ADVERTISEMENT

ಮದುವೆ ಪಾಸ್‌ಗೆ ಉದ್ದನೆಯ ಸಾಲು

ಲಗ್ನ ಪತ್ರಿಕೆಯೊಂದಿಗೆ ಲಿಖಿತ ಅರ್ಜಿ ಸಲ್ಲಿಸುವುದು ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 10 ಮೇ 2021, 8:04 IST
Last Updated 10 ಮೇ 2021, 8:04 IST
ಮದುವೆ ಪಾಸ್‌ ಪಡೆದುಕೊಳ್ಳಲು ಸೋಮವಾರ ಹೊಸಪೇಟೆ ತಾಲ್ಲೂಕು ಕಚೇರಿ ಎದುರು ಸಾರ್ವಜನಿಕರು ಸಾಲಿನಲ್ಲಿ ನಿಂತಿದ್ದರು-ಪ್ರಜಾವಾಣಿ ಚಿತ್ರ
ಮದುವೆ ಪಾಸ್‌ ಪಡೆದುಕೊಳ್ಳಲು ಸೋಮವಾರ ಹೊಸಪೇಟೆ ತಾಲ್ಲೂಕು ಕಚೇರಿ ಎದುರು ಸಾರ್ವಜನಿಕರು ಸಾಲಿನಲ್ಲಿ ನಿಂತಿದ್ದರು-ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಮದುವೆ ಪಾಸ್‌ ವಿತರಿಸುವ ಕಾರ್ಯ ನಗರದ ತಾಲ್ಲೂಕು ಕಚೇರಿಯಲ್ಲಿ ಸೋಮವಾರ ಆರಂಭಗೊಂಡಿದ್ದು, ಪಾಸ್‌ ಪಡೆಯಲು ಜನರ ಉದ್ದನೆಯ ಸಾಲು ಕಂಡು ಬಂತು.

ತಾಲ್ಲೂಕು ಕಚೇರಿಯ ಮುಖ್ಯದ್ವಾರಕ್ಕೆ ಬೀಗ ಜಡಿದು, ಒಳಭಾಗದಿಂದ ಸಿಬ್ಬಂದಿ ಪಾಸ್‌ ವಿತರಿಸುತ್ತಿದ್ದಾರೆ. ಒಳಗೆ ಹೋಗಲು ಯಾರಿಗೂ ಅವಕಾಶ ಇಲ್ಲ. ಈ ಹಿಂದೆಯೇ ನಿಶ್ಚಯವಾದ ಮದುವೆಗಳ ಮಾಹಿತಿ ಪಡೆದು, ಸಾರ್ವಜನಿಕರಿಗೆ ಪಾಸ್‌ ವಿತರಿಸಿದರು. ಹೆಚ್ಚಿನ ಜನದಟ್ಟಣೆ ಕಂಡು ಬಂದದ್ದರಿಂದ ಪೊಲೀಸರನ್ನು ನಿಯೋಜಿಸಿ, ಜನ ಅಂತರ ಕಾಯ್ದುಕೊಂಡು ಸಾಲಿನಲ್ಲಿ ಬರಲು ವ್ಯವಸ್ಥೆ ಮಾಡಲಾಗಿತ್ತು.

‘ಸೋಮವಾರದಿಂದ ಕೋವಿಡ್‌ ನಿಷೇಧಾಜ್ಞೆಯ ಹೊಸ ನಿಯಮಗಳು ಜಾರಿಗೆ ಬಂದಿವೆ. ಯಾರು ಕೂಡ ಅನವಶ್ಯಕವಾಗಿ ಹೊರಗೆ ತಿರುಗಾಡಬಾರದು. ಈ ಮುಂಚೆಯೇ ನಿಗದಿಯಾದ ಮದುವೆಗಳಿಗೆ ಪಾಸ್‌ ವಿತರಿಸಲಾಗುತ್ತಿದೆ. ಸಾಲಿನಲ್ಲಿ ಅಂತರ ಕಾಯ್ದುಕೊಂಡು, ಲಗ್ನ ಪತ್ರಿಕೆಯೊಂದಿಗೆ ಲಿಖಿತ ರೂಪದಲ್ಲಿ ಅರ್ಜಿ ಸಲ್ಲಿಸಿ, ಪಾಸ್‌ ಪಡೆದುಕೊಂಡು ತೆರಳಬೇಕು’ ಎಂದು ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ತಿಳಿಸಿದರು.

ADVERTISEMENT

‘ಮದುವೆಯಲ್ಲಿ 40 ಜನ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಕಲ್ಯಾಣ ಮಂಟಪ, ಬಯಲಿನಲ್ಲಿ ಶಾಮಿಯಾನ ಹಾಕಿ ವಿವಾಹ ಮಾಡುವಂತಿಲ್ಲ. ಮನೆಯಲ್ಲಿಯೇ ಸರಳವಾಗಿ 40 ಜನ ಮೀರದಂತೆ, ಮಾಸ್ಕ್‌ ಧರಿಸಿಕೊಂಡು, ಅಂತರ ಕಾಯ್ದುಕೊಂಡು ಮದುವೆ ಮಾಡಬೇಕು. ಗೃಹ ಪ್ರವೇಶ ಸೇರಿದಂತೆ ಇತರೆ ಸಮಾರಂಭ ನಡೆಸಲು ಅವಕಾಶ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.