ADVERTISEMENT

ವೇತನ ಪರಿಷ್ಕರಣೆ, ಹಿಂಬಾಕಿ ಪಾವತಿಗೆ ಆಗ್ರಹಿಸಿ ಮುಷ್ಕರ: 5ರಿಂದ ಬಸ್‌ ಓಡಾಟ ಇಲ್ಲ

​ಪ್ರಜಾವಾಣಿ ವಾರ್ತೆ
Published 31 ಜುಲೈ 2025, 8:14 IST
Last Updated 31 ಜುಲೈ 2025, 8:14 IST
   

ಹೊಸಪೇಟೆ (ವಿಜಯನಗರ): ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರಿಗೆ 2024ರ ಜನವರಿ 1ರಿಂದ ವೇತನ ಪರಿಷ್ಕರಣೆ ಹಾಗೂ 38 ತಿಂಗಳ ಹಿಂಬಾಕಿ ವೇತನ ಪಾವತಿಗೆ ಆಗ್ರಹಿಸಿ ಆಗಸ್ಟ್ 5ರ ಬೆಳಿಗ್ಗೆ 6ರಿಂದ ಅನಿರ್ದಿಷ್ಟ ಅವಧಿಗೆ ಮುಷ್ಕರ ನಡೆಸಲು ನೌಕರರು ನಿರ್ಧರಿಸಿದ್ದಾರೆ. ಇದರಿಂದ ಸರ್ಕಾರಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳಲಿದೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಹೊಸಪೇಟೆ ವಿಭಾಗದ ಸಂಚಾಲಕ ಜಿ.ಶ್ರೀನಿವಾಸುಲು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಎಲ್ಲಾ ಕಾರ್ಮಿಕ ಸಂಘಟನೆಗಳೂ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ, ನಿಗಮದಲ್ಲಿರುವ ಖಾಸಗಿ ಚಾಲಕರು ಸಹ ಮುಷ್ಕರದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ 5ರಿಂದ ಯಾವ ಬಸ್‌ ಸಹ ರಸ್ರೆಗಿಳಿಯುವುದಿಲ್ಲ ಎಂದರು.

‘ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಸಾರಿಗೆ ನೌಕರರ ಪರವಾಗಿ ಮಾತನಾಡಿದ್ದರು. ಆದರೆ ತಾವೇ ಅಧಿಕಾರದಲ್ಲಿರುವಾಗ ನಮ್ಮ ಬೇಡಿಕೆಗಳನ್ನು ಸಂಪೂರ್ಣ ಕಡೆಗಣಿಸಿದ್ದಾರೆ. 38 ತಿಂಗಳ ಹಿಂಬಾಕಿ ಕೊಡಬೇಕಿಲ್ಲ ಎಂದು ಜುಲೈ 4ರಂದು ನಡೆದ ಸಭೆಯಲ್ಲಿ ಕಡ್ಡಿಮುರಿದಂತೆ ಹೇಳಿಬಿಟ್ಟಿದ್ದಾರೆ. ಅದಕ್ಕಾಗಿಯೇ ಜುಲೈ 15ರಂದೇ ನಾವು ಮುಷ್ಕರದ ನೋಟಿಸ್‌ ನೀಡಿದ್ದು, ಆಗಸ್ಟ್ 5ರಿಂದ ಎಸ್ಮಾ ಜಾರಿಯಲ್ಲಿದ್ದರೂ ಅನಿರ್ದಿಷ್ಟ ಅವಧಿಗೆ ಮುಷ್ಕರ ನಡೆದೇ ತೀರುತ್ತದೆ’ ಎಂದು ಅವರು ಹೇಳಿದರು.

ADVERTISEMENT

‘ಪ್ರತಿ ನಾಲ್ಕು ವರ್ಷಕ್ಕೆ ಒಮ್ಮೆ ವೇತನ ಪರಿಷ್ಕರಣೆ ಆಗಲೇಬೇಕು. 2012 ಮತ್ತು 2016ರಲ್ಲಿ ಸಹ ಎಸ್ಮಾ ಜಾರಿಯಲ್ಲಿದ್ದರೂ ನಾವು ನಮ್ಮ ಹಕ್ಕಿಗಾಗಿ ಮುಷ್ಕರ ನಡೆಸಿದ್ದೆವು. ನಮ್ಮ ಹೋರಾಟ ನ್ಯಾಯಸಮ್ಮತವಾಗಿದ್ದರಿಂದ ನಮ್ಮನ್ನು ಕೆಲಸದಿಂದ ವಜಾ ಮಾಡಲು ಸಾಧ್ಯವಾಗಲಿಲ್ಲ. 2020ರಲ್ಲೂ ವೇತನ ಪರಿಷ್ಕರಣೆ ಆಗಬೇಕಿತ್ತು, ಆದರೆ ಕೋವಿಡ್ ಕಾರಣಕ್ಕೆ ಅದು ಮುಂದಕ್ಕೆ ಹೋಯಿತು ಹಾಗೂ 2023ರ ಫೆಬ್ರುವರಿ 28ರಂದು ವೇತನ ಪರಿಷ್ಕರಣೆಗೆ ಸಮ್ಮತಿ ಸೂಚಿಸಲಾಯಿತು. ಹೀಗಾಗಿ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ಕೊಡಬೇಕಾಗುತ್ತದೆ’ ಎಂದು ಶ್ರೀನಿವಾಸುಲು ತಿಳಿಸಿದರು.

‘2024ರ ಜನವರಿ 1ರಿಂದ ಮತ್ತೊಂದು ವೇತನ ಪರಿಷ್ಕರಣೆ ಆಗಲೇಬೇಕು. ಈಗಾಗಲೇ 18 ತಿಂಗಳು ಕಳೆದುಹೋಗಿದೆ. ಸರ್ಕಾರ ಎರಡೂ ಬೇಡಿಕೆಗಳನ್ನು ಈಡೇರಿಸಲೇಬೇಕು’ ಎಂದು ಅವರು ಹೇಳಿದರು.

ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರಾದ ವಿ.ಕೆ.ಹಿರೇಮಠ, ಪಿ.ರಾಜಶೇಖರ, ನಿರ್ಮಲ್‌ ಕುಮಾರ್, ಅಬ್ದುಲ್ ರಹಿಮಾನ್ ಸಾಬ್‌, ವಾಹಿಂ ಪಾಷಾ, ಹೊಳಿಬಸಪ್ಪ, ಯು.ಸೋಮಶೇಖರ್‌, ಬಸವನಗೌಡ, ಶೇಖರಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.