ADVERTISEMENT

ಅಲೆಮಾರಿಗಳಿಗೆ ಕಾಯಕ ನಗರದಲ್ಲೇ ನಿವೇಶನ

ಅಲೆಮಾರಿ ಅಭಿವೃದ್ಧಿ ನಿಮಗದ ಅಧ್ಯಕ್ಷೆ ಪಲ್ಲವಿ ಭರವಸೆ: ಸ್ಥಳಕ್ಕೆ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2025, 4:33 IST
Last Updated 19 ಆಗಸ್ಟ್ 2025, 4:33 IST
ಹೂವಿನಹಡಗಲಿಯ ಕಾಯಕ ನಗರಕ್ಕೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಭೇಟಿ ನೀಡಿ, ಅಲೆಮಾರಿ ಜನರ ಅಹವಾಲು ಆಲಿಸಿದರು
ಹೂವಿನಹಡಗಲಿಯ ಕಾಯಕ ನಗರಕ್ಕೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಭೇಟಿ ನೀಡಿ, ಅಲೆಮಾರಿ ಜನರ ಅಹವಾಲು ಆಲಿಸಿದರು   

ಹೂವಿನಹಡಗಲಿ: ‘ಪಟ್ಟಣದ ಕಾಯಕ ನಗರ ಹಿಂಭಾಗದ ಬಯಲಿನಲ್ಲಿ ದಶಕದಿಂದ ಜೋಪಡಿ ಕಟ್ಟಿಕೊಂಡು ನೆಲೆಸಿರುವ 44 ಅಲೆಮಾರಿ ಕುಟುಂಬಗಳಿಗೆ ಅದೇ ಸ್ಥಳದಲ್ಲಿ ನಿವೇಶನ ಕಲ್ಪಿಸಲು ಆದ್ಯತೆ ನೀಡುತ್ತೇವೆ’ ಎಂದು ಪರಿಶಿಷ್ಟ ಜಾತಿ, ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜಿ. ಪಲ್ಲವಿ ಭರವಸೆ ನೀಡಿದರು.

ಪಟ್ಟಣದ ಕಾಯಕ ನಗರದಲ್ಲಿ ಸೋಮವಾರ ಅಲೆಮಾರಿ ಸಮುದಾಯ ವಾಸಿಸುವ ಸ್ಥಳ ಪರಿಶೀಲನೆ ಬಳಿಕ ಕುಂದುಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

‘ದಶಕಗಳಿಂದ ಬದುಕಿನ ಭದ್ರತೆ ಇಲ್ಲದೇ ತೀರಾ ಸಂಕಷ್ಟದಲ್ಲಿ ಜೀವನ ನಡೆಸುತ್ತಿರುವ ಅವಕಾಶ ವಂಚಿತ ಅಲೆಮಾರಿ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸುವುದು ಮೊದಲ ಆದ್ಯತೆಯಾಗಿದೆ. ಅಲೆಮಾರಿಗಳ ಧ್ವನಿಯಾಗಿ ಸರ್ಕಾರದ ಗಮನ ಸೆಳೆಯುವೆ’ ಎಂದರು.

ADVERTISEMENT

‘ಸಣ್ಣ ಕೈಗಾರಿಕೆ ಇಲಾಖೆ ಈ ಹಿಂದೆ 17-38 ಎಕರೆ ಭೂಮಿ ಖರೀದಿಸಿ ಕರ ಕುಶಲಕರ್ಮಿಗಳ ವಸತಿ ಮತ್ತು ಕಾರ್ಯಾಗಾರ ನಿರ್ಮಿಸಿಕೊಟ್ಟಿದೆ. ವಿನ್ಯಾಸದಲ್ಲಿ ಇನ್ನೂ ಉಳಿದಿರುವ ಭೂಮಿಯನ್ನು ಕೈಗಾರಿಕೆ ಇಲಾಖೆಯಿಂದ ಕಂದಾಯ ಇಲಾಖೆಗೆ ಪಡೆದು ನಿವೇಶನಗಳನ್ನಾಗಿ ಪರಿವರ್ತಿಸಿ, ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ಆ.20ರಂದು ನಡೆಯಲಿರುವ ಪ್ರಗತಿ ಪರಿಶೀಲನೆ ಸಭೆಗೆ ಈ ಕುರಿತು ಪ್ರಸ್ತಾವ ಸಿದ್ಧಪಡಿಸಿಕೊಂಡು ಬನ್ನಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಿಗಮದ ನಿಕಟಪೂರ್ವ ಅಧಿಕಾರಿ ಆನಂದಕುಮಾರ್ ಏಕಲವ್ಯ ಮಾತನಾಡಿ, ‘ಇಲಾಖೆಗಳ ಸಮನ್ವಯ ಕೊರತೆಯಿಂದ ಸಮಸ್ಯೆ ಜಟಿಲವಾಗಿದೆ. ಸಂಬಂಧಿಸಿದ ಕಡತಕ್ಕೆ ಸರ್ಕಾರದ ಅನುಮೋದನೆ ಬೇಕಿರುವುದರಿಂದ ನಿಗಮದ ಅಧ್ಯಕ್ಷರು ಅದನ್ನು ಕೈಗೆತ್ತಿಕೊಳ್ಳಲಿದ್ದಾರೆ. ಭೂಮಿ ಅಲೆಮಾರಿಗಳ ಹಕ್ಕು, ಅವರನ್ನು ಬೇರೆಡೆ ಸ್ಥಳಾಂತರಿಸದೇ ನೆಲೆಸಿರುವ ಜಾಗದಲ್ಲೇ ನಿವೇಶನ ಕಲ್ಪಿಸಿಕೊಡುವ ವ್ಯವಸ್ಥೆ ಮಾಡುತ್ತೇವೆ’ ಎಂದರು.

ಪುರಸಭೆ ಅಧ್ಯಕ್ಷ ಗಂಟಿ ಜಮಾಲ್ ಬೀ, ಉಪಾಧ್ಯಕ್ಷ ಸೊಪ್ಪಿನ ಮಂಜುನಾಥ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಯಲ್ಲೇಶ ಆನಂದ ಕಾಳೆ, ತಹಶೀಲ್ದಾರ್ ಜಿ. ಸಂತೋಷಕುಮಾರ್, ತಾಲ್ಲೂಕು ಪಂಚಾಯಿತಿ ಇಒ ಜಿ.ಪರಮೇಶ್ವರಪ್ಪ, ಸಮಾಜ ಕಲ್ಯಾಣಾಧಿಕಾರಿ ಆನಂದ ಡೊಳ್ಳಿನ, ಮುಖ್ಯಾಧಿಕಾರಿ ಎಚ್.ಇಮಾಮ್‌ಸಾಹೇಬ್, ಬಿಇಒ ಮಹೇಶ ಪೂಜಾರ, ಸಿಡಿಪಿಒ ಬಿ.ರಾಮನಗೌಡ, ಜೆಸ್ಕಾಂ ಎಇಇ ಕೇದಾರನಾಥ, ಸಮುದಾಯದ ಮುಖಂಡರಾದ ವೈ. ಶಿವಕುಮಾರ್, ಯು.ಹನುಮಂತಪ್ಪ, ಕಣದಾಳ ಶಂಕ್ರಪ್ಪ ಇದ್ದರು.

ಹಾವು ಚೇಳು ಕಾಟ

ಮಳೆಗಾಲದಲ್ಲಿ ಹಾವು ಚೇಳುಗಳು ಜೋಪಡಿಯೊಳಗೆ ಹರಿದು ಬರುತ್ತವೆ. ಸಣ್ಣ ಮಕ್ಕಳನ್ನು ಕಟ್ಟಿಕೊಂಡು ಜೀವಿಸುವುದು ಕಷ್ಟವಾಗಿದೆ. ಊರಲ್ಲಿ ನಿವೇಶನ ಇಲ್ಲದೆ ಸ್ಮಶಾನದಲ್ಲಿ ಅಂತ್ಯ ಸಂಸ್ಕಾರಕ್ಕೂ ಜಾಗ ಸಿಗದೇ ಸಂಕಷ್ಟ ಅನುಭವಿಸಿದ್ದೇವೆ. ನಿವೇಶನ ನೀಡಿದರೆ ತಗಡು ಹಾಕಿಕೊಂಡು ಜೀವನ ಮಾಡುತ್ತೇವೆ. ನಮಗೆ ಅಭದ್ರತೆ ಕಾಡುತ್ತಿದ್ದು ಇಲ್ಲಿಂದ ತೆರವುಗೊಳಿಸಲು ಮುಂದಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’ ಎಂದು ಸಿಂಧೊಳ್ಳಿ ಸಮುದಾಯದ ಹನುಮಂತಪ್ಪ ಗೋಳು ತೋಡಿಕೊಂಡರು. ಮುಖಂಡ ನಂದಿಹಳ್ಳಿ ಮಹೇಂದ್ರ ದೇವಗೊಂಡನಹಳ್ಳಿಯ ಹಂಡಿಜೋಗಿ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರ ನೀಡದಿರುವ ಕುರಿತು ಗಮನ ಸೆಳೆದರು. ‘ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ತೀರ್ಪು ಬರುವವರೆಗೆ ಕಾಯಬೇಕಿದ್ದು ಈ ಕುರಿತು ಜಿಲ್ಲಾಧಿಕಾರಿಗಳ ಜತೆ ಚರ್ಚಿಸುವೆ’ ಎಂದು ಪಲ್ಲವಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.