ADVERTISEMENT

ಪರೀಕ್ಷೆ ಅಕ್ರಮದ ತನಿಖೆಯಲ್ಲಿ ಕಾಂಗ್ರೆಸ್‌ ತಲೆಗಳೇ ಹೆಚ್ಚು ಉರುಳಲಿವೆ: ಕಟೀಲ್‌

​ಪ್ರಜಾವಾಣಿ ವಾರ್ತೆ
Published 2 ಮೇ 2022, 11:15 IST
Last Updated 2 ಮೇ 2022, 11:15 IST
ನಳಿನ್‌ಕುಮಾರ್‌ ಕಟೀಲ್‌
ನಳಿನ್‌ಕುಮಾರ್‌ ಕಟೀಲ್‌   

ಹೊಸಪೇಟೆ (ವಿಜಯನಗರ): ‘ಪಿಎಸ್‌ಐ ಪರೀಕ್ಷೆ ಅಕ್ರಮದ ತನಿಖೆಯಲ್ಲಿ ಕಾಂಗ್ರೆಸ್‌ ತಲೆಗಳೇ ಹೆಚ್ಚು ಉರುಳುತ್ತವೆ. ಆದರೆ, ಕಾಂಗ್ರೆಸ್‌ನವರು ಶುದ್ಧಹಸ್ತರಂತೆ ಆರೋಪ ಮಾಡುತ್ತಿದ್ದಾರೆ. ಕಲ್ಲು ಹೊಡೆದು ಓಡುವ ಗುಣ ಕಾಂಗ್ರೆಸ್ಸಿಗರದು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಹೇಳಿದರು.

ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎನ್ನುವುದು ಗೊತ್ತಾದ ಕೂಡಲೇ ನಮ್ಮ ಸರ್ಕಾರ ಸಿಐಡಿಯಿಂದ ತನಿಖೆ ಆರಂಭಿಸಿತು. ಈಗಾಗಲೇ ಅನೇಕರನ್ನು ಬಂಧಿಸಲಾಗಿದೆ. ಪಾರದರ್ಶಕವಾಗಿ ತನಿಖೆ ನಡೆಯುತ್ತಿದ್ದು, ನಮ್ಮ ಪಕ್ಷವಾಗಲಿ, ಸರ್ಕಾರವಾಗಲಿ ಹಸ್ತಕ್ಷೇಪ ಮಾಡುತ್ತಿಲ್ಲ. ಯಾರು, ಎಷ್ಟೇ ಪ್ರಭಾವಿಶಾಲಿಯಾಗಿದ್ದರೂ ಬಿಡುವುದಿಲ್ಲ ಎಂದು ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಾಂಗ್ರೆಸ್‌ ಅಧಿಕಾರದಲ್ಲಿದ್ದಾಗ ಹಾಸಿಗೆ, ಹಾಸ್ಟೆಲ್‌ ಸೇರಿದಂತೆ ಹತ್ತಾರು ಹಗರಣಗಳು ನಡೆದಿದ್ದವು. ಯಾವುದರ ಬಗ್ಗೆಯೂ ತನಿಖೆ ನಡೆಸಿರಲಿಲ್ಲ. ಎಲ್ಲ ಮುಚ್ಚಿ ಹಾಕಿದ್ದರು. ನಾವು ಕಾಂಗ್ರೆಸ್‌ನಂತೆ ಹಗರಣಗಳನ್ನು ಮುಚ್ಚಿ ಹಾಕುತ್ತಿಲ್ಲ. ತನಿಖೆ ನಡೆಸುತ್ತಿದ್ದೇವೆ. ಪರೀಕ್ಷೆ ಅಕ್ರಮದಲ್ಲಿ ಕಾಂಗ್ರೆಸ್ಸಿನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ನಮ್ಮವರ ತಲೆಗಳು ಉರುಳುತ್ತವೆ ಎಂಬ ಭಯದಿಂದ ಗೊಂದಲಕಾರಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದು ಆರೋಪಿಸಿದರು.

ADVERTISEMENT

ನಮ್ಮ ಪಕ್ಷ ವಿಭಿನ್ನ, ವಿಶಿಷ್ಟವಾದುದು. ಅದು ನಿಂತ ನೀರಲ್ಲ ಎಂಬ ದೃಷ್ಟಿಕೋನದಿಂದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರು ಪಕ್ಷದಲ್ಲಿನ ಬದಲಾವಣೆ ಕುರಿತು ಮಾತುಗಳನ್ನಾಡಿದ್ದಾರೆ. ಆದರೆ, ಸದ್ಯ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮುಂದಿನ ವಿಧಾನಸಭೆ ಚುನಾವಣೆ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದರು.

ಸಚಿವ ಎಂ.ಟಿ.ಬಿ. ನಾಗರಾಜ್‌ ಅವರು ಬಿಜೆಪಿ ಪಕ್ಷಕ್ಕೆ ಸೇರಿ ತಪ್ಪು ಮಾಡಿದೆ ಎಂದು ಎಲ್ಲೂ ಹೇಳಿಲ್ಲ. ಒಂದೇ ಪಕ್ಷದಲ್ಲಿ ಇರಬೇಕಿತ್ತು ಎಂದಿದ್ದಾರೆ. ಜೊತೆಗೆ ಕಾಂಗ್ರೆಸ್‌ನಲ್ಲಿರುವ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ. ಕಾಂಗ್ರೆಸ್‌ ಈ ದೇಶದಲ್ಲಿ ಅಧಿಕಾರದಲ್ಲಿದ್ದಾಗ ಅತಿ ಹೆಚ್ಚು ಕೋಮುಗಲಭೆ, ಭಯೋತ್ಪಾದಕ ಕೃತ್ಯ, ನಕ್ಸಲ್‌ ಚಟುವಟಿಕೆ, ಭ್ರಷ್ಟಾಚಾರ ನಡೆದಿವೆ. ಆದರೆ, ಕೆಲವರು ರಾಜಕೀಯ ಪ್ರೇರಿತವಾಗಿ ಪ್ರಧಾನಿಗೆ ಪತ್ರ ಬರೆದು, ಕೋಮುಗಲಭೆ ನಿಯಂತ್ರಿಸುವಂತೆ ಸಲಹೆ ಮಾಡಿದ್ದಾರೆ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.