ಹೂವಿನಹಡಗಲಿ: ತಾಲ್ಲೂಕಿನ ಮದಲಗಟ್ಟಿ ಬಳಿ ತುಂಗಭದ್ರಾ ನದಿಯಲ್ಲಿ ಶನಿವಾರ ನೀರು ಪಾಲಾಗಿದ್ದ ಮೂವರು ಯುವಕರ ಪೈಕಿ ಶರಣಪ್ಪ ಬಡಿಗೇರ (32) ಮೃತದೇಹ ಸೋಮವಾರ ಪತ್ತೆಯಾಗಿದೆ.
ಮದಲಗಟ್ಟಿ ಆಂಜನೇಯಸ್ವಾಮಿ ದರ್ಶನಕ್ಕೆ ಬಂದಿದ್ದ ಗದಗ ಜಿಲ್ಲೆ ಶಿರಹಟ್ಟಿ ಪಟ್ಟಣದ ಮೂವರು ಯುವಕರು ನದಿಯ ಸುಳಿಗೆ ಸಿಲುಕಿ ನೀರು ಪಾಲಾಗಿದ್ದರು. ಅಗ್ನಿಶಾಮಕ ದಳ ಸಿಬ್ಬಂದಿ, ಮೀನುಗಾರರು ಶನಿವಾರ ಸಂಜೆಯಿಂದಲೇ ಶೋಧ ಕಾರ್ಯಾಚರಣೆ ಆರಂಭಿಸಿದ್ದರು.
ಮಹೇಶ ಬಡಿಗೇರ (34), ಗುರುನಾಥ ಬಡಿಗೇರ (32) ಅವರ ಮೃತದೇಹ ಭಾನುವಾರ ಪತ್ತೆಯಾಗಿದ್ದವು.
ಜಿಲ್ಲಾ ಅಗ್ನಿಶಾಮಕದಳ ಅಧಿಕಾರಿ ಎಸ್.ಪ್ರಮೋದ್ ನೇತೃತ್ವದಲ್ಲಿ ಅಗ್ನಿಶಾಮಕ ದಳ, ಮೀನುಗಾರರ ತಂಡ ಯಾಂತ್ರೀಕೃತ ಬೋಟ್ ನೆರವಿನಿಂದ ನದಿಯಲ್ಲಿ ಮೂರು ದಿನ ಶೋಧ ಕಾರ್ಯಾಚರಣೆ ನಡೆಸಿತು. ಅಪರಾಧ ವಿಭಾಗದ ಪಿಎಸ್ಐ ವಾಸು ಸ್ಥಳದಲ್ಲಿದ್ದರು. ಮರಣೋತ್ತರ ಪರೀಕ್ಷೆ ನಡೆಸಿ ಎಲ್ಲ ಮೃತದೇಹಗಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಯಿತು. ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.