ADVERTISEMENT

ಹೊಸಪೇಟೆ| ಭೂಮಿ, ವಸತಿಗಾಗಿ ನ.26ರಂದು ಬೆಂಗಳೂರು ಚಲೋ: ಹೋರಾಟ ಸಮಿತಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 9:40 IST
Last Updated 19 ನವೆಂಬರ್ 2025, 9:40 IST
   

ಹೊಸಪೇಟೆ (ವಿಜಯನಗರ): ಈಗಿರುವ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಬಗರ್‌ ಹುಕುಂ ಸಾಗುವಳಿದಾರರಿಗೆ ‘ಒಂದು ಬಾರಿಯ ವಿಲೇವಾರಿ’ ಅಡಿಯಲ್ಲಿ ಭೂಮಿ ಮಂಜೂರಾತಿ ನೀಡಬೇಕು ಎಂದು ಆಗ್ರಹಿಸಿ ನ.26ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹೇಳಿದೆ.

ಸಮಿತಿಯ ರಾಜ್ಯ ಕಾರ್ಯದರ್ಶಿ ಕರಿಯಪ್ಪ ಗುಡಿಮನಿ ಅವರು ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ರಾಜ್ಯದಲ್ಲಿ ಸರ್ಕಾರಿ, ಗೋಮಾಳ, ಖರಾಬ್‌, ಅನಾದೀನ ಇತ್ಯಾದಿ ಹಲವು ಹೆಸರಿನಲ್ಲಿ ಸರ್ಕಾರಿ ಭೂಮಿ ಇದೆ, ಇದನ್ನು ಫಾರಂ ನಂ.50, 53 ಮತ್ತು 57ರಲ್ಲಿ ಅರ್ಜಿ ಸಲ್ಲಿಸಿದವರಿಗೆ ಮಂಜೂರಾತಿ ಮಾಡಲು ಅವಕಾಶ ಇಲ್ಲ, ಹೀಗಾಗಿ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಭೂಮಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

'ಬಗರ್‌ ಹುಕುಂ ಸಾಗುವಳಿದಾರರಿಗೆ ಭೂಮಿಯ ಹಕ್ಕುಪತ್ರ ನೀಡಲು ಭೂಮಿ ಮಂಜೂರಾತಿ ಸಮಿತಿಗಳನ್ನು ಸರ್ಕಾರ ರಚಿಸಿದ್ದರೂ ಕಾಲಕಾಲಕ್ಕೆ ಸರಿಯಾಗಿ ಸಭೆಗಳಾಗದೆ ಮಂಜೂರಾತಿ ಆಗುತ್ತಿಲ್ಲ. ಅರಣ್ಯದ ಹೆಸರಿನಲ್ಲಿರುವ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವರಿಗೆ ಭೂಮಿಯ ಹಕ್ಕನ್ನೇ ನಿರಾಕರಿಸಲಾಗುತ್ತಿದೆ. ಕಳೆದ 50–60 ವರ್ಷಗಳಿಂದ ಸಾಗುವಳಿ ಮಾಡುತ್ತಿರುವವರು ಅರ್ಜಿ ಸಲ್ಲಿಸಿದ್ದರೂ ನಗರ ಮಿತಿ ನೆಪದಲ್ಲಿ ಭೂಮಿ ಮಂಜೂರು ಮಾಡುತ್ತಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ತಕ್ಷಣ ಸರ್ಕಾರ ಸ್ಪಂದಿಸಬೇಕು ಎಂಬ ಕಾರಣಕ್ಕೆ ಈ ಬೆಂಗಳೂರು ಚಲೋ ನಡೆಯುತ್ತಿದೆ. ಜಿಲ್ಲೆಯಿಂದ ಸಾವಿರಕ್ಕೂ ಅಧಿಕ ಮಂದಿ ತೆರಳಲಿದ್ದಾರೆ’ ಎಂದು ಗುಡಿಮನಿ ಹೇಳಿದರು.

ADVERTISEMENT

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ರಾಜ್ಯ ಸಮನ್ವಯ ಸಮಿತಿ ಸದಸ್ಯ ವಸಂತರಾಜ ಕಹಳೆ, ಎದ್ದೇಳು ಕರ್ನಾಟಕ ಸಂಘಟನೆಯ ಜಿಲ್ಲಾ ಸಂಚಾಲಕ ತಿಪ್ಪೇಸ್ವಾಮಿ, ರೈತ ಸಂಘದ ಮಹೇಶ್‌ ದೇವರಮನಿ, ಬಾಣದ ಕೃಷ್ಣ, ಬಾಣದ ಮಾರುತಿ, ಫಯಾಜ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

ಇತರ ಹಕ್ಕೊತ್ತಾಯಗಳು..

* ವಸತಿಹೀನರಿಗೆ ರಾಜ್ಯವ್ಯಾಪಿ ಸಮಗ್ರ ಬೃಹತ್‌ ವಸತಿ ಯೋಜನೆ ಘೋಷಣೆಯಾಗಬೇಕು

* ಅರಣ್ಯ ಕಾಯ್ದೆಯಡಿ ಅರಣ್ಯವಾಸಿಗಳಿಗೂ ನ್ಯಾಯಬದ್ಧ ಹಕ್ಕು ಸಿಗಬೇಕು

* ಬಲವಂತದ ಮತ್ತು ಫಲವತ್ತಾದ ಜಮೀನುಗಳ ಭೂಸ್ವಾಧೀನ ಪ್ರಕ್ರಿಯೆ ರದ್ದಾಗಬೇಕು

* ಬಲಾಢ್ಯರ ಪರವಾದ 2022ರ ಭೂ ತಿದ್ದುಪಡಿ ಕಾಯ್ದೆ ರದ್ದಾಗಬೇಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.