ADVERTISEMENT

14 ತಿಂಗಳ ಸಂಬಳವಿಲ್ಲದೆ ಸಂಕಷ್ಟ:ನೆರವಿನ ನಿರೀಕ್ಷೆಯಲ್ಲಿ ಗ್ರಂಥಾಲಯ ಮೇಲ್ವಿಚಾರಕರು

ವಿಶ್ವನಾಥ ಡಿ.
Published 23 ನವೆಂಬರ್ 2025, 6:40 IST
Last Updated 23 ನವೆಂಬರ್ 2025, 6:40 IST
ಹರಪನಹಳ್ಳಿ ತಾಲ್ಲೂಕಿನ ಕೆ. ಕಲ್ಲಹಳ್ಳಿಯ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಕೇಂದ್ರ
ಹರಪನಹಳ್ಳಿ ತಾಲ್ಲೂಕಿನ ಕೆ. ಕಲ್ಲಹಳ್ಳಿಯ ಗ್ರಾಮ ಪಂಚಾಯಿತಿಯ ಗ್ರಂಥಾಲಯ ಕೇಂದ್ರ   

ಹರಪನಹಳ್ಳಿ: ಗ್ರಾಮ ಪಂಚಾಯಿತಿಯ ಗ್ರಂಥಾಲಯ ಹಾಗೂ ಮಾಹಿತಿ ಹಂಚುವ ಅರಿವು ಕೇಂದ್ರಗಳಲ್ಲಿನ ಮೇಲ್ವಿಚಾರಕರಿಗೆ 14 ತಿಂಗಳಿನಿಂದ ವೇತನ ಸಿಗದೆ, ತೊಂದರೆಗೆ ಸಿಲುಕಿದ್ದಾರೆ.

ವಿಜಯನಗರ ಜಿಲ್ಲೆಯ ಗ್ರಂಥಾಲಯಗಳಲ್ಲಿ ಕೆಲಸ ಮಾಡುತ್ತಿರುವ 134 ಮಂದಿ ಮೇಲ್ವಿಚಾರಕರಿಗೆ ಸರ್ಕಾರ ಮತ್ತು ಗ್ರಾಮ ಪಂಚಾಯಿತಿ ಎರಡು ಹಂತದಲ್ಲಿ ಗೌರವಧನ ಪಾವತಿಸಬೇಕು. ಸರ್ಕಾರವೇ ನೇರವಾಗಿ ಗ್ರಾಮ ಪಂಚಾಯಿತಿ ಖಾತೆಗೆ ₹12,000ವನ್ನು ಪ್ರತಿ ತಿಂಗಳು ಪಾವತಿಸುತ್ತದೆ. ಇದರೊಂದಿಗೆ ಗ್ರಾಮ ಪಂಚಾಯಿತಿ ಸಂಗ್ರಹಿಸುವ ತೆರಿಗೆ ಹಣದಲ್ಲಿ ₹6,201 ಸೇರಿಸುತ್ತದೆ. ಒಟ್ಟು ₹18,201 ಗೌರವಧನವನ್ನು ಜಿಲ್ಲಾ ಪಂಚಾಯಿತಿ ಹಂತದಿಂದ ಪಂಚತಂತ್ರ 2.0 ತಂತ್ರಾಂಶದ ಮೂಲಕ ಪಾವತಿಸಬೇಕೆಂಬ ಆದೇಶವಿದೆ.

ಆದರೆ, ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ತೆರಿಗೆ ಹಣ ಸಂಗ್ರಹವಾಗದ ಕಾರಣ ಗ್ರಂಥಾಲಯ ಸಿಬ್ಬಂದಿಗೆ ಗೌರವಧನ ಕೊಡುವುದು ಕಷ್ಟವಾಗಿದೆ. ತೆರಿಗೆ ಸಂಗ್ರಹಿಸಲು ಪಿಡಿಒಗಳೂ ಪರದಾಡುವಂತಾಗಿದೆ.

ADVERTISEMENT

‘ಪ್ರತಿ ತಿಂಗಳು ಕನಿಷ್ಠ  ವೇತನದೊಂದಿಗೆ ಕಾರ್ಮಿಕ ಇಲಾಖೆಯು ನಿಗದಿಪಡಿಸುವ ವ್ಯತ್ಯಯವಾಗುವ ತುಟ್ಟಿ ಭತ್ಯೆಯನ್ನು ಕಾಲ ಕಾಲಕ್ಕೆ ಪಾವತಿಸುತ್ತದೆ. ಈ ಪೈಕಿ ಸರ್ಕಾರದಿಂದ ಪಾವತಿಯಾಗುವ ₹12,000 ಮೂರು ಅಥವಾ ನಾಲ್ಕು ತಿಂಗಳಿಗೊಮ್ಮೆ ಖಾತೆಗೆ ಜಮೆ ಆಗುತ್ತದೆ. ಇನ್ನೊಂದು ಹಂತದ ₹ 6,201 ವೇತನವನ್ನು ಖಾತೆಗೆ ಪಾವತಿಸಲಾಗುತ್ತಿಲ್ಲ’ ಎಂದು ಗ್ರಂಥಾಲಯ ಮೇಲ್ವಿಚಾರಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರ್. ಗೋಣೆಪ್ಪ ದೂರಿದರು.

‘ಸಮಯಕ್ಕೆ ಸರಿಯಾಗಿ ವೇತನ ಪಾವತಿಯಾಗದ ಪರಿಣಾಮ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ರಜೆ ದಿನಗಳಲ್ಲಿ ಕೂಲಿ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿದೆ’ ಎಂದರು.

ಸರ್ಕಾರ ಎರಡು ಹಂತದಲ್ಲಿ ವೇತನ ಕೊಡದೆ ಒಂದೇ ಕಂತಿನಲ್ಲಿ ಕನಿಷ್ಠ ವೇತನ ಪಾವತಿಸುವ ನಿಯಮ ಜಾರಿ ಮಾಡಬೇಕು
ರಹಮತ್ ವುಲ್ಲಾ ಹಾರಕನಾಳು ಗ್ರಂಥಾಲಯ ಮೇಲ್ವಿಚಾರಕ

ಮೇಲ್ವಿಚಾರಕರಿಗೆ ಹಾಜರಾತಿ ಕಡ್ಡಾಯ

ಗ್ರಂಥಾಲಯಗಳ ಮೇಲ್ವಿಚಾರಕರಿಗೆ ಬಯೊಮೆಟ್ರಿಕ್ ಹಾಜರಾತಿ ಕಡ್ಡಾಯ ಮಾಡಲಾಗಿದೆ. ಮಂಗಳವಾರ ಬುಧವಾರ ಗುರುವಾರ ಮತ್ತು ಶುಕ್ರವಾರ ಬೆಳಿಗ್ಗೆ 9 ಗಂಟೆಯಿಂದ ಮದ್ಯಾಹ್ನ 1 ಗಂಟೆವರೆಗೆ ಹಾಗೂ ಮಧ್ಯಾಹ್ನ 3 ಗಂಟೆಯಿಂದ ಸಂಜೆ 7ರವರೆಗೆ ಕಾರ್ಯನಿರ್ವಹಿಸುತ್ತವೆ. ಶನಿವಾರ ಮತ್ತು ಭಾನುವಾರ ಮಧ್ಯಾಹ್ನ 1ರಿಂದ 2ಗಂಟೆವರೆಗೆ ಊಟದ ಬಿಡುವು ಹೊರತುಪಡಿಸಿ ಸಂಜೆ 6 ಗಂಟೆಗೆ ಕೆಲಸ ಮುಕ್ತಾಯಗೊಳ್ಳುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.