ADVERTISEMENT

ಮೈಲಾರ: ಆದಾಯ ಜೋರು, ಸಮಸ್ಯೆ ನೂರಾರು

ಕೆ.ಸೋಮಶೇಖರ
Published 23 ಡಿಸೆಂಬರ್ 2024, 7:03 IST
Last Updated 23 ಡಿಸೆಂಬರ್ 2024, 7:03 IST
ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರ
ಹೂವಿನಹಡಗಲಿ ತಾಲ್ಲೂಕು ಮೈಲಾರ ಸುಕ್ಷೇತ್ರ   

ಹೂವಿನಹಡಗಲಿ: ಉತ್ತರ ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಮೈಲಾರದಲ್ಲಿ ಮೂಲಸೌಕರ್ಯಗಳ ಕೊರತೆಯಿಂದ ಭಕ್ತರು ಬವಣೆ ಅನುಭವಿಸುವಂತಾಗಿದೆ.

ಪುರಾಣ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರದಲ್ಲಿ ಪ್ರತಿ ವರ್ಷ ಫೆಬ್ರವರಿಯಲ್ಲಿ ಮೈಲಾರಲಿಂಗೇಶ್ವರ ಕಾರಣಿಕ ಮಹೋತ್ಸವ ಜರುಗುತ್ತದೆ. ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಭಕ್ತರು ಇಲ್ಲಿಗೆ ಬರುತ್ತಾರೆ. ಪ್ರತಿ ಹುಣ್ಣಿಮೆ, ಭಾನುವಾರ, ಗುರುವಾರದಂದು ಭಕ್ತರ ದಂಡೇ ಹರಿದು ಬರುತ್ತದೆ.

ಜಿಲ್ಲಾಡಳಿತ ಜಾತ್ರೆಗೆ ಸೀಮಿತವಾಗಿ ಮಾತ್ರ ಮೂಲಸೌಕರ್ಯ ಕಲ್ಪಿಸಿ ಕೈ ತೊಳೆದುಕೊಳ್ಳುತ್ತದೆ. ಸುಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶಾಶ್ವತ ಯೋಜನೆ ರೂಪಿಸದೇ ಇರುವುದರಿಂದ ಹುಣ್ಣಿಮೆ, ವಿಶೇಷ ದಿನಗಳಂದು ಸ್ವಾಮಿ ದರ್ಶನಕ್ಕೆ ಬರುವವರು ನಾನಾ ಸಮಸ್ಯೆ ಅನುಭವಿಸುವಂತಾಗಿದೆ.

ADVERTISEMENT

ಭಕ್ತರು ಸುಕ್ಷೇತ್ರ ಪ್ರವೇಶಿಸುತ್ತಿದ್ದಂತೆಯೇ ಪಾರ್ಕಿಂಗ್ ಕಿರಿಕಿರಿ ಶುರುವಾಗುತ್ತದೆ. ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲದೇ ರಸ್ತೆಯ ಎರಡೂ ಬದಿಯಲ್ಲಿ ಕಿಲೋಮೀಟರ್ ದೂರದವರೆಗೆ ವಾಹನಗಳನ್ನು ನಿಲ್ಲಿಸಬೇಕು. ದ್ವಿಚಕ್ರ ವಾಹನಗಳನ್ನು ಬೀದಿಗಳಲ್ಲಿ, ಸ್ಥಳೀಯರ ಮನೆ ಅಂಗಳದಲ್ಲೇ ನಿಲ್ಲಿಸಬೇಕು. ಅಡ್ಡಾದಿಡ್ಡಿ ನಿಲ್ಲಿಸಿರುವ ವಾಹನಗಳನ್ನು ಹೊರ ತೆಗೆಯುವುದು ಸಾಹಸದ ಕೆಲಸ. ಪಾರ್ಕಿಂಗ್ ಸಮಸ್ಯೆ ಸ್ಥಳೀಯರ ನಿತ್ಯ ಜೀವನದ ಮೇಲೂ ಪರಿಣಾಮ ಬೀರಿದೆ. ಈ ವಿಚಾರವಾಗಿ ಸ್ಥಳೀಯರು, ಭಕ್ತರ ನಡುವೆ ಗಲಾಟೆಗಳೂ ನಡೆದಿವೆ.

ಹುಣ್ಣಿಮೆಯಂದು ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಜನರು ಭಕ್ತಿಭಾವದಿಂದ ಸುಕ್ಷೇತ್ರಕ್ಕೆ ಬರುತ್ತಾರೆ. ದೇವಸ್ಥಾನದಲ್ಲಿ ಸುಗಮ ದರ್ಶನ ದೊರೆಯದೇ ಬೇಸರದಿಂದ ಮರಳುತ್ತಾರೆ. ಇಲ್ಲಿ ವಾಸ್ತವ್ಯಕ್ಕೆ ಸುಸಜ್ಜಿತ ಕೊಠಡಿಗಳಿಲ್ಲ, ಶುದ್ಧ ಕುಡಿಯುವ ನೀರು ಸಿಗುವುದಿಲ್ಲ, ಒಳ್ಳೆಯ ಹೋಟೆಲ್‌ಗಳಿಲ್ಲ, ಸಮರ್ಪಕ ಶೌಚಾಲಯ, ಮೂತ್ರಾಲಯಗಳಿಲ್ಲದೇ ಜನರು ಬಯಲು ಬಹಿರ್ದೆಸೆಗೆ ಹೋಗುವುದರಿಂದ ಸುಕ್ಷೇತ್ರದ ನೈರ್ಮಲ್ಯ ಹಾಳಾಗಿ, ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ಇದೆ.

ಮೈಲಾರಲಿಂಗೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಯ ‘ಎ’ ಗ್ರೇಡ್ ದೇವಾಲಯವಾಗಿದೆ. ಪ್ರತಿವರ್ಷ ₹5 ಕೋಟಿ  ಆದಾಯ ಭಕ್ತರ ಕಾಣಿಕೆಯಿಂದಲೇ ದೇವಾಲಯಕ್ಕೆ ಸಂದಾಯವಾಗುತ್ತದೆ. ‘ದೇಗುಲ ಉತ್ತಮ ಆದಾಯ ಹೊಂದಿದ್ದರೂ, ಸುಕ್ಷೇತ್ರದಲ್ಲಿ ಉತ್ತಮ ಸೌಕರ್ಯಗಳಿಲ್ಲ’ ಎಂದು ಭಕ್ತರು ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಮೈಲಾರಲಿಂಗೇಶ್ವರ ಸ್ವಾಮಿ ದರ್ಶನಕ್ಕೆ ಭಕ್ತರ ನೂಕುನುಗ್ಗಲು

ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಿ:

ಶಾಶ್ವತ ಅಭಿವೃದ್ಧಿ ಯೋಜನೆ ಹಾಗೂ ವಾಹನ ಪಾರ್ಕಿಂಗ್‌ಗಾಗಿ ಅಗತ್ಯ ಜಮೀನು ಸ್ವಾಧೀನಪಡಿಸಿಕೊಳ್ಳಬೇಕು. ದೇವಸ್ಥಾನ ಒತ್ತುವರಿ ತೆರವುಗೊಳಿಸಿ ಭಕ್ತರು ಸುಗಮವಾಗಿ ದರ್ಶನಕ್ಕೆ ತೆರಳುವ ವ್ಯವಸ್ಥೆಯಾಗಬೇಕು. ಅಭಿಷೇಕ ಸೇವೆಗೆ ಪ್ರತ್ಯೇಕ ಪೂಜಾ ಮಂಟಪ, ವಿಶಾಲವಾದ ದಾಸೋಹ ಭವನ ನಿರ್ಮಾಣವಾಗಬೇಕು. ಕಾರಣಿಕ ಮೈದಾನ ಅಭಿವೃದ್ಧಿಯಾಗಬೇಕು. ಭಕ್ತರ ವಾಸ್ತವ್ಯಕ್ಕೆ ಸುಸಜ್ಜಿತ 100 ಕೊಠಡಿಗಳು, ಸ್ನಾನಘಟ್ಟ, ಶೌಚಾಲಯ, ಮೂತ್ರಾಲಯ, ಸುಗಮ ರಸ್ತೆಗಳು ನಿರ್ಮಾಣವಾಗಬೇಕು ಎಂಬುದು ಭಕ್ತರ ಬೇಡಿಕೆಯಾಗಿದೆ.

ದೇವಸ್ಥಾನ ಮುಂಭಾಗ ಇಕ್ಕಟ್ಟಾದ ರಸ್ತೆಯಲ್ಲೇ ವ್ಯಾಪಾರ ಚಟುವಟಿಕೆ
ಮೈಲಾರ ಸುಕ್ಷೇತ್ರದಲ್ಲಿ ಪಾರ್ಕಿಂಗ್ ಅವ್ಯವಸ್ಥೆ
ಮೈಲಾರದಲ್ಲಿ ವಾಹನ ಪಾರ್ಕಿಂಗ್ ನೈರ್ಮಲ್ಯ ಸಮಸ್ಯೆಯಿಂದ ಸ್ಥಳೀಯರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಇಲ್ಲಿನ ಸಮಸ್ಯೆಗಳ ಶಾಶ್ವತ ಪರಿಹಾರಕ್ಕೆ ಸರ್ಕಾರ ಯೋಜನೆ ರೂಪಿಸಬೇಕು
ಎಂ.ಬಿ. ಕೋರಿ ಮೈಲಾರ ನಿವಾಸಿ
ಐತಿಹಾಸಿಕ ಸುಕ್ಷೇತ್ರವನ್ನು ಸರ್ಕಾರ ನಿರ್ಲಕ್ಷಿಸಿರುವುದು ಸರಿಯಲ್ಲ. ಅಭಿವೃದ್ಧಿ ಪ್ರಾಧಿಕಾರ ರಚಿಸಿ ಪ್ರತಿವರ್ಷವೂ ಬಜೆಟ್ ನಲ್ಲಿ ವಿಶೇಷ ಅನುದಾನ ಮೀಸಲಿಡಬೇಕು. ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಬೇಕು
ಈಟಿ ಲಿಂಗರಾಜ ಭಕ್ತರು ಹೂವಿನಹಡಗಲಿ
ಮೈಲಾರಲಿಂಗನ ಪರಂಪರೆ ವಿಶಿಷ್ಟವಾಗಿದೆ. ಈ ಸುಕ್ಷೇತ್ರವನ್ನು ಸರ್ಕಾರ ಮಾದರಿಯಾಗಿ ಅಭಿವೃದ್ಧಿಪಡಿಸದೇ ಜಾತ್ರೆ ಆಚರಣೆಗೆ ಸೀಮಿತವಾಗಿದೆ. ದಿನಂಪ್ರತಿ ಬರುವ ಭಕ್ತರಿಗೆ ಅನಾನುಕೂಲವಾಗಿದೆ
ಪುಟ್ಟಪ್ಪ ತಂಬೂರಿ ಮೈಲಾರ ನಿವಾಸಿ
ಘೋಷಣೆಗೆ ಸೀಮಿತವಾದ ‘ಪ್ರಾಧಿಕಾರ’
2017ರ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕಟಿಸಿದ್ದ ಮೈಲಾರಲಿಂಗೇಶ್ವರ ಹಾಗೂ ದೇವರಗುಡ್ಡ ಅಭಿವೃದ್ಧಿ ಪ್ರಾಧಿಕಾರ ಬರೀ ಘೋಷಣೆಗೆ ಸೀಮಿತವಾದಂತಾಗಿದೆ. ಕೆಲವರು ನ್ಯಾಯಾಲಯ ಮೆಟ್ಟಿಲೇರಿದ್ದರಿಂದ ಪ್ರಕ್ರಿಯೆಗೆ ತಡೆ ಬಿದ್ದಿದೆ. ಉತ್ತರ ಕರ್ನಾಟದ ಕಾಗಿನೆಲೆ ಸವದತ್ತಿ ಹುಲಿಗೆ ಸುಕ್ಷೇತ್ರಗಳಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಿ ಅಭಿವೃದ್ಧಿಗೆ ಒತ್ತು ನೀಡಿರುವ ಸರ್ಕಾರ ಮೈಲಾರ ಕ್ಷೇತ್ರವನ್ನು ನಿರ್ಲಕ್ಷಿಸಿದೆ ಎಂಬ ಮಾತು ಕೇಳಿ ಬರುತ್ತಿದೆ. ಮೈಲಾರ ಮತ್ತು ದೇವರಗುಡ್ಡ ಪ್ರತ್ಯೇಕ ಜಿಲ್ಲೆಗಳ ದೇಗುಲಗಳಾಗಿರುವುದರಿಂದ ಈ ಪ್ರಸ್ತಾವ ಕೈ ಬಿಟ್ಟು ಮೈಲಾರ-ಕುರುವತ್ತಿ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕೆಂಬುದು ಭಕ್ತರ ಒತ್ತಾಸೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.