ADVERTISEMENT

ಕುರುಗೋಡು | ಲೋಕಾಯುಕ್ತ ಸಭೆ: ಹೊಸದೇನಿಲ್ಲ ಹಳೆಯದೇ ಎಲ್ಲ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 5:25 IST
Last Updated 10 ಜುಲೈ 2025, 5:25 IST
ಕುರುಗೋಡಿನಲ್ಲಿ ಬುಧವಾರ ಜರುಗಿದ ಲೋಕಾಯುಕ್ತ ಪೊಲೀಸರ ಕುಂದು ಕೊರತೆ ಸಭೆಯಲ್ಲಿ ಸಿಪಿಐ ಸುರೇಶ್ ಎಂ. ಬಾವಿಮನಿ ಸಾರ್ವಜನಿಕರ ಅಹವಾಲು ಆಲಿಸಿದರು
ಕುರುಗೋಡಿನಲ್ಲಿ ಬುಧವಾರ ಜರುಗಿದ ಲೋಕಾಯುಕ್ತ ಪೊಲೀಸರ ಕುಂದು ಕೊರತೆ ಸಭೆಯಲ್ಲಿ ಸಿಪಿಐ ಸುರೇಶ್ ಎಂ. ಬಾವಿಮನಿ ಸಾರ್ವಜನಿಕರ ಅಹವಾಲು ಆಲಿಸಿದರು   

ಕುರುಗೋಡು: ಇಲ್ಲಿನ ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಜರುಗಿದ ಲೋಕಾಯುಕ್ತ ಪೊಲೀಸರ ಮಾಸಿಕ ಸಭೆಯಲ್ಲಿ ದೂರುದಾರರಿಗಿಂತ ವಿವಿಧ ಇಲಾಖೆಯ ಅಧಿಕಾರಿಗಳ ಸಂಖ್ಯೆ ಹೆಚ್ಚಾಗಿತ್ತು.

ಕಳೆದ ಸಭೆಯಲ್ಲಿ ಸಲ್ಲಿಕೆಯಾದ ಪುರಸಭೆಗೆ ಸಂಬಂಧಿಸಿದ ದೂರುಗಳ ಪುನರಾವರ್ತಿಯಾಗಿದ್ದು ಬಿಟ್ಟರೆ ಯಾವುದೇ ಹೊಸ ಅರ್ಜಿಗಳು ಸಲ್ಲಿಕೆಯಾಗಲಿಲ್ಲ.

ಪುರಸಭೆಗೆ ಸೇರಿದ ಸಮಸ್ಯೆ ಕುರಿತು ಮಾಹಿತಿ ಪಡೆದ ಲೋಕಾಯುಕ್ತ ಸಿಪಿಐ ಸುರೇಶ್ ಎಂ.ಬಾವಿಮನಿ, ಮುಂದಿನ ಸಭೆಯೊಳಗೆ ಸಮಸ್ಯೆಗೆ ಪರಿಹಾರ ದೊರಕಿಸಿಕೊಡುವಂತೆ ಮುಖ್ಯಾಧಿಕಾರಿ ಹರ್ಷವರ್ಧನ ಅವರಿಗೆ ಸೂಚಿಸಿದರು.

ADVERTISEMENT

ಸಭೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆ ಕಡಿಮೆ ಇರುವುದು ಆಭಾಸವಾಗುತ್ತದೆ. ಕುಂದುಕೊರತೆ ಸಭೆ ಜರುಗುವ ಬಗ್ಗೆ ನೀವು ಕಾರ್ಯನಿರ್ವಹಿಸುವ ಗ್ರಾಮಗಳಲ್ಲಿ ಹೆಚ್ಚು ಪ್ರಚಾರ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಇಲಾಖೆ ಅನುಮತಿ ಇಲ್ಲದೆ ಜಮೀನುಗಳಲ್ಲಿ ಅನಧಿಕೃತವಾಗಿ ಗ್ರಾವೆಲ್ ಅಗೆದು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ. ಸೂಕ್ತ ಸಾಗಾಣಿಕೆಗೆ ಕ್ರಮಗಳನ್ನು ಅನುಸರಿಸುತ್ತಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ಭಾರಿ ವಾಹನಗಳು ಸಂಚರಿಸುವುದರಿಂದ ಪಟ್ಟಣ ಮುಖ್ಯವೃತ್ತದ ಸುತ್ತಮುತ್ತಲಿನ ವಾತಾವರಣ ದೂಳಿನಿಂದ ಕೂಡಿರುತ್ತದೆ. ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಕೆಲವು ಸಂಘಟನೆಗಳ ಮುಖಂಡರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಿಯಾಲಜಿಸ್ಟ್ ವಿಜಯಲಕ್ಷ್ಮೀ, ತಾಲ್ಲೂಕಿನ ವಿವಿಧ ಗ್ರಾಮಗಳ 5 ಸ್ಥಳಗಳಲ್ಲಿ ಗ್ರಾವೆಲ್ ಅಗೆಯಲು ಪರವಾನಗೆ ನೀಡಲಾಗಿದೆ. ಅನಧಿಕೃತವಾಗಿ ಗ್ರಾವೆಲ್ ಬ್ಲಾಕ್‌ಗಳನ್ನು ಗುರುತಿಸಿ ಕ್ರಮಕೈಗೊಳ್ಳಲಾಗುವುದು ಎಂದರು.

ತಹಶೀಲ್ದಾರ್ ನರಸಪ್ಪ, ಗ್ರೇಡ್–2 ತಹಶೀಲ್ದಾರ್ ಮಲ್ಲೇಶಪ್ಪ, ಪುರಸಭೆ ಮುಖ್ಯಾಧಿಕಾರಿ ಹರ್ಷವರ್ಧನ, ಇಒ ನಿರ್ಮಲಾ ಇದ್ದರು.

ಕಚೇರಿಗೆ ಬರುವ ಸಾರ್ವಜನಿಕರ ಸಮಸ್ಯೆಗಳನ್ನು ವ್ಯವದಾನದಿಂದ ಆಲಿಸಿ ನಿಗದಿತ ಸಮಯದೊಳಗೆ ಪರಿಹಾರ ದೊರಕಿಸಿಕೊಡಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಸ್ವಯಂ ದೂರು ದಾಖಲಿಸಿಕೊಳ್ಳಲಾಗುವುದು
ಸುರೇಶ್ ಎಂ. ಬಾವಿಮನಿ ಲೋಕಾಯುಕ್ತ ಸಿಪಿಐ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.