ADVERTISEMENT

ಸರ್ಕಾರ ಬಡವರ ಪರ–ವಸತಿ ಭಾಗ್ಯದ ವರ: ವಸತಿ ಸಚಿವ ಜಮೀರ್ ಅಹಮದ್ ಖಾನ್‌

ಹೊಸಪೇಟೆಯಲ್ಲಿ 79ನೇ ಸ್ವಾತಂತ್ರ್ಯೋತ್ಸವ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 7:07 IST
Last Updated 15 ಆಗಸ್ಟ್ 2025, 7:07 IST
   

ಹೊಸಪೇಟೆ : ರಾಜ್ಯದ ಕಾಂಗ್ರೆಸ್ ಸರ್ಕಾರ ಬಡವರ ಪರವಾಗಿದೆ, ಅದರಿಂದಾಗಿಯೇ ಅಘೋಷಿತ ಆರನೇ ಗ್ಯಾರಂಟಿ ರೂಪದಲ್ಲಿ ವಸತಿ ಭಾಗ್ಯವನ್ನು ಬಡವರಿಗೆ ಕಲ್ಪಿಸಲಾಗುತ್ತಿದೆ. ಕೆಲವೇ ತಿಂಗಳು ಬೆಂಗಳೂರಿನಲ್ಲಿ 7,900 ಮನೆಗಳನ್ನು ಹಾಗೂ ರಾಜ್ಯದ ಇತರ ಕಡೆಗಳಲ್ಲಿ 42,345 ಮನೆಗಳನ್ನು ಹಂಚಲಾಗುತ್ತದೆ ಎಂದು ವಸತಿ ಸಚಿವರೂ ಆಗಿರುವ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ಇಲ್ಲಿನ ಪುನೀತ್‌ ರಾಜ್‌ಕುಮಾರ್ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ಹಿಂದಿನ ಬಿಜೆಪಿ ಸರ್ಕಾರ ವಸತಿ ಕ್ಷೇತ್ರವನ್ನು ಸಂಪೂರ್ಣ ಕಡೆಗಣಿಸಿತ್ತು. ಆದರೆ ಕಾಂಗ್ರೆಸ್ ಸರ್ಕಾರ ಬಡವರ ಮೇಲಿನ ನಿಜವಾದ ಕಾಳಜಿಯನ್ನು ಪ್ರದರ್ಶಿಸಿದೆ ಹಾಗೂ 2026ರ ಅಂತ್ಯದೊಳಗೆ 2.30 ಲಕ್ಷ ಮನೆಗಳನ್ನು ನೀಡಲಿದ್ದೇವೆ ಎಂದರು.

‘ಬೆಂಗಳೂರಿನಲ್ಲಿ ಬೀದಿಬದಿ ವ್ಯಾಪಾರಿಗಳು, ರಿಕ್ಷಾ ಚಾಲಕರು ಸಹಿತ ಬಡವರಿಗೆ ಸ್ವಂತ ಸೂರಿನ ಕನಸು ಈಡೇರುವುದಕ್ಕಾಗಿ 2016ರಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 1,028 ಎಕರೆ ಪ್ರದೇಶವನ್ನು ಮೀಸಲಿಟ್ಟಿದ್ದರು. ಒಂದು ಮನೆಗೆ ₹6 ಲಕ್ಷ ನಿಗದಿಪಡಿಸಿದ್ದರು. ಕೇಂದ್ರ, ರಾಜ್ಯ ಸರ್ಕಾರಗಳ ಸಬ್ಸಿಡಿಯ ಬಳಿಕ ಸುಮಾರು ₹4 ಲಕ್ಷವನ್ನು ಫಲಾನುಭವಿಗಳು ಪಾವತಿಸಬೇಕೆಂದು ತಿಳಿಸಲಾಗಿತ್ತು. ಬಳಿಕ ಬಂದ ಬಿಜೆಪಿ ಸರ್ಕಾರ ಈ ಮೊತ್ತವನ್ನು ₹11 ಲಕ್ಷಕ್ಕೆ ಹೆಚ್ಚಿಸಿತು, ಆದರೆ ಮನೆ ಕೊಡಲಿಲ್ಲ. ಮತ್ತೆ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಇದೇ ಯೋಜನೆಯಲ್ಲಿ ಬಡವರಿಗೆ ಮನೆ ನಿರ್ಮಿಸಿಕೊಡಲು ಸಂಕಲ್ಪ ಮಾಡಿದೆ. ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ₹1 ಲಕ್ಷ ಕೊಡಲಿದೆ, ಇದೀಗ ಫಲಾನುಭವಿಗಳು ಕೇವಲ ₹8  ಲಕ್ಷ ಪಾವತಿಸಿದರೆ ಸಾಕು. ಮೇಲಾಗಿ ಎಸ್‌ಬಿಐನಿಂದ ಸಾಲ ಪಡೆದು, ಹೆಚ್ಚುವರಿ ಬಡ್ಡಿಯನ್ನು ಸಹ ಸರ್ಕಾರವೇ ಭರಿಸುವ ನಿರ್ಧಾರಕ್ಕೆ ಬಂದಿದೆ. ಇದೆಲ್ಲದರ ಫಲವಾಗಿ ಬೆಂಗಳೂರಿನಲ್ಲಿ 7,900 ಮಂದಿಗೆ ಸ್ವಂತ ಸೂರಿನ ಭಾಗ್ಯ ಸಿಗುತ್ತಿದೆ’ ಎಂದು ಸಚಿವ ಜಮೀರ್ ವಿವರಿಸಿದರು.

ADVERTISEMENT

ಸಾಧನಾ ಸಮಾವೇಶಕ್ಕಾಗಿ ಮುಂದೂಡಿಕೆ: ‘ಸರ್ಕಾರ ಕಳೆದ ವರ್ಷವೇ 36,789 ಮನೆಗಳನ್ನು ಒದಗಿಸಿದ್ದು, ಮತ್ತೆ 42,345 ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸುವುದಕ್ಕೆ ಸಜ್ಜಾಗಿದೆ.  ಜೂನ್ ಅಥವಾ ಜುಲೈನಲ್ಲಿ  ಹುಬ್ಬಳ್ಳಿಯಲ್ಲಿ ದೊಡ್ಡ ಸಮಾವೇಶ ನಡೆಸಿ ಈ ಮನೆಗಳನ್ನು ಹಂಚಬೇಕೆಂಬ ನಿರ್ಧಾರಕ್ಕೆ ಬರಲಾಗಿತ್ತು. ಆದರೆ ಹೊಸಪೇಟೆಯಲ್ಲೇ ಸರ್ಕಾರದ ಎರಡನೇ ವರ್ಷದ ಸಾಧನಾ ಸಮಾವೇಶ ನಡೆಸಬೇಕು ಎಂದು ಮುಖ್ಯಮಂತ್ರಿ ಅವರು ಸೂಚಿಸಿದ ಕಾರಣ ಮನೆ ಹಂಚಿಕೆ ಕಾರ್ಯಕ್ರಮ ಮುಂದೂಡಿಕೆಯಾಗಿದೆ, ಅದನ್ನು ಮುಂದಿನ ತಿಂಗಳು ನಡೆಸಲಾಗುವುದು’ ಎಂದು ಅವರು ಹೇಳಿದರು.

ಬೃಹತ್ ಧ್ವಜಸ್ತಂಭದಲ್ಲಿ ಹಾರಾಡಲಿಲ್ಲ ರಾಷ್ಟ್ರಧ್ವಜ: ದೇಶದ ಎರಡನೇ ಅತ್ಯಂತ ಎತ್ತರದ ಧ್ವಜಸ್ತಂಭ ಎಂಬ ಖ್ಯಾತಿಯ ಇಲ್ಲಿಯ ಧ್ವಜಸ್ತಂಭದಲ್ಲಿ ನಿರೀಕ್ಷಿಸಿದಂತೆಯೇ ಬೃಹತ್ ಧ್ವಜ ಹಾರಾಡಲಿಲ್ಲ, ಬದಲಿಗೆ ಸಣ್ಣ ಸ್ತಂಭದಲ್ಲೇ ಸಚಿವರು ತ್ರಿವರ್ಣ ಧ್ವಜಾರೋಹಣ ಮಾಡಿದರು. ಬೃಹತ್ ಧ್ವಜಸ್ತಂಭದಲ್ಲಿ ಕೇಬಲ್‌ ತುಂಡಾಗಿದ್ದು, ಧ್ವಜ ಏರಿಸುವ ವ್ಯವಸ್ಥೆ ಇನ್ನೂ ದುರಸ್ತಿಯಾಗಿಲ್ಲ. ಮೇಲ್ಭಾಗದ ನೇವಿಗೇಷನ್‌ ದೀಪ, ವೈಟ್ ಬ್ಲಿಂಕಿಂಗ್ ದೀಪ ಸಹ ಉರಿಯುತ್ತಿಲ್ಲ. ಕಳೆದ  ಗಣರಾಜ್ಯೋತ್ಸವ ದಿನದಂದು ಧ್ವಜ ಮೇಲಕ್ಕೆ ಏರುತ್ತಿದ್ದಂತೆಯೇ ಕೇಬಲ್ ತುಂಡಾಗಿ ಧ್ವಜ ಕುಸಿದು ಬಿದ್ದಿತ್ತು. ಎಂಟು ತಿಂಗಳ ಬಳಿಕವೂ ಧ್ವಜಸ್ತಂಭ ದುರಸ್ತಿಯಾಗಿಲ್ಲ (ಈ ಬಾರಿ ಬೃಹತ್‌ ಧ್ವಜಸ್ತಂಭದಲ್ಲಿ ಧ್ವಜಾರೋಹಣ ಅಸಾಧ್ಯ ಎಂದು ಎರಡು ವಾರದ ಹಿಂದೆಯೇ ‘ಪ್ರಜಾವಾಣಿ’ ವರದಿ ಮಾಡಿತ್ತು).

ಅಧಿಕಾರಿಗಳಿಗೆ ಸನ್ಮಾನ: ಜಿಲ್ಲೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಉಪವಿಭಾಗಾಧಿಕಾರಿ ವಿವೇಕಾನಂದ, ಹೊಸಪೇಟೆ ತಹಶೀಲ್ದಾರ್ ಶ್ರುತಿ ಎಂ.ಎಂ. ಸಹಿತ ಹಲವು ಅಧಿಕಾರಿಗಳನ್ನು ಸಚಿವ ಜಮೀರ್ ಸನ್ಮಾನಿಸಿದರು.

ಶಾಸಕ ಎಚ್‌.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್‌, ಜಿಲ್ಲಾ ಪಂಚಾಯಿತಿ ಸಿಇಒ ನೊಂಗ್ಜಾಯ್‌ ಮೊಹಮ್ಮದ್ ಅಲಿ ಅಕ್ರಂ ಷಾ, ಎಸ್‌ಪಿ ಅರುಣಾಂಗ್ಷುಗಿರಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಕುರಿ ಶಿವಮೂರ್ತಿ, ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಚ್.ಎನ್‌.ಎಫ್‌.ಮೊಹಮ್ಮದ್ ಇಮಾಂ ನಿಯಾಜಿ ಇತರರು ಇದ್ದರು.

ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.  ಪೊಲೀಸ್, ಡಿಎಆರ್‌, ಎನ್‌ಸಿಸಿ, ಭಾರತ್ ಸೇವಾ ದಳ, ಗೃಹರಕ್ಷಕದಳ, ಪೌರಕಾರ್ಮಿಕರ ಸಹಿತ ಒಟ್ಟು 12 ತುಕಡಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.

ಬಿಡುವು ನೀಡಿದ ಮಳೆ: ಗುರುವಾರ ಸಂಜೆ ನಗರದಲ್ಲಿ ಉತ್ತಮವಾಗಿ ಮಳೆ ಸುರಿದಿತ್ತು. ಮೈದಾನ ಕೆಸರು ಗದ್ದೆಯಂತೆ ಆಗಿತ್ತು. ಪಥಸಂಚಲನ ನಡೆಯುವ ಸ್ಥಳದಲ್ಲಿ ಜಲ್ಲಿಪುಡಿ, ಮಣ್ಣು ಹಾಕಿ ಕೆಸರನ್ನು ಮರೆಮಾಚಲಾಗಿತ್ತು. ಶುಕ್ರವಾರ ಮಳೆ ಸುರಿಯದ ಕಾರಣ ಯಾವುದೇ ತೊಂದರೆ ಇಲ್ಲದೆ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗುವುದು ಸಾಧ್ಯವಾಯಿತು.

ಮಾಧ್ಯಮಗೋಷ್ಠಿ ನಡೆಸದೆ ನಿರ್ಗಮಿಸಿದ ಸಚಿವ

ಸ್ವಾತಂತ್ರ್ಯೋತ್ಸವ ಸಮಾರಂಭದ ಕೊನೆಯಲ್ಲಿ ಮಾಧ್ಯಮಗೋಷ್ಠಿ ನಡೆಸುವುದಾಗಿ ಸಚಿವರು ಮೊದಲು ತಿಳಿಸಿದ್ದರು. ಆದರೆ ಕಾರ್ಯಕ್ರಮ ಕೊನೆಗೊಳ್ಳುತ್ತಿದ್ದಂತೆಯೇ ಮಾಧ್ಯಮದವರ ಕಣ್ತಪ್ಪಿಸಿ ಸಚಿವರು ನೇರವಾಗಿ ಬೆಂಗಳೂರಿಗೆ ನಿರ್ಗಮಿಸಿದರು.

‘ಸಚಿವರು ಜಿಂದಾಲ್‌ನಿಂದ ವಿಶೇಷ ವಿಮಾನದಲ್ಲಿ ತೆರಳಬೇಕಿತ್ತು, ಆದರೆ ವಿಶೇಷ ವಿಮಾನ ರದ್ದಾಗಿದ್ದರಿಂದ ಬೆಂಗಳೂರಿನಲ್ಲಿ ತುರ್ತು ಸಭೆ ಇರುವ ಕಾರಣ ರಸ್ತೆ ಮೂಲಕ ಸಂಚರಿಸಬೇಕಾಗಿದೆ, ಹೀಗಾಗಿ ಪತ್ರಿಕಾಗೋಷ್ಠಿ ರದ್ದುಗೊಂಡಿದೆ’ ಎಂದು ಸಚಿವರ ಮಾಧ್ಯಮ ಸಲಹೆಗಾರರು ಬಳಿಕ ಸಂದೇಶ ರವಾನಿಸಿದರು.

ಕಳೆದ ವರ್ಷವೂ ಇದೇ ರೀತಿಯ ಪ್ರಸಂಗ ನಡೆದಿತ್ತು. ಸಚಿವರು ಜಿಲ್ಲೆಗೆ ಬರುವುದೇ ಎರಡು, ಮೂರು ತಿಂಗಳಿಗೆ ಒಮ್ಮೆ, ಆಗಲೂ ಈ ಭಾಗದ ಜನರ ಸಮಸ್ಯೆಗಳಿಗೆ ಕಿವಿಗೊಡದೆ ಹೋದರೆ ಹೇಗೆ ಎಂದು ಆಕ್ಷೇಪ ವ್ಯಕ್ತವಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.