ADVERTISEMENT

ರಾಯಚೂರು| ಲೋಕೋಪಯೋಗಿ ಇಲಾಖೆಯಿಂದ ಭಾರಿ ಭ್ರಷ್ಟಾಚಾರ; ತನಿಖೆಗೆ ಆಗ್ರಹ

ಎಂ.ವಿನೋದ ರೆಡ್ಡಿ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ

​ಪ್ರಜಾವಾಣಿ ವಾರ್ತೆ
Published 18 ಜುಲೈ 2023, 16:22 IST
Last Updated 18 ಜುಲೈ 2023, 16:22 IST

ರಾಯಚೂರು: ದೇವದುರ್ಗ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರಸ್ತೆ ನಿರ್ಮಾಣ ಮಾಡುವಲ್ಲಿ ಲೋಕೋಪಯೋಗಿ ಇಲಾಖೆಯಿಂದ ಭಾರಿ ಭ್ರಷ್ಟಾಚಾರ ನಡೆಸಿದ್ದು ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿನೋದರೆಡ್ಡಿ ಒತ್ತಾಯಿಸಿದರು.

ಲೋಕೋಪಯೋಗಿ ಇಲಾಖೆ, ಕೆಬಜೆಎನ್ಎಲ್  ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯಿಂದ ಮಾಡಿದ ಕಾಮಗಾರಿ ಒಂದೇ ರಸ್ತೆಗೆ ಮೂರು ಬಿಲ್ ಸೃಷ್ಟಿಸಿ ಭ್ರಷ್ಟಾಚಾರ ಮಾಡಿದ್ದಾರೆ. ಮಾಜಿ ಶಾಸಕ ಶಿವನಗೌಡ ನಾಯಕ ಅವರಿಗೆ ಸೇರಿದ ರಂಜಿತಾ ಕನ್ಸ್ ಟ್ರಕ್ಷನ್  ಮೂಲಕ ಕಾಮಗಾರಿ ಮಾಡಿದ್ದು 2021 ಸಾಲಿನಲ್ಲಿ ಗಲಗ ಅರಕೇರಾ ವಯಾ ಗಣಜಲಿ ವರೆಗೆ 4.5 ಕಿಮೀ ರಸ್ತೆ ನಿರ್ಮಾಣಕ್ಕೆ ₹4.90 ಕೋಟಿ ನಿರ್ವಹಿಸಲಾಗಿದೆ. ಇದೇ ಕಾಮಗಾರಿಯನ್ನು 2020ರಲ್ಲಿ ಕೆಬಿಜೆಎನ್ ಎಲ್ ನಿಂದ 2020 ರಲ್ಲಿ ಗಣೇಖಲ್ ಗ್ರಾಮದಿಂದ ಗಣಜಲಿ ಗ್ರಾಮದ ಕಿ.ಮೀ ರಸ್ತೆಗೆ ₹20.80 ಕೋಟಿ ಬಲ್ ಮಾಡಲಾಗಿದೆ ಎಂದು ದೂರಿದರು.

ಸುಳ್ಳು ದಾಖಲೆಗಳು ಸೃಷ್ಟಿಸಿ ರಂಜಿತಾ ಕನ್ಸ್‌ಟ್ರಕ್ಷನ್‌ ಕಂಪನಿಗೆ ಹಣ ಪಾವತಿ ಮಾಡಿರುವುದು ಸಾರ್ವಜನಿಕರ ಕಣ್ಣಿಗೆ ಮಣ್ಣೆರಚಿದಂತಾಗಿದೆ. ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದಲ್ಲಿ ರಸ್ತೆ ನಿರ್ಮಿಸುವ ಕಾಮಗಾರಿಯ ಯಾವುದೇ ಸ್ಥಳದಲ್ಲಿ ರಂಜಿತಾ ಕನ್ಸ್ ಟ್ರಕ್ಷನ್  ಕಂಪನಿಗೆ ಸಂಬಂಧಿಸಿದ ವಾಹನ, ಮಷಿನರಿ, ಕೆಲಸಗಾರರಾಗಲಿ ಮತ್ತು ಅಧಿಕಾರಿಗಳಾಗಲಿ ಜಿಲ್ಲೆಯ ಯಾವೊಬ್ಬ ನಾಗರಿಕನೂ ಕಣ್ಣಾರೆ ಕಂಡಿಲ್ಲ. ಈ ಹೆಸರಿನಲ್ಲಿ ಕಂಪನಿ ಇರುವುದು ಅಧಿಕಾರಿಗಳ ಲೆಕ್ಕದಲ್ಲಿ ಮಾತ್ರ ಎಂದು ಆರೋಪಿಸಿದರು.

ADVERTISEMENT

ದೇವದುರ್ಗ ತಾಲ್ಲೂಕಿನ ರಸ್ತೆಗಳನ್ನು ಲೋಕೋಪಯೋಗಿ ಇಲಾಖೆಯಿಂದ ಹೊಸ ರಸ್ತೆಗಳನ್ನು ನಿರ್ಮಿಸಿದ್ದೇವೆ ಎಂದು ಸುಮಾರು ₹20 ಕೋಟಿ ರೂ ಅಧಿಕ ಮೊತ್ತವನ್ನು ರಂಜಿತಾ ಕನ್ಸ್ ಟ್ರಕ್ಷನ್ ಕಂಪನಿ ಕ್ಲಾಸ್ 1 ಗುತ್ತೇದಾರರ ಖಾತೆಗೆ ಸರ್ಕಾರದ ಹಣ ಪಾವತಿ ಮಾಡಲಾಗಿದೆ ಎಂದು ದೂರಿದರು.

ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಸರ್ಕಾರ ಹಣವನ್ನು ಲೂಟಿ ಮಾಡಿದ್ದಾರೆ. ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಗುತ್ತೇದಾರರ ಪರವಾನಗಿ ರದ್ದುಪಡಿಸಬೇಕು. ಇದಕ್ಕೆ ಸಹಕರಿಸಿದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ಚನ್ನಬಸಪ್ಪ ಮೆಕಾಲೆ ಮತ್ತು ಕೆ.ಬಿ.ಜೆ.ಎನ್.ಎಲ್. ಕಾರ್ಯಪಾಲಕ ಎಂಜಿನಿಯರ್ ಸಣ್ಣ ಪರಶುರಾಮ ಅವರ ಅಧಿಕಾರಾವಧಿಯ ಸಮಯದಲ್ಲಿ ನಡೆದ ಕಾಮಗಾರಿಗಳನ್ನು ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿದರು.

ಮುಖಂಡ ವೆಂಕಟೇಶ, ಕೊಂಡಪ್ಪ, ಹೊನ್ನಪ್ಪ, ಫಿರೋಜ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.