ಹೊಸಪೇಟೆ: ರಾಜ್ಯ ಸರ್ಕಾರ ಒಳಮೀಸಲಾತಿಯನ್ನು ಜಾರಿಗೆ ತರಬಾರದು ಎಂದು ಆಗ್ರಹಿಸಿ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯಗಳನ್ನು ಒಳಗೊಂಡ ವಿಜಯನಗರ ಜಿಲ್ಲಾ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಬುಧವಾರ ಇಲ್ಲಿ ಪ್ರತಿಭಟನೆ ನಡೆಯಿತು.
ಟಿ.ಬಿ.ಡ್ಯಾಂ ರಸ್ತೆಯು ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದ ಬಳಿಯಿಂದ ಆರಂಭವಾದ ಕೈಯಲ್ಲಿ ಪೊರಕೆ ಹಿಡಿದ, ಅರೆಬೆತ್ತಲೆ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುನೀತ್ ರಾಜ್‌ಕುಮಾರ್ ವೃತ್ತಕ್ಕೆ ಬಂತು. ಅಲ್ಲಿ ರಸ್ತೆ ತಡೆ ನಡೆಸಲಾಯಿತು ಹಾಗೂ ಕೆಲವರು ತಲೆ ಬೋಳಿಸಿಕೊಂಡು, ಲಬೊ ಲಬೋ ಬಾಯಿ ಬಡಿದುಕೊಂಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು.
ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ದೂಪದಹಳ್ಳಿ ತಾಂಡಾ ಮಠದ ಶಿವಪ್ರಕಾಶ್ ಸ್ವಾಮೀಜಿ, ಮುಖಂಡರಾದ ಲಾಲ್ಯಾನಾಯ್ಕ್, ದೊಡ್ಡರಾಮಣ್ಣ ಅವರ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಯಿತು.
ನ್ಯಾಯಮೂರ್ತಿ ನಾಗಮೋಹನ್‌ದಾಸ್ ವರದಿಯಲ್ಲಿ ದೋಷಗಳಿವೆ, ಬಂಜಾರ, ಬೋವಿ, ಕೊರಚ, ಕೊರಮ ಮತ್ತಿತರ ಸಮುದಾಯಗಳಿಗೆ ಅನ್ಯಾಯವಾಗಿದೆ. ಈ ವರದಿಯನ್ನು ಏಕಪಕ್ಷೀಯವಾಗಿ ಅಂಗೀಕರಿಸಬಾರದು ಎಂದು ಒಕ್ಕೊರಲ ಒತ್ತಾಯ ಮಾಡಲಾಯಿತು.
ಒಳ ಮೀಸಲಾತಿಯಲ್ಲಿ ಬಲಗೈ, ಎಡಗೈ ಸಮುದಾಯಕ್ಕೆ ತಲಾ ಶೇ 6ರಷ್ಟು ಮೀಸಲಾತಿ ನೀಡಲಾಗಿದೆ, ಇನ್ನುಳಿದ 59 ಜಾತಿಗಳಿಗೆ ಕೇವಲ ಶೇ 5ರಷ್ಟು ಮೀಸಲಾತಿ ನೀಡಲಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಸಂಪುಟ ಒಪ್ಪಿರುವ ಈ ಒಳಮೀಸಲಾತಿಯನ್ನು ಮುಖ್ಯಮಂತ್ರಿ ಅವರು ಕೂಡಲೇ ವಾಪಸ್ ಪಡೆಯಬೇಕು. ಇಲ್ಲವಾದರೆ ಪ್ರತಿಭಟನೆ ತೀವ್ರಗೊಳಿಸಲಾಗುವುದು ಎಂದು ಮುಖಂಡರು ಎಚ್ಚರಿಸಿದರು.
ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ವಿವಿಧ ಸಮುದಾಯಗಳ ಜನರು ಬಂದಿದ್ದರು. ಪುನೀತ್ ರಾಜ್‌ಕುಮಾರ್ ವೃತ್ತದಲ್ಲಿ ಮಾನವ ಸರಪಳಿ ರಚಿಸಲಾಯಿತು. ಈ ವೃತ್ತದಲ್ಲಿ ಸುಮಾರು 15 ನಿಮಿಷಗಳ ಕಾಲ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಕೊನೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ ಅವರು ಸ್ಥಳಕ್ಕೆ ಬಂದು ಮನವಿ ಸ್ವೀಕರಿಸಿದರು. ಅಂಬೇಡ್ಕರ್ ವೃತ್ತದ ವರೆಗೆ ಮೆರವಣಿಗೆ ಸಾಗಿತು ಹಾಗೂ ಅಲ್ಲಿ ಪ್ರತಿಭಟನೆ ಕೊನೆಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.