ADVERTISEMENT

ಕುರುಬ ಸಮಾಜ ಕಡೆಗಣಿಸಿದರೆ ಶಾಸ್ತಿ: ಕುರಿ ಶಿವಮೂರ್ತಿ

ಜಿಲ್ಲಾ ಕುರುಬರ ಸಂಘದ ಸಭೆಯಲ್ಲಿ ಒಮ್ಮತದ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2023, 14:07 IST
Last Updated 31 ಮಾರ್ಚ್ 2023, 14:07 IST
ಹೊಸಪೇಟೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಕುರುಬರ ಸಂಘದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಕುರಿ ಶಿವಮೂರ್ತಿ ಮಾತನಾಡಿದರು 
ಹೊಸಪೇಟೆಯಲ್ಲಿ ಶುಕ್ರವಾರ ನಡೆದ ಜಿಲ್ಲಾ ಕುರುಬರ ಸಂಘದ ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿ ಕುರಿ ಶಿವಮೂರ್ತಿ ಮಾತನಾಡಿದರು    

ಹೊಸಪೇಟೆ (ವಿಜಯನಗರ): ‘ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಸರಿಸುಮಾರು ಐದು ಲಕ್ಷಕ್ಕೂ ಹೆಚ್ಚು ಕುರುಬರ ಜನಸಂಖ್ಯೆಯಿದೆ. ಹತ್ತು ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಈ ಪೈಕಿ ವಿಜಯನಗರ ಕ್ಷೇತ್ರದಲ್ಲಾದರೂ ಸಮಾಜಕ್ಕೆ ಆದ್ಯತೆ ನೀಡಬೇಕು. ಇಲ್ಲವಾದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಶಾಸ್ತಿ ಮಾಡಲಾಗುವುದು’

ನಗರದ ಜಿಲ್ಲಾ ಕುರುಬರ ಸಂಘದ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುರುಬರ ಶೈಕ್ಷಣಿಕ, ಸಾಮಾಜಿಕ ಹಾಗು ರಾಜಕೀಯ ಕುರಿತ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶದಲ್ಲಿ ಮುಖಂಡರು ಮೇಲಿನಂತೆ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಕುರಿ ಶಿವಮೂರ್ತಿ ಮಾತನಾಡಿ, ವಿಜಯನಗರ ಕ್ಷೇತ್ರದಿಂದ ಕುರುಬ ಸಮಾಜದಿಂದ 4 ಜನ ಆಕಾಂಕ್ಷಿಗಳಿದ್ದಾರೆ. ಅವರಲ್ಲಿ ಒಬ್ಬರಿಗಾದರೂ ಟಿಕೆಟ್ ನೀಡಿದರೆ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ. ಇಲ್ಲವಾದರೆ ಬರುವ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಎಚ್ಚರಿಸಿದರು.

ADVERTISEMENT

ಸಮಾಜವನ್ನು ಕಡೆಗಣಿಸಿದರೆ ಬರುವ ದಿನಗಳಲ್ಲಿ ತಾಲ್ಲೂಕುವಾರು, ಜಿಲ್ಲಾವಾರು ಸಮಾವೇಶ ಮಾಡಿ ಅಂತಿಮ ತೀರ್ಮಾನ ಕೈಗೊಂಡು ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಲು ಹಿಂಜರಿಯುವುದಿಲ್ಲ. 1983 ರಲ್ಲಿ ಶಂಕರಗೌಡರು, 1998 ರಲ್ಲಿ ಈ.ಟಿ.ಶಂಬುನಾಥ ಅವರನ್ನು ಬಿಟ್ಟರೆ ಇಲ್ಲಿಯವರೆಗೂ ಕುರುಬ ಸಮಾಜಕ್ಕೆ ಟಿಕೆಟ್ ನೀಡಿಲ್ಲ. ಶೇ 80ರಷ್ಟು ಕುರುಬ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದೆ. ಸಮಾಜವನ್ನು ಮತ್‌ ಬ್ಯಾಂಕ್‌ ಆಗಿ ಕಾಂಗ್ರೆಸ್‌ ಬಳಸಿಕೊಳ್ಳುತ್ತಿದೆ. ಬೆರಳೆಣಿಕೆ ಜನಸಂಖ್ಯೆ ಇರುವ ಸಮುದಾಯಗಳಿಗೆ ಉನ್ನತ ಸ್ಥಾನಮಾನ, ಪಕ್ಷದ ಟಿಕೆಟ್ ನೀಡಿ ಕುರುಬ ಸಮಾಜಕ್ಕೆ ದ್ರೋಹ ಬಗೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಖಂಡ ರಾಜಶೇಖರ ಹಿಟ್ನಾಳ್ ಮಾತನಾಡಿ, ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ 4.75 ಲಕ್ಷ ಜನಸಂಖ್ಯೆ ಇರುವ ಕುರುಬ ಸಮುದಾಯಕ್ಕೆ ಒಂದೇ ಒಂದು ಕ್ಷೇತ್ರದಲ್ಲಿ ಟಿಕೆಟ್ ನೀಡಿಲ್ಲ. 10 ಕ್ಷೇತ್ರದಲ್ಲೂ ಕುರುಬರು ನಿರ್ಣಾಯಕರಾಗಿದ್ದಾರೆ. ಈಗಲಾದರೂ ಹೈಕಮಾಂಡ್ ಸೂಕ್ತ ನಿರ್ಧಾರ ಕೈಗೊಂಡು ಕುರುಬರಿಗೆ ವಿಜಯನಗರ ಕ್ಷೇತ್ರದಲ್ಲಿ ಟಿಕೆಟ್ ನೀಡಲೇಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ಅಯ್ಯಾಳಿ ತಿಮ್ಮಪ್ಪ ಮಾತನಾಡಿ, ಸಮಾಜ ಅಂತ ಬಂದಾಗ ರಾಜಕೀಯ ಬದಿಗಿಟ್ಟು, ಸಮಾಜಕ್ಕಾಗಿ ಧ್ವನಿ ಎತ್ತೋಣ. ಸಮಾಜಕ್ಕೆ ಯಾರೇ ಟಿಕೆಟ್ ನೀಡಲಿ ಒಮ್ಮತದಿಂದ ಕೆಲಸ ಮಾಡೋಣ ಎಂದರು.

ಸಂಘದ ಗೌರವ ಅಧ್ಯಕ್ಷ ಅಯ್ಯಾಳಿ ಮೂರ್ತಿ, ಖಜಾಂಚಿ ಆರ್,ಕೊಟ್ರೇಶ, ಹಗರಿಬೊಮ್ಮನಹಳ್ಳಿ ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಬುಡ್ಡಿ ಬಸವರಾಜ, ಮುಖಂಡರಾದ ರಾಮಚಂದ್ರಗೌಡ, ಎಚ್.ಮಹೇಶ, ಮಾವಿನಹಳ್ಳಿ ವೀರೇಶ, ಪಲ್ಲೇದ ಸಿದ್ದೇಶ, ಗೋಪಾಲಕೃಷ್ಣ, ಬಿಸಾಟಿ ತಾಯಪ್ಪ, ಕೆ.ಎಂ.ಪರಮೇಶ, ದಲ್ಲಾಲಿ ಕುಬೇರ, ರಾಯಪ್ಪ, ಮಲಿಯಪ್ಪ, ಹನುಮಂತಪ್ಪ, ಹಡಗಲಿಯ ವೆಂಕಟೇಶ, ಚೇತನ, ಹರಪನಹಳ್ಳಿಯ ಆನಂದ, ಕೂಡ್ಲಿಗಿಯ ಬಿ.ಬಸವರಾಜ, ಲಕ್ಕಜ್ಜ, ಮಲ್ಲಿಕಾರ್ಜುನ, ಕೊಟ್ಟೂರಿನ ಕಾರ್ತಿಕ, ನಿಜಗುಣ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.