ADVERTISEMENT

ಹೂವಿನಹಡಗಲಿ| ವಸತಿ ನಿಲಯ, ಆಸ್ಪತ್ರೆಗೆ ಲೋಕಾಯುಕ್ತ ಭೇಟಿ; ಅವ್ಯವಸ್ಥೆ ದರ್ಶನ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 5:23 IST
Last Updated 12 ನವೆಂಬರ್ 2025, 5:23 IST
ಹೂವಿನಹಡಗಲಿಯ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಸಿಂಟೆಕ್ಸ್‌ಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದರು
ಹೂವಿನಹಡಗಲಿಯ ಮೆಟ್ರಿಕ್‌ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಸಿಂಟೆಕ್ಸ್‌ಗಳನ್ನು ಲೋಕಾಯುಕ್ತ ಅಧಿಕಾರಿಗಳು ಪರಿಶೀಲಿಸಿದರು   

ಹೂವಿನಹಡಗಲಿ: ಇಲ್ಲಿನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯ, ಉಪ ನೋಂದಣಿ ಕಚೇರಿ, ಕೆ.ಅಯ್ಯನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಲೋಕಾಯುಕ್ತ ನಿರೀಕ್ಷಕ ಅಮರೇಶ ಹುಬ್ಬಳ್ಳಿ ನೇತೃತ್ವದ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು.

ವಸತಿ ನಿಲಯದಲ್ಲಿ ಬೆಳಿಗ್ಗೆ ಯೋಗಾಸನ ನಿರತ ವಿದ್ಯಾರ್ಥಿಗಳ ಜತೆ ಲೋಕಾಯುಕ್ತ ಅಧಿಕಾರಿಗಳು ಸಂವಾದ ನಡೆಸಿ, ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು. ಕೊಠಡಿ, ಶೌಚಾಲಯ, ನೀರಿನ ಟ್ಯಾಂಕ್, ಉಗ್ರಾಣ, ಅಡುಗೆ ಕೋಣೆ ಪರಿಶೀಲಿಸಿದರು. ನಾಲ್ಕು ವರ್ಷದಿಂದ ವಿದ್ಯಾರ್ಥಿಗಳಿಗೆ ಹಾಸಿಗೆ ವಿತರಿಸದಿರುವ ಬಗ್ಗೆ ಪ್ರಶ್ನಿಸಿದಾಗ, ಮೇಲ್ವಿಚಾರಕರು ‘ಪೂರೈಕೆಯಾಗಿಲ್ಲ’ ಎಂದರು. ಅಲ್ಲಿನ ಅವ್ಯವಸ್ಥೆಗಳನ್ನು ಅಧಿಕಾರಿಗಳು ಟಿಪ್ಪಣಿ ಮಾಡಿಕೊಂಡರು.

ನಂತರ ಉಪ ನೋಂದಣಿ ಕಚೇರಿಗೆ ಭೇಟಿ ನೀಡಿದಾಗ ಕಚೇರಿ ಸಮಯದಲ್ಲಿ ಅಧಿಕಾರಿಯೇ ಇರಲಿಲ್ಲ. ಅಭಿಲೇಖಾಲಯ ಪರಿಶೀಲಿಸಿ, ಸಾರ್ವಜನಿಕ ದೂರುಗಳ ಬಗ್ಗೆ ಹೊರಗುತ್ತಿಗೆ ಸಿಬ್ಬಂದಿಯಿಂದ ಮಾಹಿತಿ ಪಡೆದರು.

ADVERTISEMENT

ತಾಲ್ಲೂಕಿನ ಕೆ.ಅಯ್ಯನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಉಗ್ರಾಣದಲ್ಲಿ ಅವಧಿ ಮೀರಿದ ಔಷಧಿಗಳು ಕಂಡು ಬಂದವು. ‘ಆಸ್ಪತ್ರೆಯ ಹೊರ ನೋಟ ಸುಂದರವಾಗಿದೆ, ಒಳಗೆ ಏಕೆ ಅವ್ಯವಸ್ಥೆ?’ ಎಂದು ಪ್ರಶ್ನಿಸಿದರು.

‘ಸಾರ್ವಜನಿಕ ದೂರು ಆಧರಿಸಿ ಪರಿಶೀಲನೆ ನಡೆಸಲಾಗಿದೆ. ಮೇಲಧಿಕಾರಿಗಳ ಮೂಲಕ ಲೋಕಾಯುಕ್ತಕ್ಕೆ ವರದಿ ನೀಡಲಾಗುತ್ತಿದೆ’ ಎಂದು ನಿರೀಕ್ಷಕ ಅಮರೇಶ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.