ಮರಿಗೆಮ್ಮದೇವಿ ಕಾರ್ತಿಕೋತ್ಸವ
ಹರಪನಹಳ್ಳಿ (ವಿಜಯನಗರ ಜಿಲ್ಲೆ) : ಪಶುಪಾಲನೆ ಮತ್ತು ಹಾಲು ಮಾರಾಟವನ್ನೇ ಪ್ರಧಾನ ವೃತ್ತಿಯನ್ನಾಗಿಸಿಕೊಂಡಿರುವ ಗೌಳಿಗರು ಮಂಗಳವಾರ ತಮ್ಮ ಕುಲದೇವತೆ ಮರಿಗೆಮ್ಮ ದೇವಿ ಕಾರ್ತಿಕೋತ್ಸವ ವಿಶೇಷವಾಗಿ ಆಚರಿಸಿದರು.
ಮರಿಗೆಮ್ಮ ದೇವಿ ಆರಾಧನೆ ನಿಮಿತ್ತ ಪಟ್ಟಣದ 50ಕ್ಕೂ ಅಧಿಕ ಕುಟುಂಬಗಳು ಎತ್ತಿನ ಬಂಡಿ, ವಾಹನಗಳ ಸಮೇತ 6 ಕಿ.ಮೀ.ದೂರದಲ್ಲಿರುವ ಅನಂತನಹಳ್ಳಿ ಸಮೀಪದ ಮರಿಗೆಮ್ಮ ದೇವಿ ದೇವಸ್ಥಾನದ ಸನ್ನಿಧಾನದಲ್ಲಿ ಕಾರ್ತಿಕೋತ್ಸವ ಆಚರಿಸಿ, ಮಳೆ, ಬೆಳೆ ಸಮೃದ್ಧವಾಗಲಿ ಎಂದು ಪ್ರಕೃತಿ ಮಾತೆ ಮರಿಗೆಮ್ಮ ದೇವಿಗೆ ಪ್ರಾರ್ಥನೆ ಸಲ್ಲಿಸಿ ಬುಧವಾರ ಬೆಳಗಿನ ಜಾವ ಪುನಃ ಸ್ವ ಗ್ರಾಮಗಳಿಗೆ ಮರಳಿದರು.
ಚಿತ್ರದುರ್ಗ, ದಾವಣಗೆರೆ ,ಹರಿಹರ ,ಶಿವಮೊಗ್ಗ, ಹಾವೇರಿ, ಹಾನಗಲ್ಲು, ರಾಣೇಬೆನ್ನೂರು, ಗಂಗಾವತಿ, ಕಂಪ್ಲಿ, ಮುದ್ಲಾಪುರ, ಸಂಡೂರು, ಹೊಸಪೇಟೆ, ಗೋವೇರಹಳ್ಳಿ, ಅನಂತನಹಳ್ಳಿ ಸೇರಿದಂತೆ ವಿವಿಧೆಡೆಗಳಿಂದ ಬಂದಿದ್ದ ಗೌಳಿಗರು, ಗೋಧಿ ಪಾಯಸ, ಅನ್ನ ಸಾಂಬಾರು ತಯಾರಿಸಿ, ಎಡೆ ಸಮರ್ಪಿಸಿದರು.
ಪಟ್ಟಣದಿಂದ ಮರಿಗೆಮ್ಮ ದೇವಸ್ಥಾನದವರೆಗೂ ನಡೆದ ಮೆರವಣಿಗೆಯಲ್ಲಿ ಮೈಲಾರಪ್ಪ ಮತ್ತು ನಿಂಗಪ್ಪ ಮರಿಗೆಮ್ಮದೇವಿಯ ವಿಗ್ರಹ ಹೊತ್ತು ಸಾಗಿದರು. ಯುವಕರ ನೃತ್ಯ, ಎತ್ತಿನ ಬಂಡಿ ಮತ್ತು ವಾಹನಗಳ ಸಾಲು ಆಕರ್ಷಿಸಿದವು.
‘ಪ್ರತಿ ವರ್ಷ ಕುಲ ದೇವತೆ ಮರಿಗೆಮ್ಮ ದೇವಿ ಸನ್ನಿಧಾನಕ್ಕೆ ತೆರಳಿ, ಅಲ್ಲಿ ವಿಶೇಷ ಪೂಜೆ ಸಲ್ಲಿಸುವ ಮಳೆ , ಬೆಳೆ ಸಮೃದ್ದಿ ಆಗಿ ನಾವು ಅವಲಂಭಿಸಿರುವ ಎಮ್ಮೆ. ಹಸುಗಳಿಗೆ ಸದೃಢ ಆರೋಗ್ಯ ಕೊಟ್ಟು ಕಾಪಾಡುವಂತೆ ಪ್ರಾರ್ಥನೆ ಸಲ್ಲಿಸುತ್ತೇವೆ’ ಎಂದು ಪುರಸಭೆ ಸದಸ್ಯ ಗೌಳಿ ವಿನಯ್ ತಿಳಿಸಿದರು. ಗೌಳಿಗರ ಮುಖಂಡರಾದ ಗೌಳಿ ವಿನಯ್, ಗಿರೀಶ್, ಪವನ್, ಶಾಂತೇಶ, ನಿಂಗಪ್ಪ, ಈಶ್ವರ, ಅಮೃತ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.