ADVERTISEMENT

ವಿಜಯನಗರ: ನೂತನ ಜಿಲ್ಲಾಧಿಕಾರಿ ಕವಿತಾ ಎಸ್‌.ಮನ್ನಿಕೇರಿ ಅಧಿಕಾರ ಸ್ವೀಕಾರ

ರಸ್ತೆ, ಕುಡಿಯುವ ನೀರು, ಆರೋಗ್ಯಕ್ಕೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 7:24 IST
Last Updated 10 ಸೆಪ್ಟೆಂಬರ್ 2025, 7:24 IST
   

ಹೊಸಪೇಟೆ (ವಿಜಯನಗರ): ನೂತನ ವಿಜಯನಗರ ಜಿಲ್ಲೆಯ ನಾಲ್ಕನೇ ಜಿಲ್ಲಾಧಿಕಾರಿಯಾಗಿ ಕವಿತಾ ಎಸ್‌.ಮನ್ನಿಕೇರಿ ಅವರು ಬುಧವಾರ ಇಲ್ಲಿ ನಿರ್ಗಮಿತ ಡಿ.ಸಿ ಎಂ.ಎಸ್‌.ದಿವಾಕರ್ ಅವರಿಂದ ಅಧಿಕಾರ ವಹಿಸಿಕೊಂಡರು.

‘ರಸ್ತೆ, ಕುಡಿಯುವ ನೀರು, ಆರೋಗ್ಯಕ್ಕೆ ಮೊದಲ ಆದ್ಯತೆ ಕೊಟ್ಟು ಕೆಲಸ ಮಾಡಲಾಗುವುದು. ಜಿಲ್ಲೆಯಲ್ಲಿ ಆದ್ಯತೆಯ ಮೇಲೆ ಏನೇನು ಕೆಲಸಗಳು ಆಗಬೇಕು ಎಂಬುದನ್ನು ತಿಳಿದುಕೊಂಡು ಅದರ ಪ್ರಕಾರ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗುವುದು’ ಎಂದು ಅಧಿಕಾರ ವಹಿಸಿಕೊಂಡ ಬಳಿಕ ಕವಿತಾ ಅವರು ಮಾಧ್ಯಮದವರಿಗೆ ತಿಳಿಸಿದರು.

‘ಬಳ್ಳಾರಿಯಿಂದ ವಿಭಜನೆಗೊಂಡು ಹೊಸ ಜಿಲ್ಲೆಯಾಗಿ ನಾಲ್ಕು ವರ್ಷಗಳಾದರೂ 37 ಇಲಾಖೆಗಳ ಕಚೇರಿಗಳು ಇಲ್ಲಿ ಸೃಜನೆಗೊಂಡಿಲ್ಲ. ಎಲ್ಲೆಲ್ಲಿ  ನಿವೇಶನ ಮತ್ತು ಕಟ್ಟಡ ಲಭ್ಯ ಇದೆ ಎಂಬುದನ್ನು ನೋಡಿಕೊಂಡು ಹಂತ ಹಂತವಾಗಿ ಎಲ್ಲ ಇಲಾಖೆಗಳನ್ನು ಇಲ್ಲಿಗೆ ತರುವ ಪ್ರಯತ್ನ ಮಾಡಲಾಗುವುದು’ ಎಂದು ಅವರು ಭರವಸೆ ನೀಡಿದರು.

ADVERTISEMENT

ಅಧಿಕಾರ ವಹಿಸಿಕೊಂಡ ತಕ್ಷಣ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್‌ ಅವರಿಗೆ ಕರೆ ಮಾಡಿದ ಕವಿತಾ ಅವರು ತಾವು ಕರ್ತವ್ಯಕ್ಕೆ ಹಾಜರಾಗಿದ್ದನ್ನು ತಿಳಿಸಿದರು. ಸಚಿವರು ಶುಭ ಕೋರಿದರು.

ದೇವಸ್ಥಾನಕ್ಕೆ ಭೇಟಿ: ವೈಕುಂಠ ಅತಿಥಿಗೃಹದಲ್ಲಿ ತಂಗಿದ್ದ  ಡಿ.ಸಿ ಕವಿತಾ ಅವರು ಅಧಿಕಾರ ವಹಿಸಿಕೊಳ್ಳಲು ಜಿಲ್ಲಾಧಿಕಾರಿ ಕಚೇರಿಗೆ ಬರುವುದಕ್ಕೆ ಮೊದಲಾಗಿ ನಗರದ ವಿನಾಯಕ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ದೇವಸ್ಥಾನದ ಅಧ್ಯಕ್ಷ ಪ್ರಹ್ಲಾದ್ ಭೂಪಾಳ್‌ ಹಾಗೂ ಇತರರು ಬರಮಾಡಿಕೊಂಡು ಅರ್ಚಕರಿಂದ ವಿಶೇಷ ಪ್ರಾರ್ಥನೆ ಮಾಡಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಉಪವಿಭಾಗಾಧಿಕಾರಿ ಪಿ.ವಿವೇಕಾನಂದ, ತಹಶೀಲ್ದಾರ್ ಶ್ರುತಿ ಎಂ.ಎಂ. ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.