ಹೊಸಪೇಟೆ (ವಿಜಯನಗರ): ‘ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆ ಅಲ್ಲದೆ, ರೈತರಿಗೆ ಉಚಿತ ವಿದ್ಯುತ್ (₹18 ಸಾವಿರ ಕೋಟಿ), ಮಾಸಾಶನಗಳಿಗೆ (₹20 ಸಾವಿರ ಕೋಟಿ) ವಾರ್ಷಿಕ ₹1 ಲಕ್ಷ ಕೋಟಿಗಿಂತಲೂ ಅಧಿಕ ವೆಚ್ಚ ಮಾಡುತ್ತಿದೆ. ಹೀಗಿದ್ದರೂ ರಾಜ್ಯದ ಆರ್ಥಿಕ ಸ್ಥಿತಿ ಉತ್ತಮವಾಗಿಯೇ ಇದೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ್ ಸೊರಕೆ ಹೇಳಿದರು.
ನಗರದಲ್ಲಿ ಶುಕ್ರವಾರ ಜಿಲ್ಲಾಮಟ್ಟದ ಪ್ರಚಾರ ಸಮಿತಿಯ ಸಭೆಯಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘7ನೇ ವೇತನ ಆಯೋಗದ ಶಿಫಾರಸಿನಂತೆ ಸರ್ಕಾರಿ ನೌಕರರಿಗೆ ಹೆಚ್ಚುವರಿ ವೇತನ ಪಾವತಿಸಿದ್ದರಿಂದ ಬೊಕ್ಕಸಕ್ಕೆ ವಾರ್ಷಿಕ ₹23 ಸಾವಿರ ಕೋಟಿ ಹೊರೆ ಬಿದ್ದಿದೆ. ಹೀಗಿದ್ದರೂ ಅಭಿವೃದ್ಧಿ ಕೆಲಸಗಳು ನಿಂತಿಲ್ಲ. ಸರ್ಕಾರ ಜನಪರವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ’ ಎಂದರು.
‘ಮತಗಳ್ಳತನ ಆಗಿರುವುದಕ್ಕೆ ಹಲವು ಪುರಾವೆಗಳು ಸಿಗುತ್ತಿವೆ. ರಾಹುಲ್ ಗಾಂಧಿ ಅವರು ಹಲವು ಸಾಕ್ಷ್ಯಗಳನ್ನು ಒದಗಿಸಿಯೇ ಈ ಆರೋಪ ಮಾಡಿದ್ದಾರೆ. ಮಹದೇವಪುರದಲ್ಲಿ ನಾನೇ ವೀಕ್ಷಕನಾಗಿದ್ದೆ. ಅಲ್ಲಿ 80 ಸಾವಿರ ಹೆಚ್ಚುವರಿ ಮತಗಳು ವಿಧಾನಸಭೆ ಚುನಾವಣೆಯ ನಂತರ ಲೋಕಸಭೆ ಚುನಾವಣೆ ವೇಳೆ ಸೇರ್ಪಡೆಯಾಗಿವೆ. ಹೀಗಾಗಿ ಇನ್ನು ಮುಂದೆ ಬೂತ್ ಮಟ್ಟದಲ್ಲಿ, ಬ್ಲಾಕ್ ಮಟ್ಟದಲ್ಲಿ ಮತದಾರರ ಪಟ್ಟಿಯಲ್ಲಿ ಯಾವುದೇ ಅಕ್ರಮ ಆಗದಂತೆ ಎಚ್ಚರ ವಹಿಸುವ ಕೆಲಸವನ್ನು ಕಾಂಗ್ರೆಸ್ ಪ್ರಚಾರ ಸಮಿತಿ ಮಾಡಲಿದೆ’ ಎಂದು ತಿಳಿಸಿದರು.
ಪಕ್ಷದ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಎನ್.ಎಫ್.ಇಮಾಮ್ ನಿಯಾಜಿ, ರಾಜ್ಯ ಉಪಾಧ್ಯಕ್ಷ ಜಿ.ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಯಶೋಧರ ಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಾಯಕ ಶೆಟ್ಟರ್, ಮುಖಂಡರಾದ ಪಿ.ಬಾಬು, ಆನಂದ್, ಸಂತೋಷ್, ಗುಜ್ಜಲ್ ನಾಗರಾಜ್ ಇದ್ದರು.
ಸಮಾವೇಶ: ವಿ.ಎನ್.ರಾಯಲ್ ಗಾರ್ಡನ್ ಸಭಾಂಗಣದಲ್ಲಿ ಪ್ರಚಾರ ಸಮಿತಿ ಸಮಾವೇಶ ನಡೆಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ‘ಹುಡಾ’ ಅಧ್ಯಕ್ಷರೂ ಆಗಿರುವ ಎಚ್.ಎನ್.ಎಫ್.ಮೊಹಮ್ಮದ್ ಇಮಾಮ್ ನಿಯಾಜಿ, ‘ಸರ್ಕಾರದ ಜನಪರ ಯೋಜನೆಗಳು ಈಗಾಗಲೇ ಅರ್ಹರಿಗೆ ಹಾಗೂ ಜನಸಾಮಾನ್ಯರೆಲ್ಲರಿಗೂ ತಲುಪುತ್ತಿದ್ದು, ಕಾಂಗ್ರೆಸ್ ಸರ್ಕಾರದ ಜನಪರ ಕೆಲಸವನ್ನು ಜನರಿಗೆ ತಿಳಿಸುವ ಮತ್ತು ಅವರು ಸದಾ ಪಕ್ಷದೊಂದಿಗೇ ಇರುವಂತೆ ಮಾಡುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ’ ಎಂದರು.
ವಿನಯಕುಮಾರ್ ಸೊರಕೆ ಅವರು ಕಾಂಗ್ರೆಸ್ ಸರ್ಕಾರದ ಸಾಧನೆಗಳು, ಗ್ಯಾರಂಟಿ ಯೋಜನೆಗಳು, ಗಾಂದಿ ಕುಟುಂಬ ಪಕ್ಷಕ್ಕಾಗಿ ಮಾಡಿದ ತ್ಯಾಗ ಮೊದಲಾದ ವಿಚಾರಗಳನ್ನು ಸವಿಸ್ತಾರವಾಗಿ ತಿಳಿಸಿ, ಕಾರ್ಯಕರ್ತರೇ ಪಕ್ಷದ ಜೀವಾಳ, ತಳಮಟ್ಟದಿಂದ ಪಕ್ಷದ ಬೇರನ್ನು ಗಟ್ಟಿಗೊಳಿಸುವ ಕೆಲಸ ಆಗಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಭರತ್ ಕುಮಾರ್, ಹೊಸಪೇಟೆ ಗ್ರಾಮಾಂತರ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಜಂಬಯ್ಯ, ಹೊಸಪೇಟೆ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟರಮಣ, ಕೆಪಿಸಿಸಿ ಅಲ್ಪಸಂಖ್ಯಾತರ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸ್ಯಯದ್, ಹೊಸಪೇಟೆ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಯೋಗಲಕ್ಷ್ಮಿ, ಹಡಗಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೋಟ್ರೇಶ, ಹೊಸಪೇಟೆ ನಗರಸಭಾ ಸದಸ್ಯರಾದ ಅಸ್ಲಾಂ ಮಾಳಗಿ, ರಾಘವೇಂದ್ರ, ಖಲಂದರ್, ಮುನ್ನಿಖಾಸೀಂ ಇದ್ದರು.
‘ಶಾಸಕರಿಲ್ಲ ಮುಂಚೂಣಿ ನಾಯಕರೂ ಇಲ್ಲ’
ಪಕ್ಷದ ಪ್ರಚಾರ ಸಮಿತಿಗೂ ಜಿಲ್ಲಾ ಸಮಿತಿಗೂ ಸಂಬಂಧವೇ ಇಲ್ಲವೇನೋ ಎಂಬ ರೀತಿಯಲ್ಲಿ ಸಮಾವೇಶ ನಡೆಯಿತು. ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಲಿ ಸ್ಥಳೀಯ ಶಾಸಕರ ಸಹಿತ ಜಿಲ್ಲೆಯ ಮೂವರು ಶಾಸಕರು ಸಮಾವೇಶದಿಂದ ದೂರವೇ ಉಳಿದಿದ್ದರು. ಸ್ಥಳೀಯ ಶಾಸಕರು ನಗರದಲ್ಲೇ ಇದ್ದರೂ ಬರಲಿಲ್ಲ.
‘ಸರ್ಕಾರ ರಚನೆಗೊಂಡು ಎರಡು ವರ್ಷ ಕಳೆದಿದೆ. ಶಾಸಕರು ತಮ್ಮ ಹಿಂಬಾಲಕ ಕೆಲವರನ್ನಷ್ಟೇ ಕೆಲವು ಸಮಿತಿಗಳಿಗೆ ನೇಮಕ ಮಾಡಿದ್ದು ಬಿಟ್ಟರೆ ಸುಮಾರು 200ರಷ್ಟು ನೇಮಕಾತಿಗಳು ಆಗಿಲ್ಲ. ಹೀಗಾಗಿ ಪಕ್ಷದಲ್ಲಿ ಕಾರ್ಯಕರ್ತರಿಗೆ ಅಸಮಾಧಾನ ಇರುವುದು ಸುಳ್ಳಲ್ಲ’ ಎಂದು ಪಕ್ಷದ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.