ADVERTISEMENT

ಹೊಸಪೇಟೆ: ಸಾಹಿತ್ಯ ಸಮ್ಮೇಳನದ ಕನ್ನಡ ರಥಕ್ಕೆ ಸ್ವಾಗತ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2022, 11:52 IST
Last Updated 9 ಡಿಸೆಂಬರ್ 2022, 11:52 IST
   

ಹೊಸಪೇಟೆ (ವಿಜಯನಗರ): ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಕನ್ನಡ ರಥಕ್ಕೆ ಶುಕ್ರವಾರ ನಗರದಲ್ಲಿ ಸ್ವಾಗತ ಕೋರಲಾಯಿತು.

ನಗರದ ವಿಜಯನಗರ ಕಾಲೇಜಿನ ಬಳಿ ಕನ್ನಡ ರಥಕ್ಕೆ ಸ್ವಾಗತ ಕೋರಿದ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ತಾಯಿ ಭುವನೇಶ್ವರಿ ಮೇಲೆ ಹೂಮಳೆಗರೆದು ಅಭಿಮಾನ ತೋರಿದರು. ಡಾ.ಬಿ.ಆರ್‌. ಅಂಬೇಡ್ಕರ್‌ ವೃತ್ತ, ಡಾ. ಪುನೀತ್ ರಾಜಕುಮಾರ್‌ ವೃತ್ತ, ಮಹಾತ್ಮ ಗಾಂಧಿ ವೃತ್ತದ ಮಾರ್ಗವಾಗಿ ರಥವು ಬಳ್ಳಾರಿ ಜಿಲ್ಲೆಗೆ ಪಯಣ ಬೆಳೆಸಿತು.

ಇದಕ್ಕೂ ಮುನ್ನ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಮಾತನಾಡಿ, ತಾಯಿ ಭುವನೇಶ್ವರಿ ನೆಲೆಸಿದ ಈ ಸ್ಥಳದಲ್ಲಿ ಕನ್ನಡ ತೇರು ಬಂದಿದ್ದು ಅತ್ಯಂತ ಸಂತೋಷದ ವಿಷಯ. ನಾವೆಲ್ಲರೂ ಸೇರಿ ಈ ನಾಡಿನ, ನೆಲ, ಜಲ ಸಂರಕ್ಷಣೆಗೆ ಬದ್ಧರಾಗೋಣ. ಆ ಮೂಲಕ ಕರ್ನಾಟಕವನ್ನು ಕಟ್ಟೋಣ ಎಂದು ಹೇಳಿದರು.

ADVERTISEMENT

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸೋಣ ಎಂದರು.

ಕೊಟ್ಟೂರು ಸಂಸ್ಥಾನ ಮಠದ ಕೊಟ್ರೇಶ್ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ಕೆ.ರಂಗಣ್ಣನವರ, ಕಾಂಗ್ರೆಸ್ ಮುಖಂಡ ರಾಜಶೇಖರ ಹಿಟ್ನಾಳ್‌, ಜೆಡಿಎಸ್ ಜಿಲ್ಲಾಧ್ಯಕ್ಷ ಕೊಟ್ರೇಶ, ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ನಾಯಕರ ಹುಲುಗಪ್ಪ, ಕಾರ್ಯದರ್ಶಿ ಕೆ.ಪ್ರಕಾಶ್, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌, ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನಗೌಡ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.