ಹೂವಿನಹಡಗಲಿ ತಾಲ್ಲೂಕಿನ ಹರವಿ ಸೇತುವೆಯ ಕೆಳಗೆ ಗುರುವಾರ ಶವಕ್ಕಾಗಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಹುಡುಕಾಟ ನಡೆಸುತ್ತಿದ್ದಾಗ ಕುತೂಹಲದಿಂದ ಕಾರ್ಯಾಚರಣೆ ವೀಕ್ಷಿಸಿದ ಸ್ಥಳೀಯ ಜನರು
ಪ್ರಜಾವಾಣಿ ಚಿತ್ರ
ಹೂವಿನಹಡಗಲಿ: ತಾಲ್ಲೂಕಿನ ಹೊಳಲು ಗ್ರಾಮದ ವರ್ತಕ, ಚಿನ್ನಾಭರಣ ಮೌಲ್ಯ ಮಾಪಕ ಮಂಜುನಾಥ ಶೇಜವಾಡಕರ್ (58) ಅಪಹರಣ ಪ್ರಕರಣ ಅವರ ಸಾವಿನಲ್ಲಿ ದಾರುಣ ಅಂತ್ಯ ಕಂಡಿದೆ. ವ್ಯಾಪಾರಿಯನ್ನು ಜೀವಂತವಾಗಿ ಪತ್ತೆಹಚ್ಚುವಲ್ಲಿ ಆಗಿರುವ ವೈಫಲ್ಯ ಕಂಡು ಊರಿನ ಜನ ಮಮ್ಮಲ ಮರುಗಿದ್ದಾರೆ.
ಅಪಹರಣಕಾರರಿಂದ ಸುರಕ್ಷಿತವಾಗಿ ಮರಳಿ ಬರಲಿ ಎಂದು ಪ್ರಾರ್ಥಿಸುತ್ತಿದ್ದ ಅವರ ಒಡನಾಡಿಗಳು, ಸ್ನೇಹಿತರು, ಕುಟುಂಬ ವರ್ಗಕ್ಕೆ ಆಘಾತವಾಗಿದೆ. ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳದ ಸಂಭಾವಿತ ವ್ಯಕ್ತಿ, ಮಿತಭಾಷಿ ಮಂಜುನಾಥ ಶೇಜವಾಡಕರ್ ಅವರ ದಾರುಣ ಸಾವನ್ನು ತಪ್ಪಿಸಬಹುದಿತ್ತು, ಪೊಲೀಸರೇಕೆ ವಿಫಲರಾದರು ಎಂದು ಊರಿನ ಜನ ಕೇಳುತ್ತಿದ್ದಾರೆ.
‘ಯಾರಿಗೂ ಕೇಡು ಬಯಸದ, ನೋವು ಕೊಡದ ಒಳ್ಳೆಯ ವ್ಯಕ್ತಿಗೆ ಈ ರೀತಿಯ ಸಾವು ಬರುತ್ತದೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ನಗರ ಪ್ರದೇಶಗಳಲ್ಲಿ ನಡೆಯುತ್ತಿದ್ದ ಇಂತಹ ಅಪರಾಧ ಕೃತ್ಯ ನಮ್ಮ ಗ್ರಾಮದಲ್ಲೂ ನಡೆದಿರುವುದರಿಂದ ಆತಂಕ ಹೆಚ್ಚಾಗಿದೆ’ ಎಂದು ವೀರಭದ್ರೇಶ್ವರ ಹೋಟೆಲ್ ಮಾಲೀಕ ಕುಮಾರ್ ಹೇಳಿದರು.
ಎಂದಿನಂತೆ ಅ.10ರಂದು ಬೆಳಿಗ್ಗೆ ವಾಕಿಂಗ್‌ಗೆ ತೆರಳಿದ್ದ ಮಂಜುನಾಥ ನಿಗದಿತ ಸಮಯದೊಳಗೆ ಮನೆಗೆ ಬಂದಿರಲಿಲ್ಲ. ಕುಟುಂಬದವರು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಅಂದು ಸಂಜೆ ಮಂಜುನಾಥ ಅವರ ಮೊಬೈಲ್‌ನಿಂದಲೇ ದಾವಣಗೆರೆಯಲ್ಲಿ ವೈದ್ಯೆಯಾಗಿರುವ ಅವರ ಅಕ್ಕ ಡಾ.ಮಂಜುಳಾ ಶೇಜವಾಡಕರ್ ಅವರಿಗೆ ವಾಟ್ಸ್ ಆ್ಯಪ್ ಕರೆ ಮಾಡಿರುವ ಅಪಹರಣಕಾರರು ₹5 ಕೋಟಿಯಿಂದ ಕೊನೆಗೆ ₹5 ಲಕ್ಷಕ್ಕೆ ಇಳಿದಿದ್ದರು.
‘ಹೇಳಿದ ಸ್ಥಳಕ್ಕೆ ಹಣ ತಲುಪಿಸುವ ಕಾರ್ಯಾಚರಣೆ ರೂಪಿಸಿ ಅಪಹರಣಕಾರರನ್ನು ಸೆರೆ ಹಿಡಿಯಬಹುದಿತ್ತು. ಅವರನ್ನು ಬಲೆಗೆ ಬೀಳಿಸುವ ತಂತ್ರಗಾರಿಕೆಯನ್ನು ಪೊಲೀಸರು ಸಕಾಲದಲ್ಲಿ ರೂಪಿಸಿದ್ದರೆ ಜೀವಹಾನಿ ತಪ್ಪಿಸಬಹುದಿತ್ತು’ ಎಂದು ಗ್ರಾಮಸ್ಥರು ಮಾತಾಡಿಕೊಳ್ಳುತ್ತಿದ್ದಾರೆ.
ಯುಟ್ಯೂಬ್ ಪ್ರೇರಣೆ: ಅಪಹರಣಕಾರರು ಮಂಜುನಾಥ ಅವರ ಕೈಕಾಲು ಕಟ್ಟಿ, ಕಣ್ಣು, ಬಾಯಿಗೆ ಪ್ಲಾಸ್ಟರ್ ಅಂಟಿಸಿದ್ದರು. ಹಣದ ಬೇಡಿಕೆ ಈಡೇರದೇ ಇದ್ದಾಗ ಪೊಲೀಸರು ಬೆನ್ನಟ್ಟುವ ಭಯದಲ್ಲಿ ಅವರನ್ನು ಕಾರಿನ ಡಿಕ್ಕಿಯಲ್ಲಿ ಹಾಕಿ ಗಂಟೆಗಟ್ಟಲೇ ಸುತ್ತಾಡಿಸಿದ್ದರು. ಹೀಗೆ ಮಾಡಲು ಅವರಿಗೆ ಪ್ರೇರಣೆಯಾದುದು ಯುಟ್ಯೂಬ್ ಎಂಬುದನ್ನು ಸ್ವತಃ ಅಪಹರಣಕಾರರು ಒಪ್ಪಿಕೊಂಡಿದ್ದಾರೆ. ಇದರ ಜತೆಯಲ್ದಿ ಮೊಬೈಲ್ ಲೊಕೇಶನ್ ಸಿಗದ ರೀತಿಯಲ್ಲಿ ಸಂಪರ್ಕ ಸಾಧಿಸಿ ಚಾಲಕಿತನ ಮೆರೆದಿದ್ದಾರೆ.
ಗ್ರಾಮದಲ್ಲೇ ಮೊಕ್ಕಾ ಹೂಡಿದ್ದ ಎಸ್ಪಿ, ಎಎಸ್ಪಿ: ಅಪಹರಣ ಪ್ರಕರಣದ ತನಿಖೆಗಾಗಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಜಾಹ್ನವಿ, ಎಎಸ್‌ಪಿ ಜಿ.ಮಂಜುನಾಥ ಗ್ರಾಮದಲ್ಲೇ ಮೊಕ್ಕಾಂ ಹೂಡಿ, ಕಾರ್ಯಾಚರಣೆಗೆ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಪರಿಶ್ರಮ ಕೈಗೂಡಲಿಲ್ಲ.
ಇಸ್ಪೀಟ್ ದಂದೆಗೆ ತಡೆ ಇಲ್ಲ
ಆರೋಪಿಗಳಾದ ಮಲ್ಲಿಕಾರ್ಜುನ ಉಜ್ಜಮ್ಮನವರ (27) ಯೋಗೇಶ ಅಂಗಡಿ (25) ಜೂಜು ಮೋಜು ಮಸ್ತಿಯ ಗೀಳು ಅಂಟಿಸಿಕೊಂಡಿದ್ದರು ಎನ್ನಲಾಗಿದೆ. ಹನಿ ನೀರಾವರಿ ಸಾಮಗ್ರಿಯ ಏಜೆನ್ಸಿಯಲ್ಲಿ ನಷ್ಟ ಅನುಭವಿಸಿದ್ದ ಮಲ್ಲಿಕಾರ್ಜುನ ಇಸ್ಪೀಟ್ ಜೂಜಾಟದಲ್ಲೂ ಲಕ್ಷಾಂತರ ಹಣ ಕಳೆದುಕೊಂಡಿದ್ದ ಎನ್ನಲಾಗಿದೆ. ಇದಕ್ಕಾಗಿ ಶ್ರೀಮಂತ ವ್ಯಕ್ತಿಯನ್ನು ಅಪಹರಿಸಿ ಹಣ ದೂಚುವ ಕೃತ್ಯಕ್ಕೆ ಕೈ ಹಾಕಿದ ಎನ್ನಲಾಗಿದೆ. ಯೋಗೀಶ್ ಸಹವಾಸ ದೋಷದಿಂದ ಕೆಟ್ಟ ಹಾದಿ ತುಳಿದಿದ್ದ ಎಂದು ಸ್ಥಳೀಯರು ಹೇಳುತ್ತಾರೆ. ‘ಗ್ರಾಮದಲ್ಲಿ ದೊಡ್ಡ ಮಟ್ಟದಲ್ಲಿ ಇಸ್ಪೀಟ್ ಜೂಜಾಟ ನಡೆಯುತ್ತಿರುವುದು ಇಂತಹ ದುಷ್ಕೃತ್ಯಗಳಿಗೆ ಕಾರಣ’ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.