ADVERTISEMENT

ಹೆಚ್ಚುತ್ತಿದೆ ಪಿಯು ಕಾಲೇಜುಗಳ ಕಾರ್ಯಭಾರ

ವರ್ಷದಿಂದ ವರ್ಷಕ್ಕೆ ಪಿಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆ; ಮೂಲಸೌಕರ್ಯಕ್ಕೆ ಹೆಣಗಾಟ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 11 ಜೂನ್ 2022, 16:33 IST
Last Updated 11 ಜೂನ್ 2022, 16:33 IST

ಹೊಸಪೇಟೆ (ವಿಜಯನಗರ): ವರ್ಷದಿಂದ ವರ್ಷಕ್ಕೆ ಪಿ.ಯು ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಸಹಜವಾಗಿಯೇ ಕಾಲೇಜು ಸಿಬ್ಬಂದಿ ಮೇಲೆ ಹೆಚ್ಚಿನ ಕಾರ್ಯಾಭಾರ ಬೀಳುತ್ತಿದೆ.

ಇಷ್ಟೇ ಅಲ್ಲ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಮೂಲಸೌಕರ್ಯ ಕಲ್ಪಿಸಲು ಸಮಸ್ಯೆ ಎದುರಾಗುತ್ತಿದೆ. ಕೆಲ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಏರಿಕೆ ಆಗಿರುವುದರಿಂದ ಪ್ರಾಧ್ಯಾಪಕರು ಪಾಳಿ ರೂಪದಲ್ಲಿ ತರಗತಿಗಳನ್ನು ನಡೆಸುವ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಗೊತ್ತಾಗಿದೆ.

ವಿದ್ಯಾರ್ಥಿಗಳ ಸಂಖ್ಯೆ ಸತತ ಹೆಚ್ಚಾಗುತ್ತಿದ್ದರೂ ಕಲಿಕಾ ಸಿಬ್ಬಂದಿಯ ಸಂಖ್ಯೆಯಲ್ಲಿ ಹೆಚ್ಚೇನೂ ವ್ಯತ್ಯಾಸವಾಗಿಲ್ಲ. ಗ್ರಂಥಾಲಯ, ಹೊಸ ಕೊಠಡಿಗಳ ನಿರ್ಮಾಣ, ಶೌಚಾಲಯ, ಶುದ್ಧ ಕುಡಿಯುವ ನೀರು ಪೂರೈಕೆ, ಗುಣಮಟ್ಟದ ಕಲಿಕೆಯ ಮೇಲೆ ನೇರ ಪರಿಣಾಮ ಬೀಳುತ್ತಿದೆ.

ADVERTISEMENT

ಸರಾಸರಿ 500 ಹೆಚ್ಚಳ: ಪ್ರತಿ ವರ್ಷ ಒಂದು ಪಿ.ಯು. ಕಾಲೇಜಿನಲ್ಲಿ ಸರಾಸರಿ 400ರಿಂದ 500 ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕನಿಷ್ಠ ಆಟದ ಮೈದಾನಗಳು, ಸುಸಜ್ಜಿತ ಕೊಠಡಿಗಳಿಲ್ಲದೇ ಕಾಲೇಜುಗಳನ್ನು ನಡೆಸಲಾಗುತ್ತಿದೆ. ಅನೇಕ ಕಡೆಗಳಲ್ಲಿ ‘ಡಿ’ ಗ್ರುಪ್‌ ನೌಕರರು ಇಲ್ಲದೇ ಸ್ವಚ್ಛತೆ ಮರೀಚಿಕೆಯಾಗಿದೆ.

ನಿದರ್ಶನಕ್ಕೆ ಹೊಸಪೇಟೆಯ ಬಾಲಕಿಯರ ಸರ್ಕಾರಿ ಪಿ.ಯು ಕಾಲೇಜು ಒಂದರಲ್ಲೇ 3,000 ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ. ಸರ್ಕಾರದ ನಿರ್ದೇಶನದ ಪ್ರಕಾರ, ಬೆಳಿಗ್ಗೆ 10ರಿಂದ ಸಂಜೆ 5ರ ವರೆಗೆ ಕಾಲೇಜು ನಡೆಸಬೇಕು. ಆದರೆ, ಪಿ.ಯು. ಕಾಲೇಜಿನಲ್ಲೇ ಪ್ರೌಢಶಾಲೆ ಇರುವುದರಿಂದ ಬೆಳಿಗ್ಗೆ 7.30ರಿಂದ 11.30ರ ವರೆಗೆ ಕಾಲೇಜು ನಡೆಸಲಾಗುತ್ತದೆ. ಅನಂತರ ಪ್ರೌಢಶಾಲೆ ನಡೆಸಲಾಗುತ್ತಿದೆ. ಸುತ್ತಲೂ ವಾಣಿಜ್ಯ ಕಟ್ಟಡಗಳು ಅತಿಕ್ರಮಿಸಿಕೊಂಡಿದ್ದು, ಕಲಿಕೆಗೆ ಪ್ರಶಾಂತವಾದ ವಾತಾವರಣವೇ ಇಲ್ಲ. ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಿರುವುದರಿಂದ ಗಂಟೆಗಟ್ಟಲೇ ಶೌಚಾಲಯಕ್ಕೆ ಕಾದು ನಿಲ್ಲಬೇಕಾದ ಪರಿಸ್ಥಿತಿ ಇದೆ. ಅವಳಿ ಜಿಲ್ಲೆಗಳ ಅನೇಕ ಕಾಲೇಜುಗಳಲ್ಲಿ ಈ ದುಃಸ್ಥಿತಿ ಇದೆ.

‘ಮಕ್ಕಳ ಸಂಖ್ಯೆ ಹೆಚ್ಚಾಗಿರುವುದರಿಂದ ಪ್ರತಿಯೊಬ್ಬರ ಕಲಿಕೆ ಮೇಲೆ ಗಮನ ಹರಿಸಲು ಆಗುತ್ತಿಲ್ಲ. ಮಕ್ಕಳೊಂದಿಗೆ ಬೆರೆಯಲು ಸಾಧ್ಯವಾಗುತ್ತಿಲ್ಲ. ಕಾಟಾಚಾರಕ್ಕೆ ತರಗತಿಗಳನ್ನು ನಡೆಸುವಂತಾಗಿದೆ. ಪಿ.ಯು ಕಾಲೇಜುಗಳ ಸಂಖ್ಯೆ ಹೆಚ್ಚಿಸಬೇಕು. ಅಗತ್ಯ ಮೂಲಸೌಕರ್ಯ, ಸಿಬ್ಬಂದಿ ನೇಮಕಾತಿ ಮಾಡಬೇಕು’ ಎಂದು ಹೆಸರು ಹೇಳಲಿಚ್ಛಿಸದ ಸರ್ಕಾರಿ ಪಿ.ಯು. ಕಾಲೇಜಿನ ಹಿರಿಯ ಪ್ರಾಧ್ಯಾಪಕರೊಬ್ಬರು ತಿಳಿಸಿದರು.

ನಾಲ್ಕು ಕಾಲೇಜಿಗೆ ಪ್ರಸ್ತಾವ:

ಹೋದ ವರ್ಷ ಬಳ್ಳಾರಿ–ವಿಜಯನಗರ ಜಿಲ್ಲೆಯಲ್ಲಿ ಒಟ್ಟು 56,911 ವಿದ್ಯಾರ್ಥಿಗಳು ಪಿ.ಯು ಪ್ರಥಮ, ದ್ವಿತೀಯ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದರು. ಈ ವರ್ಷ ಈ ಸಂಖ್ಯೆ ಇನ್ನಷ್ಟು ಹೆಚ್ಚಾಗುವುದು ನಿಶ್ಚಿತ ಎಂದು ಎನ್ನುತ್ತಾರೆ ಡಿಡಿಪಿಯು.

ವಿಜಯನಗರ ಜಿಲ್ಲೆಯಲ್ಲಿ ಒಟ್ಟು 28 ಸರ್ಕಾರಿ ಪಿ.ಯು ಕಾಲೇಜುಗಳಿದ್ದರೆ, 15 ಅನುದಾನ, 45 ಅನುದಾನ ರಹಿತ ಕಾಲೇಜುಗಳಿವೆ. ಇನ್ನು, ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 19 ಸರ್ಕಾರಿ, 8 ಅನುದಾನ, 45 ಅನುದಾನರಹಿತ ಕಾಲೇಜುಗಳಿವೆ.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಈ ವರ್ಷ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹಿರೇಹೆಗ್ಡಾಳ್‌, ಕೂಡ್ಲಿಗಿ ಹಾಗೂ ಬಳ್ಳಾರಿಯಲ್ಲಿ ತಲಾ ಒಂದು ಪಿ.ಯು. ಕಾಲೇಜು ಆರಂಭಿಸಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇನ್ನಷ್ಟೇ ಅನುಮತಿ ಸಿಗಬೇಕಿದೆ. ಆದರೆ, ಈಗಾಗಲೇ ಕಾಲೇಜುಗಳು ಆರಂಭಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.