ADVERTISEMENT

ವಿಜಯನಗರ | ‘ಜನಗಣತಿ: ಲಿಂಗಾಯತ ಎಂದೇ ಬರೆಸಿ‘

ಬಸವಸಂಸ್ಕೃತಿ ಅಭಿಯಾನದಲ್ಲಿ ಸೂಚನೆ–ವಿದ್ಯಾರ್ಥಿಗಳೊಂದಿಗೆ ಸಂವಾದ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 3:14 IST
Last Updated 8 ಸೆಪ್ಟೆಂಬರ್ 2025, 3:14 IST
ಹೊಸಪೇಟೆಯಲ್ಲಿ ಭಾನುವಾರ ಬಸವ ಸಂಸ್ಕೃತಿ ಅಭಿಯಾನದ ಭಾಗವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು  –ಪ್ರಜಾವಾಣಿ ಚಿತ್ರ/ ಲವ ಕೆ.
ಹೊಸಪೇಟೆಯಲ್ಲಿ ಭಾನುವಾರ ಬಸವ ಸಂಸ್ಕೃತಿ ಅಭಿಯಾನದ ಭಾಗವಾಗಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು  –ಪ್ರಜಾವಾಣಿ ಚಿತ್ರ/ ಲವ ಕೆ.   

ಹೊಸಪೇಟೆ (ವಿಜಯನಗರ): ರಾಷ್ಟ್ರಮಟ್ಟದಲ್ಲಿ ಜನಗಣತಿ ಶೀಘ್ರ ಆರಂಭವಾಗಲಿದ್ದು, ವೀರಶೈವ ಲಿಂಗಾಯತರೆಲ್ಲ ‘ಇತರೆ’ ಎಂಬ ಕಾಲಂನಲ್ಲಿ ‘ಲಿಂಗಾಯತ’ ಎಂದೇ ನಮೂದಿಸಬೇಕು ಮತ್ತು ಜಾತಿ ಕಾಲಂನಲ್ಲಿ ತಮ್ಮ ಉಪಜಾತಿಗಳನ್ನು ನಮೂದಿಸಬಹುದು ಎಂದು ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷ, ಭಾಲ್ಕಿ ಹಿರೇಮಠ ಸಂಸ್ಥಾನದ ಬಸವಲಿಂಗ ಪಟ್ಟದ್ದೇವರು ಹೇಳಿದರು.

ಇಲ್ಲಿನ ವಿಜಯನಗರ ಕಾಲೇಜ್‌ನಲ್ಲಿ ಭಾನುವಾರ ಬಸವ ಸಂಸ್ಕೃತಿ ಅಭಿಯಾನದ ಅಂಗವಾಗಿ ನಡೆದ ವಿದ್ಯಾರ್ಥಿಗಳೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದರು.

ಜನಗಣತಿ ವೇಳೆ ನಮೂದಿಸುವ ಹಾಳೆಯಲ್ಲಿ ಧರ್ಮದ ಹೆಸರಿನ ಮುಂದೆ ಕೇವಲ ಆರು ಧರ್ಮಗಳ ಹೆಸರಷ್ಟೇ ಇದೆ. ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಕಾಲಂ ಇಲ್ಲ.  ಹಿಂದೂ ಧರ್ಮದ ಹೆಸರಿನ ಮಂದೆ ಲಿಂಗಾಯತರು ನಮೂದಿಸಬಾರದು, ‘ಇತರೆ’ ಎಂಬ ಕಾಲಂನ ಮುಂದೆ ಮಾತ್ರ ‘ಲಿಂಗಾಯತ’ ಎಂದು ನಮೂದಿಸಬೇಕು ಎಂದು ಅವರು ಸೂಚಿಸಿದರು.

ADVERTISEMENT

ವಿದ್ಯಾರ್ಥಿಗಳಿಂದ ಪ್ರಶ್ನೆಗಳ ಸುರಿಮಳೆ: ಹತ್ತಾರು ವಿದ್ಯಾರ್ಥಿಗಳು ಬಸವ ಸಂಸ್ಕೃತಿ, ಬಸವಣ್ಣನವರ ಬೋಧನೆಗಳ ಕುರಿತಂತೆ ಪ್ರಶ್ನೆಗಳನ್ನು ಕೇಳಿದರು. ವೀರಶೈವಕ್ಕೂ, ಲಿಂಗಾಯತಕ್ಕೂ ವ್ಯತ್ಯಾಸ ಏನು ಎಂಬ ಪ್ರಶ್ನೆಯನ್ನು ಮುಕ್ತಾ ಎಂಬ ವಿದ್ಯಾರ್ಥಿನಿ ಕೇಳಿದರು. ಇದಕ್ಕೆ ಉತ್ತರಿಸಿದ ಗದಗ–ಡಂಬಳ ಜಗದ್ಗುರು ತೋಂಟದಾರ್ಯ ಮಠದ ತೋಂಟದ ಸಿದ್ದರಾಮ ಸ್ವಾಮೀಜಿ, ವೀರಶೈವ ಎಂಬುದು ಶೈವ ಪರಂಪರೆಯ ಒಂದು ಶಾಖೆ, ಅದು ಅನಾದಿ ಕಾಲದಿಂದಲೂ ಇರುವಂತದ್ದು. ಆದರೆ 12ನೇ ಶತಮಾನದಲ್ಲಿ ಬಸವಣ್ಣನವರು ಲಿಂಗಧಾರಣೆ ಮಾಡಿ ಪೂಜಿಸಲು ಆರಂಭಿಸಿದ ಬಳಿಕ ಲಿಂಗಾಯತ ಧರ್ಮ ಸ್ಥಾಪನೆಯಾಯಿತು. ಬಳಿಕ ಅದೆಷ್ಟೋ ಮಂದಿ ಲಿಂಗಾಯತ ಧರ್ಮದತ್ತ ಆಕರ್ಷಿತರಾದರು ಎಂದರು.

ಸ್ಥಾವರ ಲಿಂಗ ಪೂಜೆ ಮಾಡುವವರು ವೀರಶೈವರು, ಇಷ್ಟಲಿಂಗ ಧರಿಸಿ ಪೂಜೆ ಮಾಡುವವರು ಲಿಂಗಾಯತರು ಎಂಬುದನ್ನು ಅವರು ಇನ್ನಷ್ಟು ಸರಳವಾಗಿ ತಿಳಿಸಿದರು.

ಕೆಲವು ವಿರಕ್ತ ಮಠಾಧೀಶರು ಬಸವಣ್ಣವರವನ್ನು ಧರ್ಮಗುರು ಎಂದು ಒಪ್ಪಿಕೊಳ್ಳುತ್ತಿಲ್ಲ ಏಕೆ ಎಂದು ಸ್ಫೂರ್ತಿ ಎಂಬ ವಿದ್ಯಾರ್ಥಿನಿ ಕೇಳಿದಾಗ, ಇದು ಅವರ ಅಜ್ಞಾನದ ಕಾರಣದಿಂದಷ್ಟೇ ಎಂದು ಬಸವಲಿಂಗ ಪಟ್ಟದ್ದೇವರು ಉತ್ತರಿಸಿದರು.

ವಿದ್ಯಾಭ್ಯಾಸದ ಹಂತದಲ್ಲಿ ಜಾತಿ ವ್ಯವಸ್ಥೆ ಏಕೆ, ಮೀಸಲಾತಿಯಲ್ಲಿ ತಾರತಮ್ಯ ಮಾಡುತ್ತಿರುವುದು ಏಕೆ ಎಂದು ಚೈತ್ರಾ ಪ್ರಶ್ನಿಸಿದಾಗ, ವೇದಿಕೆಯಲ್ಲಿ ಹಾಜರಿದ್ದ ಸಾಹಿತಿ ಕುಂ.ವೀರಭದ್ರಪ್ಪ ಮಧ್ಯಪ್ರವೇಶಿಸಿ, 12ನೇ ಶತಮಾನದವರೆಗೂ ನಾಡಿನಲ್ಲಿ ಜಾತಿ ವ್ಯವಸ್ಥೆ ಪ್ರಬಲವಾಗಿತ್ತು, ಅದನ್ನು ತೊಡೆದು ಹಾಕಿದವರೇ ಬಸವಣ್ಣ. ಅವರ ವಚನಗಳ ಆಧಾರದಲ್ಲೇ ನಮ್ಮ ಸಂವಿಧಾನ ರಚನೆಯಾಗಿದೆ, ಈ ವಚನಗಳು ಇಡೀ ವಿಶ್ವಕ್ಕೇ ದಾರಿದೀಪ. ವಚನವನ್ನು ಟ್ರಂಪ್‌ ಓದಿದ್ದರೆ ಈಗಿನ ಸುಂಕಾಸ್ತ್ರವೂ ಇರುತ್ತಿರಲಿಲ್ಲ, ಉಕ್ರೇನ್ ಯುದ್ಧವೂ ಆಗುತ್ತಿರಲಿಲ್ಲ ಎಂದರು.

ಹುಲಸೂರಿನ ಶಿವಾನಂದ ಸ್ವಾಮೀಜಿ, ಶೇಗುಣಶಿಯ ಮಹಾಂತ ಪ್ರಭು ಸ್ವಾಮೀಜಿ, ಭಾಲ್ಕಿಯ ಗುರುಬಸವ ಪಟ್ಟದ್ದೇವರು, ನವಲಗುಂದದ ಬಸವಲಿಂಗ ಸ್ವಾಮೀಜಿ, ಎರವಕೊಂಡದ ಕರಿಬಸವರಾಜೇಂದ್ರ ಸ್ವಾಮೀಜಿ, ಸಂಡೂರು ವಿರಕ್ತ ಮಠದ ಪ್ರಭು ಸ್ವಾಮೀಜಿ, ಸಿರುಗುಪ್ಪದ ಬಸವಭೂಷಣ ಸ್ವಾಮೀಜಿ, ಶಾಸಕ ಎಚ್‌.ಆರ್.ಗವಿಯಪ್ಪ, ಮುಖಂಡ ಕೆ.ಬಿ.ಶ್ರೀನಿವಾಸ ರೆಡ್ಡಿ, ನಿವೃತ್ತ ಉಪನ್ಯಾಸಕ ಶಿವಾನಂದ, ಅಭಿಯಾನದ ಸಂಚಾಲಕ ಪ್ರೊ.ಬಸವರಾಜ್‌ ಇತರರು ಇದ್ದರು.

ಬೆಳಿಗ್ಗೆ ಕೊಟ್ಟೂರುಸ್ವಾಮಿ ಮಠದಲ್ಲಿ ಬಸವಜ್ಯೋತಿ ರಥಯಾತ್ರೆಗೆ ಸ್ವಾಗತ ಕೋರಲಾಯಿತು.

ಬಸವಣ್ಣ ಸಾಂಸ್ಕೃತಿ ನಾಯಕ ಎಂದು ಘೋಷಿಸಿದ್ದರ ವರ್ಷಾಚರಣೆ ರಿಯಾಯಿತಿ ದರದಲ್ಲಿ ವಚನ ಪುಸ್ತಕ ಮಾರಾಟ ವಿವಾದಿತ ಪ್ರಶ್ನೆಗಳಿಗೆ ಉತ್ತರಿಸದೆ ಶ್ರೀಗಳು

- ‘ಬಸವಣ್ಣರದು ಸೂಜಿಯ ಕೆಲಸ’ ಲಿಂಗಾಯತ ಮಠಾಧೀಶರು ಧರ್ಮವನ್ನು ಒಡೆಯುತ್ತಿದ್ದಾರೆಯೇ ಎಂದು ಅನುಷಾ ಎಂಬ ವಿದ್ಯಾರ್ಥಿನಿ ಕೇಳಿದಾಗ ಉತ್ತರಿಸಿದ ಬಸವಲಿಂಗ ಪಟ್ಟದ್ದೇವರು ‘ಬಸವಣ್ಣ ಸೂಜಿಯ ಕೆಲಸ ಮಾಡಿದರೇ ಹೊರತು ಕತ್ತರಿಯ ಕೆಲಸ ಮಾಡಲಿಲ್ಲ. ಸಮಾಜವನ್ನು ಅಖಂಡವಾಗಿ ಕೂಡಿಸುವ ಸಲುವಾಗಿಯೇ ಈ ಬಸವ ಸಂಸ್ಕೃತಿ ಅಭಿಯಾನ ರಾಜ್ಯದ ಎಲ್ಲೆಡೆ ನಡೆಯುತ್ತಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.