ADVERTISEMENT

ತಾಳ್ಮೆಯ ಪ್ರತಿಫಲದಿಂದ ಶ್ರೀರಾಮುಲುಗೆ ಬಳ್ಳಾರಿ ಉಸ್ತುವಾರಿ: ಆನಂದ್ ಸಿಂಗ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 11:18 IST
Last Updated 7 ಫೆಬ್ರುವರಿ 2022, 11:18 IST
ಶ್ರೀರಾಮುಲು
ಶ್ರೀರಾಮುಲು   

ಹೊಸಪೇಟೆ (ವಿಜಯನಗರ): ‘ತಾಳ್ಮೆಯ ಪ್ರತಿಫಲದಿಂದ ಸಾರಿಗೆ ಸಚಿವ ಬಿ. ಶ್ರೀರಾಮುಲು ಅವರಿಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸ್ಥಾನ ಸಿಕ್ಕಿದೆ’ ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ತಿಳಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ಏರ್ಪಡಿಸಿದ್ದ ‘ಆತ್ಮನಿರ್ಭರ ಅರ್ಥವ್ಯವಸ್ಥೆ’ ಕುರಿತ ಸಭೆಯಲ್ಲಿ ಅವರು ಮಾತನಾಡಿದರು.

ತಾಳಿದವನು ಬಾಳಿಯಾನು ಎಂಬ ಗಾದೆಗೆ ಶ್ರೀರಾಮುಲು ಉದಾಹರಣೆ. ಕೆಲವರು ತಮಗೆ ಬೇಕಾದ ಸ್ಥಾನಮಾನ ಸಿಗದೇ ಹೋದರೆ ಪಕ್ಷ ವಿರೋಧಿ ಚಟುವಟಿಕೆ, ಗುಂಪುಗಾರಿಕೆಯಲ್ಲಿ ತೊಡಗುತ್ತಾರೆ. ಆದರೆ,ಪಕ್ಷದ ತೀರ್ಮಾನಕ್ಕೆ ಬದ್ಧರಾಗಿ ನಡೆದುಕೊಂಡಿದ್ದಾರೆ ಎಂದರು.

ADVERTISEMENT

ಅವಳಿ ಜಿಲ್ಲೆಗಳಾದ ಬಳ್ಳಾರಿ–ವಿಜಯನಗರ ಎಂದಿಗೂ ಒಂದೇ ನಾಣ್ಯದ ಎರಡು ಮುಖಗಳಿದಂತೆ. ಜಿಲ್ಲೆಯಾದ ನಂತರ ಯಾವುದೇ ಬದಲಾವಣೆ ಆಗುವುದಿಲ್ಲ. ಆಡಳಿತಾತ್ಮಕವಾಗಿ ಮಾತ್ರ ಬದಲಾವಣೆ ಆಗಿದೆ ಅಷ್ಟೇ ಎಂದರು‌.

ಪಕ್ಷದ ಬಲವರ್ಧನೆಗೆ ಸಂಘಟನಾ ಕಾರ್ಯದಲ್ಲಿ ತೊಡಗಿಸಿಕೊಂಡು ಬರುವ ಚುನಾವಣೆಯಲ್ಲಿ ಅವಳಿ ಜಿಲ್ಲೆಯ 10 ಕ್ಷೇತ್ರಗಳ ಪೈಕಿ 9ರಲ್ಲಿ ಗೆಲ್ಲುವ ವಿಶ್ವಾಸವಿದೆ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಅವರ ಪಕ್ಷದ ಮುಖಂಡರಲ್ಲೇ ಗೊಂದಲವಿದೆ. ಕಾಂಗ್ರೆಸ್ ಕಾರ್ಯಕರ್ತರನ್ನು ನೋಡಿದರೆ ಅಯ್ಯೋ ಅನಿಸುತ್ತದೆ ಎಂದು ವ್ಯಂಗ್ಯವಾಡಿದರು.

ಸಾರಿಗೆ ಸಚಿವ ಶ್ರೀರಾಮುಲು ಮಾತನಾಡಿ, ಎರಡುಜಿಲ್ಲೆಗಳು ನಮಗೆ ಕಣ್ಣುಗಳಿದ್ದಂತೆ. ಆನಂದ್ ಸಿಂಗ್ ಸಚಿವರಾಗಿ ಒಳ್ಳೆ ಕೆಲಸ ಮಾಡಿದ್ದಾರೆ. ರೈತರಿಗಾಗಿ ನೀರಾವರಿ ಯೋಜನೆ ತಂದಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರಲು ಅವರೇ ಮುಖ್ಯ ಕಾರಣ. ಇಬ್ಬರೂ ಕೂಡಿಕೊಂಡು ಎರಡುಜಿಲ್ಲೆಗಳ ಅಭಿವೃದ್ಧಿಗೆ ಶ್ರಮಿಸುತ್ತೇವೆ. ಕೋವಿಡ್‌ ಇಲ್ಲದಿದ್ದರೆ ಎರಡೂ ಜಿಲ್ಲೆಗಳ ಚಿತ್ರಣವೇ ಬದಲಾಗುತ್ತಿತ್ತು ಎಂದರು.

ಬಿಜೆಪಿ ರಾಜ್ಯ ಮಾಧ್ಯಮ ವಕ್ತಾರ ಮಧು ನರಸಿಂಹರಾವ್, ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ತಂತ್ರಜ್ಞಾನ ಆಧಾರಿತ ಕೃಷಿ ಪದ್ಧತಿಗೆ ಹೆಚ್ಚಿನ ಒತ್ತು ಕೊಟ್ಟಿದೆ. ರಕ್ಷಣಾ ವಲಯಕ್ಕೂ ಆದ್ಯತೆ ಕೊಟ್ಟಿದೆ. ತೆರಿಗೆ ಹಾಕಿಲ್ಲ. ಆದರೆ, ವಿರೋಧ ಪಕ್ಷಗಳು ಟೀಕಿಸುತ್ತಿವೆ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಚನ್ನಬಸವನಗೌಡ ಪಾಟೀಲ ಮಂಡಲ ಅಧ್ಯಕ್ಷ ಬಸವರಾಜ್ ನಾಲತ್ವಾಡ್, ಮುಖಂಡರಾದ ಸಾಲಿ ಸಿದ್ದಯ್ಯ ಸ್ವಾಮಿ, ಕವಿತಾ ಸಿಂಗ್, ವೀರಯ್ಯ ಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.