ADVERTISEMENT

ಎಸ್ಪಿ ಎತ್ತಂಗಡಿಗೆ ಪೊಲೀಸರೇ ಲಾಬಿ!

ಆರು ತಿಂಗಳಲ್ಲೇ ಪೊಲೀಸ್‌ ಇಲಾಖೆಯಲ್ಲಿ ಶಿಸ್ತು ಮೂಡಿಸಿರುವ ಎಸ್ಪಿ ಡಾ. ಅರುಣ್‌

ಶಶಿಕಾಂತ್ ಎಸ್. ಶೆಂಬೆಳ್ಳಿ
Published 18 ಮಾರ್ಚ್ 2022, 7:02 IST
Last Updated 18 ಮಾರ್ಚ್ 2022, 7:02 IST
ಡಾ. ಅರುಣ್‌ ಕೆ.
ಡಾ. ಅರುಣ್‌ ಕೆ.   

ಹೊಸಪೇಟೆ (ವಿಜಯನಗರ): ಜಿಲ್ಲೆಯ ಮೊದಲ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕೆ. ಅವರನ್ನು ಎತ್ತಂಗಡಿಗೊಳಿಸಬೇಕೆಂದು ಅವರ ಇಲಾಖೆಯ ಅಧಿಕಾರಿಗಳೇ ತೀವ್ರ ಲಾಬಿ ನಡೆಸಿದ್ದಾರೆ ಎಂಬ ವಿಷಯ ಗೊತ್ತಾಗಿದೆ.

ಜಿಲ್ಲೆಯ ಕೆಲ ಡಿವೈಎಸ್ಪಿಗಳು, ಇನ್‌ಸ್ಪೆಕ್ಟರ್‌ಗಳು ಅದಕ್ಕೆ ಕೈಜೋಡಿಸಿದ್ದಾರೆ ಎಂದು ತಿಳಿದು ಬಂದಿದೆ. ಇತ್ತೀಚೆಗೆ ಈ ಅಧಿಕಾರಿಗಳು ಗೃಹ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಭೇಟಿಯಾಗಿ, ಅವರ ಮೂಲಕ ಗೃಹಸಚಿವರ ಮೇಲೆ ಒತ್ತಡ ಹಾಕಿದ್ದಾರೆ ಎಂದು ಗೊತ್ತಾಗಿದೆ. ಇನ್ನಷ್ಟೇ ಗೃಹ ಸಚಿವರು ಡಾ. ಅರುಣ್‌ ಅವರ ವರ್ಗಾವಣೆ ಬಗ್ಗೆ ನಿರ್ಧಾರ ಕೈಗೊಳ್ಳಬೇಕಿದೆ.

ಲಾಬಿ ಏಕೆ?:

ADVERTISEMENT

ನೂತನ ವಿಜಯನಗರ ಜಿಲ್ಲೆ ಉದ್ಘಾಟನೆಗೊಂಡ ಅಕ್ಟೋಬರ್‌ 2ರಂದೇ ಡಾ. ಅರುಣ್‌ ಅವರು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಆರು ತಿಂಗಳ ಅವಧಿಯಲ್ಲಿ ಇಲಾಖೆಯಲ್ಲಿ ಗಮನಾರ್ಹ ಬದಲಾವಣೆ ತಂದಿದ್ದಾರೆ.

ಅಲ್ಲಲ್ಲಿ ಕೆಲ ಪೊಲೀಸರಿಂದ ನಡೆಯುತ್ತಿದ್ದ ಹಫ್ತಾ ವಸೂಲಿಗೆ ಕಡಿವಾಣ ಹಾಕಿದ್ದಾರೆ. ಮಟ್ಕಾ, ಜೂಜು, ಅಕ್ರಮ ಮರಳು ಸಾಗಾಟ, ವೇಶ್ಯಾವಾಟಿಕೆ ಸೇರಿದಂತೆ ಬಹುತೇಕ ಅಕ್ರಮ ಚಟುವಟಿಕೆಗಳನ್ನು ತಡೆದಿದ್ದಾರೆ. ಇನ್‌ಸ್ಪೆಕ್ಟರ್‌ಗಳಿಂದ ಕೆಳಹಂತದ ಸಿಬ್ಬಂದಿ ಮೇಲೆ ನಡೆಯುತ್ತಿದ್ದ ದೌರ್ಜನ್ಯ ನಿಯಂತ್ರಿಸಿದ್ದಾರೆ. ಸಾರ್ವಜನಿಕರಿಂದ ಯಾವುದೇ ದೂರು ಬಂದರೂ ತಕ್ಷಣವೇ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸುತ್ತಿದ್ದಾರೆ. ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಬಾರದ ಅದಕ್ಷ ಅಧಿಕಾರಿಗಳಿಗೆ ಎಚ್ಚರಿಕೆ ಕೊಟ್ಟು ಇಲಾಖೆಯಲ್ಲಿ ಶಿಸ್ತು ಮೂಡಿಸಿದ್ದಾರೆ. ಇದೇ ವಿಷಯ ಕೆಲ ಅಧಿಕಾರಿಗಳ ಅಸಹನೆಗೆ ಕಾರಣ ಎನ್ನಲಾಗಿದೆ.

‘₹40ರಿಂದ ₹50 ಲಕ್ಷ ಕೊಟ್ಟು ವಿಜಯನಗರಕ್ಕೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದೇವೆ. ಆದರೆ, ಎಸ್ಪಿಯವರು ಏನನ್ನೂ ಮಾಡಲು ಬಿಡುತ್ತಿಲ್ಲ. ಎಲ್ಲವೂ ಕಾನೂನುಬದ್ಧವಾಗಿ ಕೆಲಸ ನಿರ್ವಹಿಸಬೇಕೆಂದು ಹೇಳುತ್ತಾರೆ. ಹೀಗಾದರೆ ನಮಗೆ ಬಹಳ ಕಷ್ಟ ಆಗುತ್ತದೆ. ಅವರನ್ನು ಕೂಡಲೇ ವರ್ಗಾವಣೆಗೊಳಿಸಬೇಕು. ಇಲ್ಲವಾದಲ್ಲಿ ನಮಗೆ ಬೇರೆ ಕಡೆ ಹುದ್ದೆ ತೋರಿಸಿ’ ಎಂದು ಅಧಿಕಾರಿಗಳು ಗೃಹ ಇಲಾಖೆಯ ಅಧಿಕಾರಿಗಳ ಬಳಿ ಗೋಳು ತೋಡಿಕೊಂಡಿದ್ದಾರೆ ಎಂದು ಖಚಿತ ಮೂಲಗಳಿಂದ ಗೊತ್ತಾಗಿದೆ.

‘ಅರುಣ್‌ ಅವರು ಬಂದು ಇನ್ನೂ ಒಂದು ವರ್ಷವಾಗಿಲ್ಲ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು, ಭ್ರಷ್ಟಚಾರಿಗಳು ಸೇರಿಕೊಂಡು ಅವರ ಎತ್ತಂಗಡಿಗೆ ಪ್ರಯತ್ನ ನಡೆಸಿದ್ದಾರೆ. ಅವರ ಮಾತಿಗೆ ಸರ್ಕಾರ ಸೊಪ್ಪು ಹಾಕಬಾರದು. ಇಲ್ಲವಾದಲ್ಲಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತದೆ’ ಎಂದು ಕಾರ್ಮಿಕ ಮುಖಂಡ ಆರ್‌. ಭಾಸ್ಕರ್‌ ರೆಡ್ಡಿ ತಿಳಿಸಿದ್ದಾರೆ.

‘ಆನಂದ್‌ ಸಿಂಗ್ ಅವರೇ ಕೆಲ ಸಭೆಗಳಲ್ಲಿ ಎಸ್ಪಿಯವರ ಕೆಲಸವನ್ನು ಹಾಡಿ ಹೊಗಳಿದ್ದಾರೆ. ಆನಂದ್‌ ಸಿಂಗ್‌ ಅವರು ಅವರನ್ನು ಬಿಟ್ಟು ಕೊಡುವುದಿಲ್ಲ ಎಂಬ ಭರವಸೆ ಇದೆ. ಹಿಂದುಳಿದ ಹೊಸ ಜಿಲ್ಲೆಗೆ ಇಂತಹ ದಕ್ಷ ಅಧಿಕಾರಿಯ ಅವಶ್ಯಕತೆ ಇದೆ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಕಾರ್ತಿಕ್‌ ಅಭಿಪ್ರಾಯ ಪಟ್ಟಿದ್ದಾರೆ.

ಡಾ. ಅರುಣ್‌ ಏನು ಹೇಳುತ್ತಾರೆ?

‘ಇದರ ಬಗ್ಗೆ ನನಗೇನೂ ಗೊತ್ತಿಲ್ಲ. ಇದರ ಬಗ್ಗೆ ಹೇಗೆ ಪ್ರತಿಕ್ರಿಯಿಸಲಿ ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವರ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯ ಇದೆ. ನಾನು ಇದುವರೆಗೆ ಕಾನೂನಿನ ಚೌಕಟ್ಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ. ಮುಂದೆಯೂ ನಿರ್ವಹಿಸುತ್ತೇನೆ’ ಎಂದು ಎಸ್ಪಿ ಡಾ. ಅರುಣ್‌ ಕೆ. ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

ಚೇತನ್‌ ನಂತರ ಅರುಣ್‌ ದಕ್ಷ

ಅವಿಭಜಿತ ಬಳ್ಳಾರಿ ಜಿಲ್ಲೆಯಲ್ಲಿ ಈ ಹಿಂದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿದ್ದ ಆರ್‌. ಚೇತನ್‌ ಅವರು ತನ್ನ ದಕ್ಷತೆ, ಇಲಾಖೆಯಲ್ಲಿ ಶಿಸ್ತು ಮೂಡಿಸುವ ಮೂಲಕ ಜಿಲ್ಲೆಯಲ್ಲಿ ಮನೆ ಮಾತಾಗಿದ್ದರು. ಈಗ ನೂತನ ವಿಜಯನಗರ ಜಿಲ್ಲೆಯ ಎಸ್ಪಿ ಆಗಿರುವ ಡಾ. ಅರುಣ್‌ ಕೆ. ಅವರು ಅದೇ ರೀತಿ ಕೆಲಸ ನಿರ್ವಹಿಸುತ್ತಿದ್ದಾರೆ. ಇಂತಹ ಅಧಿಕಾರಿಗಳಿದ್ದಾರೆ ಅಪರಾಧ ಮಾಡುವವರು ಹತ್ತು ಸಲ ಯೋಚಿಸುತ್ತಾರೆ ಎನ್ನುತ್ತಾರೆ ಪೊಲೀಸ್‌ ಇಲಾಖೆಯ ಸಿಬ್ಬಂದಿ.

‘ಡಾ. ಅರುಣ್‌ ಅವರು ಕಾನೂನುಬಾಹಿರವಾಗಿ ಕೆಲಸ ನಿರ್ವಹಿಸಲು ಯಾರಿಗೂ ಬಿಡುವುದಿಲ್ಲ. ಅಧಿಕಾರಿ ವರ್ಗ, ಭ್ರಷ್ಟರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಆದರೆ, ಕೆಳಹಂತದ ಅಧಿಕಾರಿಗಳು ನೆಮ್ಮದಿಯಿಂದ ಕೆಲಸ ಮಾಡುತ್ತಿದ್ದಾರೆ’ ಎಂದು ಅನೇಕ ಜನ ಕೆಳಹಂತದ ಸಿಬ್ಬಂದಿ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.