
ಹೂವಿನಹಡಗಲಿ : ತುಂಗಭದ್ರಾ ನದಿ ತೀರದ ಐತಿಹಾಸಿಕ ಸುಪ್ರಸಿದ್ಧ ಮೈಲಾರ ಸುಕ್ಷೇತ್ರದಲ್ಲಿ ನೆಲೆಸಿರುವ ಮೈಲಾರಲಿಂಗಸ್ವಾಮಿಯು ಭಕ್ತರ ಇಷ್ಟಾರ್ಥ ನೆರವೇರಿಸುವ ದೈವ. ಈ ನಂಬಿಕೆಯಿಂದ ರಾಜ್ಯ, ಹೊರ ರಾಜ್ಯಗಳ ಅಪಾರ ಭಕ್ತರು ಸ್ವಾಮಿಯನ್ನು ಮನೆಯ ದೇವರು, ಮನದ ದೇವರಾಗಿ ಪೂಜಿಸುತ್ತಾರೆ, ಆರಾಧಿಸುತ್ತಾರೆ.
ಏಳುಕೋಟಿ ಭಕ್ತರ ಆರಾಧ್ಯ ದೈವ ಮೈಲಾರಲಿಂಗಸ್ವಾಮಿ ಭಂಡಾರ ಪ್ರಿಯ. ಹಾಗಾಗಿ ಮೈಲಾರ ಸುಕ್ಷೇತ್ರದಲ್ಲಿ ಭಂಡಾರವೇ ಪ್ರಧಾನವಾಗಿದೆ. ಸ್ವಾಮಿಗೆ ಭಕ್ತರು ಹಣ್ಣು, ಕಾಯಿ, ಹೂ ಜತೆಗೆ ಭಂಡಾರದ ಅರ್ಚನೆ ನೆರವೇರಿಸಿ ಭಕ್ತಿ ಮೆರೆಯುತ್ತಾರೆ. ಈ ನೆಲ ಸ್ಪರ್ಶಿಸುವ ಭಕ್ತರೆಲ್ಲ ಹಣೆಗೆ ಭಂಡಾರ ಧರಿಸಿ, ಮನದಲ್ಲಿ ಸ್ವಾಮಿಯನ್ನು ನೆನೆಯುತ್ತಾರೆ.
ಮೈಲಾರಲಿಂಗ ಸ್ವಾಮಿಯನ್ನು ಹಿಂದುಳಿದ ಸಮುದಾಯಗಳು ಸೇರಿದಂತೆ ವೀರಶೈವರು, ಬ್ರಾಹ್ಮಣರು ಮನೆದೇವರಾಗಿ ಪೂಜಿಸುತ್ತಾರೆ. ಮುಸ್ಲಿಮರು, ಲಂಬಾಣಿಗರು ಸ್ವಾಮಿಯ ಭಕ್ತರಾಗಿರುವುದರಿಂದ ಮೈಲಾರಲಿಂಗ ಸ್ವಾಮಿಯನ್ನು ‘ಜಾತ್ಯತೀತ ದೇವರು’ ಎಂದು ಕರೆಯುತ್ತಾರೆ. ಕರ್ನಾಟಕ ಸೇರಿದಂತೆ ನೆರೆಯ ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶದಲ್ಲಿಯೂ ಸ್ವಾಮಿಯ ಭಕ್ತರಿದ್ದಾರೆ.
ವಿಶಿಷ್ಟ ಸಂಪ್ರದಾಯ, ಆಚರಣೆಗಳಿಂದ ಮೈಲಾರಲಿಂಗನ ಪರಂಪರೆ ನಾಡಿನಲ್ಲಿ ಗಮನ ಸೆಳೆದಿವೆ. ಇಲ್ಲಿನ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಗೆ ಪ್ರಾಚೀನ ಇತಿಹಾಸವಿದೆ. ಕೋರಿ ಅಂಗಿ, ಕುಂಚಿಗೆ ತೊಟ್ಟು, ಒಂದು ಕೈಯಲ್ಲಿ ಡಮರುಗ, ಮತ್ತೊಂದು ಕೈಯಲ್ಲಿ ಭಂಡಾರದ ಬಟ್ಟಲು ಹಿಡಿದು ಧಾರ್ಮಿಕ ನೆಲೆಗಳನ್ನು ಹೊತ್ತು ತಿರುಗುವ ಗೊರವ ಪರಿವಾರ ಮೈಲಾರ ಜಾತ್ರೆಯ ಕೇಂದ್ರ ಬಿಂದುವಾಗಿದ್ದಾರೆ. ಇವರು ಇಲ್ಲದಿದ್ದರೆ ಜಾತ್ರೆಯ ವಿಧಿವಿಧಾನ, ಆಚರಣೆಗಳು ಪೂರ್ಣಗೊಳ್ಳುವುದಿಲ್ಲ. ಗೊರವ ಪರಿವಾರದ ಡಮರುಗದ ಸದ್ದು, ಭಕ್ತರ ‘ಏಳು ಕೋಟಿ, ಏಳು ಕೋಟಿಗೂ ಚಾಂಗ್ ಮಲೋ…’ ಸ್ವಾಮಿಯ ಉದ್ಘೋಷ ಸುಕ್ಷೇತ್ರದಲ್ಲಿ ಮಾರ್ದನಿಸುತ್ತಿರುತ್ತದೆ.
ಕಾರಣಿಕ ನುಡಿಯೇ ‘ಭವಿಷ್ಯವಾಣಿ’
ಮೈಲಾರ ಕಾರಣಿಕ ಮಹೋತ್ಸವಕ್ಕೆ ಪೌರಾಣಿಕ ಹಿನ್ನೆಲೆ ಇದೆ. ಹಿಂದೆ ಭೂಲೋಕದಲ್ಲಿ ರಾಕ್ಷಸರ ಉಪಟಳ ಹೆಚ್ಚಾದಾಗ ಸಾಕ್ಷಾತ್ ಶಿವ ಮೈಲಾರಲಿಂಗನ ಅವತಾರವೆತ್ತಿ ಇಲ್ಲಿನ ಡೆಂಕನ ಮರಡಿಯಲ್ಲಿ ರಾಕ್ಷಸರ ಮರ್ದನ ಮಾಡಿದ್ದನೆಂಬ ಪ್ರತೀತಿ ಇದೆ. ಅದರ ವಿಜಯೋತ್ಸವದ ಸಂಕೇತವಾಗಿ ಪ್ರತೀವರ್ಷ ಕಾರಣಿಕ ಮಹೋತ್ಸವ ಆಚರಿಸಿಕೊಂಡು ಬರಲಾಗಿದೆ ಎಂದು ಹಿರಿಯರು ಹೇಳುತ್ತಾರೆ. ಕಾರಣಿಕ ಪರಂಪರೆ ಶತಮಾನದಿಂದಲೂ ನಡೆದುಕೊಂಡು ಬಂದಿದೆ. ಸುಕ್ಷೇತ್ರದ ಧಾರ್ಮಿಕ ಕೈಂಕರ್ಯ ನೆರವೇರಿದ ಬಳಿಕ ಗೊರವಯ್ಯ ಬಿಲ್ಲು ಏರಿ ‘ಸದ್ದಲೇ’ ಎಂದು ಉದ್ಘರಿಸುತ್ತಾರೆ. ಡೆಂಕನಮರಡಿಯಲ್ಲಿ ಸೇರಿರುವ ಲಕ್ಷಾಂತರ ಭಕ್ತ ಪರಿಷೆ ಸ್ತಬ್ದಗೊಳ್ಳುವ ಆ ಕ್ಷಣ ಕೌತುಕ ಎನಿಸುತ್ತದೆ. ಗೊರವಯ್ಯ ಆಕಾಶ ದಿಟ್ಟಿಸಿ ಸ್ವಾಮಿಯ ನುಡಿ ನುಡಿಯುತ್ತಾನೆ. ಗೂಡಾರ್ಥದಿಂದ ಕೂಡಿದ ಕಾರಣಿಕ ನುಡಿಯು ಭವಿಷ್ಯವಾಣಿ ಆಗಿರಲಿದೆ ಎಂಬುದು ಭಕ್ತರ ನಂಬಿಕೆ. ಈ ನುಡಿಯನ್ನು ಮಳೆ ಬೆಳೆ ರಾಜಕೀಯ ವಾಣಿಜ್ಯ ಕ್ಷೇತ್ರಗಳ ಮೇಲೆ ತಾಳೆ ಹಾಕಿ ವಿಶ್ಲೇಷಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.