ್ಚಿಸುತ್ತದೆ. ಹಿಂದಿ ಭಾಷೆಗೆ ದಕ್ಷಿಣ ಭಾರತದಲ್ಲಿ, ಅದರಲ್ಲೂ ತಮಿಳುನಾಡಿನಲ್ಲಿ ಎದ್ದ ತೀವ್ರ ಆಕ್ರೋಶವೇ ನಿದರ್ಶನ’ ಎಂದರು.

ನಾಡೋಜ ಗೌರವಕ್ಕೆ ಪಾತ್ರರಾದ ಪ್ರೊ.ಸಿ.ಮಹಾದೇವಪ್ಪ ಮತ್ತು ಎಚ್‌.ಸಿ.ಸತ್ಯನ್‌ ಅವರಿಗೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಗೌರವ ಪ್ರದಾನ ಮಾಡಿದರು. ಗೌರವಕ್ಕೆ ಆಯ್ಕೆಯಾಗಿರುವ ಜಿ.ರಾಮಕೃಷ್ಣ ಅವರು  ಗೈರಾದರು. 

ರಾಜ್ಯದ ವಿಶ್ವವಿದ್ಯಾಲಯಗಳು ಅದರಲ್ಲೂ ವಿಶೇಷ ವಿಶ್ವವಿದ್ಯಾಲಯಗಳ ಆರ್ಥಿಕ ಸಂಕಷ್ಟ ಬೋಧಕ ಸಿಬ್ಬಂದಿ ಕೊರತೆ ನಿವಾರಿಸಲು ಸಂಪುಟ ಉಪಸಮಿತಿಯಲ್ಲಿ ಆಳ ಅಧ್ಯಯನ ನಡೆಸಲಾಗುತ್ತಿದೆ
–ಎಂ.ಸಿ.ಸುಧಾಕರ್ ಉನ್ನತ ಶಿಕ್ಷಣ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.