ಹಗರಿಬೊಮ್ಮನಹಳ್ಳಿ: ‘ಜೆಡಿಎಸ್ ಕೋಮುವಾದಿ ಬಿಜೆಪಿಯೊಂದಿಗೆ ಕೈಜೋಡಿಸಿದ್ದರಿಂದ ಆ ಪಕ್ಷದಿಂದ ಹೊರಗೆ ಬಂದೆ’ ಎಂದು ಮಾಜಿ ಸಚಿವ ಎನ್.ಎಂ.ನಬೀಸಾಹೇಬ್ ಹೇಳಿದರು.
ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಬಿಜೆಪಿ ಕೇವಲ ಸೌಹಾರ್ದ ಕದಡಿ ಮತ ಚಲಾಯಿಸುವಂತೆ ಜನರನ್ನು ಕೆರಳಿಸುತ್ತಿದ್ದಾರೆ. ಆದರೆ ಕ್ಷೇತ್ರದಲ್ಲಿ ಮತದಾರರು ಪ್ರಬುದ್ಧರಿದ್ದಾರೆ. ಕಳೆದ ಚುನಾವಣೆಯಲ್ಲಿ ಭೀಮಾ ನಾಯ್ಕ ಅವರ ವಿರುದ್ಧ ಪ್ರಚಾರ ಮಾಡಿದ್ದೆ, ಆದರೆ ಮುಂದಿನ ಚುನಾವಣೆಯಲ್ಲಿ ಅವರ ಪರವಾಗಿ ಇರುತ್ತೇನೆ ಎಂದು ಸ್ಪಷ್ಟನೆ ನೀಡಿದರು.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇ.ತುಕಾರಾಂ ಅವರು ಸರಳ ಸಜ್ಜನಿಕೆಯ ವ್ಯಕ್ತಿ ಆಗಿದ್ದಾರೆ, ಈ ಬಾರಿ ಕ್ಷೇತ್ರದ ಮತದಾರರು ಅವರನ್ನು ಬೆಂಬಲಿಸಲಿದ್ದಾರೆ ಎಂದರು.
ಲೋಕಸಭಾ ಕ್ಷೇತ್ರದ ಅಭ್ಯರ್ಥಿ ತುಕಾರಾಂ ಅವರ ಪತ್ನಿ ಅನ್ನಪೂರ್ಣ ಮಾತನಾಡಿ, ಲೋಕಸಭಾ ಕ್ಷೇತ್ರದಲ್ಲಿ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತರು ಸೈನಿಕರಂತೆ ಕೆಲಸ ಮಾಡುತ್ತಿದ್ದಾರೆ, ಪಂಚವಾರ್ಷಿಕ ಯೋಜನೆ ಜಾರಿಗೊಳಿಸಿದ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ ಎಂದರು.
ಕೆಎಂಎಫ್ ಅಧ್ಯಕ್ಷ ಎಲ್.ಬಿ.ಪಿ.ಭೀಮಾ ನಾಯ್ಕ ಮಾತನಾಡಿ, ಬಿಜೆಪಿ ಸಂಸದರಾಗಿದ್ದ ಕರುಣಾಕರರೆಡ್ಡಿ, ಶ್ರೀರಾಮುಲು, ಜೆ.ಶಾಂತಾ, ದೇವೇಂದ್ರಪ್ಪ ಅವರ ಕೊಡುಗೆ ಶೂನ್ಯ. ಆದ್ದರಿಂದ ಅಭಿವೃದ್ಧಿಯ ಚಿಂತನೆ ಹೊಂದಿರುವ ತುಕಾರಾಂ ಅವರನ್ನು ಬೆಂಬಲಿಸಬೇಕು ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಕುರಿ ಶಿವಮೂರ್ತಿ, ಮಹಿಳಾ ಕಾಂಗ್ರೆಸ್ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷೆ ಶಾಹೀರಾಬಾನು, ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಅಕ್ಕಿ ತೋಟೇಶ್, ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ಯು.ಸೋಮಣ್ಣ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋಣಿಬಸಪ್ಪ, ಮುಖಂಡ ಕೊಟ್ಟೂರಿನ ವಿ.ತಿಪ್ಪೇಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.