ಹಗರಿಬೊಮ್ಮನಹಳ್ಳಿ: ವಿಧಾನಸಭಾ ಕ್ಷೇತ್ರದಲ್ಲಿರುವ 17 ಕೆರೆಗಳಿಗೆ ಶಾಶ್ವತ ನೀರು ಕಲ್ಪಿಸುವ ಯೋಜನೆಗೆ ಸಮಗ್ರ ಯೋಜನಾ ವರದಿ (ಡಿಪಿಆರ್) ಸರ್ಕಾರಕ್ಕೆ ಸಲ್ಲಿಕೆಯಾಗಿದ್ದರೂ ಇದುವರೆಗೂ ಕಾಮಗಾರಿ ಆರಂಭಗೊಂಡಿಲ್ಲ, ಬೇಡಿಕೆ ಈಡೇರಿಕೆಗಾಗಿ ಈ ಕುರಿತು ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ‘ಕೃಷಿ ಭೂಮಿ ಉಳಿವಿಗಾಗಿ ನಾವು’ ಸಂಘಟನೆಯ ಸಂಚಾಲಕ ಬುಡ್ಡಿ ಬಸವರಾಜ ಹೇಳಿದರು.
ತಾಲ್ಲೂಕಿನ ಬ್ಯಾಲಾಳು ಗ್ರಾಮದಲ್ಲಿ ಸೋಮವಾರ ಮಠಾಧೀಶರ ಧರ್ಮ ಪರಿಷತ್ ಮತ್ತು ಕೃಷಿಭೂಮಿ ಉಳಿವಿಗಾಗಿ ನಾವು ಸಂಘಟನೆಯ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು.
ಯೋಜನೆಗೆ ಶೀಘ್ರ ಅನುದಾನ ಬಿಡುಗಡೆ ಮಾಡಬೇಕು, ಇಲ್ಲದಿದ್ದಲ್ಲಿ ಕ್ಷೇತ್ರದಲ್ಲಿ ಇರುವ ಎಲ್ಲ ಕೆರೆಗಳ ಅಚ್ಚುಕಟ್ಟು ಪ್ರದೇಶದ ಗ್ರಾಮಗಳಲ್ಲಿ ಸಭೆ ನಡೆಸಿ ಹೋರಾಟದ ತೀರ್ಮಾನ ತೆಗೆದುಕೊಳ್ಳಲಾಗುವುದು, ಬೃಹತ್ ಪ್ರತಿಭಟನೆ ಹಮ್ಮಿಕೊಂಡು ರೈತ ವಿರೋಧಿ ಸರ್ಕಾರದ ವಿರುದ್ಧ ಶಕ್ತಿ ಪ್ರದರ್ಶಿಸಲಾಗುವುದು ಎಂದರು.
2019ರಲ್ಲಿ ಡಿಪಿಆರ್ ಮಾಡಿದಾಗ ₹ 325 ಕೋಟಿ ಅನುದಾನ ಅಂದಾಜಿಸಲಾಗಿತ್ತು, 2025ಕ್ಕೆ ₹ 626 ಕೋಟಿಗೆ ಏರಿಕೆ ಆಗಿದೆ ಎಂದರು. ಎಲ್ಲ ಕೆರೆಗಳಿಗೆ ನೀರು ಹರಿದಲ್ಲಿ ರೈತರ ಬದುಕು ಹಸನಾಗುತ್ತದೆ ಎಂದು ತಿಳಿಸಿದರು.
ಮುಖಂಡ ಮುಟುಗನಹಳ್ಳಿ ಕೊಟ್ರೇಶ್ ಮಾತನಾಡಿ, ಸರ್ಕಾರ ಕೇವಲ ರೈತಪರ ಎಂದು ಹೇಳಿಕೆ ನೀಡಿದರೆ ಸಾಲದು, ದಶಕದ ಹೋರಾಟ ಇರುವ 17 ಕೆರೆಗಳಿಗೆ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಿದರೆ ಮಾತ್ರ ಸರ್ಕಾರಕ್ಕೆ ಬೆಲೆ ಬರುತ್ತದೆ ಎಂದರು, ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯವಾಗುತ್ತದೆ, ರೈತರು ನೂರಾರು ಸಂಖ್ಯೆಯಲ್ಲಿ ಭಾಗವಹಿಸುವ ವಿಶ್ವಾಸವಿದೆ ಎಂದು ತಿಳಿಸಿದರು.
ಹಾಲಸಿದ್ದೇಶ್ವರ ಸ್ವಾಮೀಜಿ ಸಾನ್ನಿಧ್ಯವಹಿಸಿ ಮಾತನಾಡಿದರು, ಪೂಜಾರ್ ಕಡ್ಲೆಪ್ಪ, ಕುರುದಗಡ್ಡಿ ನಾಗಪ್ಪ, ಎಚ್.ಲಕ್ಷ್ಮಣ, ಅಂಬೇಡ್ಕರ್ ಸೇವಾ ಸಮಿತಿ ಜಿಲ್ಲಾಧ್ಯಕ್ಷ ಬ್ಯಾಲಾಳು ಮಂಜುನಾಥ, ಐ.ಎಂ.ಕೊಟ್ರೇಶ್, ಚಂದ್ರಯ್ಯ, ಜ್ಞಾನೇಶ್, ಕೆ.ಎಂ.ವಿಶ್ವನಾಥಯ್ಯ, ಹುಲುಗಪ್ಪ, ಪರಶುರಾಂ, ಬಣಕಾರ ರಮೇಶ್, ಸಿ.ಹನುಮಂತ, ಎಂ.ಮಲ್ಲಿಕಾರ್ಜುನ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.