ADVERTISEMENT

‘ಭಾಷೆ, ಪುಸ್ತಕ ಪ್ರೀತಿಸಿದರೆ ಉಜ್ವಲ ಭವಿಷ್ಯ’-ಇನ್‌ಸ್ಪೆಕ್ಟರ್‌ ಮೇಟಿ ಶ್ರೀನಿವಾಸ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2021, 9:19 IST
Last Updated 22 ಮಾರ್ಚ್ 2021, 9:19 IST
ಹೊಸಪೇಟೆಯಲ್ಲಿ ಸೋಮವಾರ ಏರ್ಪಡಿಸಿದ್ದ ‘ತೆರೆದ ಮನೆ’ ಕಾರ್ಯಕ್ರಮದಲ್ಲಿ ಪಟ್ಟಣ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಮೇಟಿ ಶ್ರೀನಿವಾಸ ಮಾತನಾಡಿದರು
ಹೊಸಪೇಟೆಯಲ್ಲಿ ಸೋಮವಾರ ಏರ್ಪಡಿಸಿದ್ದ ‘ತೆರೆದ ಮನೆ’ ಕಾರ್ಯಕ್ರಮದಲ್ಲಿ ಪಟ್ಟಣ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಮೇಟಿ ಶ್ರೀನಿವಾಸ ಮಾತನಾಡಿದರು   

ಹೊಸಪೇಟೆ (ವಿಜಯನಗರ): ‘ಭಾಷೆ, ಪುಸ್ತಕಗಳನ್ನು ಪ್ರೀತಿಸಿದರೆ ಜೀವನ, ಭವಿಷ್ಯ ತನ್ನಿಂದ ತಾನೇ ಉಜ್ವಲವಾಗುತ್ತದೆ’ ಎಂದು ಪಟ್ಟಣ ಪೊಲೀಸ್‌ ಠಾಣೆ ಇನ್‌ಸ್ಪೆಕ್ಟರ್‌ ಮೇಟಿ ಶ್ರೀನಿವಾಸ ತಿಳಿಸಿದರು.

ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ‘ತೆರೆದ ಮನೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘24 ಗಂಟೆಗಳಲ್ಲಿ ಕನಿಷ್ಠ ನಾಲ್ಕು ತಾಸು ಓದುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಪರೀಕ್ಷೆಗೆ ಹೆದರಬಾರದು. ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಓದುವವರು ಯಾರಿಗಿಂತಲೂ ಕಡಿಮೆಯಿಲ್ಲ. ಕೀಳರಿಮೆ ಭಾವನೆ ತೊರೆದು ಓದಿನತ್ತ ಲಕ್ಷ್ಯ ವಹಿಸಬೇಕು’ ಎಂದು ಹೇಳಿದರು.

‘ಅಪ್ಪ, ಅಮ್ಮ, ಗುರು ಹಿರಿಯರ ಬಗ್ಗೆ ಪೂಜ್ಯ, ಗೌರವ ಭಾವನೆ ಹೊಂದಿರಬೇಕು. ನಡೆ, ನುಡಿ ಶುದ್ಧವಾಗಿರಬೇಕು. ಸಿನಿಮಾ ಹೀರೊಗಳ ಅಂದ, ಚೆಂದ ನೋಡಿ ಮರುಳಾಗದಿರಿ. ನಿಜ ಜೀವನಕ್ಕೂ, ತೆರೆಯ ಮೇಲೆ ನೋಡುವ ಸಿನಿಮಾಕ್ಕೂ ಅಜಗಜಾಂತರ ವ್ಯತ್ಯಾಸವಿದೆ’ ಎಂದರು.

ADVERTISEMENT

‘ವಿದ್ಯಾರ್ಥಿ ಜೀವನ ಮಹತ್ವದ ಘಟ್ಟ. ಶ್ರದ್ಧೆಯಿಂದ ಓದಿ ಮುಂದೆ ಬರಬೇಕು. ಗತಿಸಿ ಹೋದ ಕಾಲ ಪುನಃ ಹಿಂತಿರುಗಿ ಬರುವುದಿಲ್ಲ. ನಿಶ್ಚಿತ ಗುರಿ ಇಟ್ಟುಕೊಂಡು ಅದರೆಡೆಗೆ ಸಾಗುವುದೊಂದೆ ಧ್ಯೇಯವಾಗಿರಬೇಕು’ ಎಂದು ತಿಳಿಸಿದರು.

‘ಎಲ್ಲರ ರಕ್ಷಣೆಗೂ ಕಾನೂನು ಇದೆ. ಇದನ್ನು ಪಡೆಯುವ ಹಕ್ಕು ಎಲ್ಲ ಪ್ರಜೆಗಳಿಗೆ ಇದೆ. ಯಾವುದೇ ರೀತಿಯ ದೌರ್ಜನ್ಯವಾದಾಗ ಕಾನೂನಿನ ಮೂಲಕ ನ್ಯಾಯ ಪಡೆದುಕೊಳ್ಳಬಹುದು’ ಎಂದರು.

ಪ್ರಾಚಾರ್ಯ ಜೆ.ಸಿದ್ರಾಮ, ಪ್ರಾಧ್ಯಾಪಕ ದಯಾನಂದ ಕಿನ್ನಾಳ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.