ADVERTISEMENT

ಕಣ್ಮನ ಸೆಳೆವ ಶ್ರೀಮಂತ ವಾಸ್ತುಶಿಲ್ಪದ ದೇವಳ

ವಿಶ್ವನಾಥ ಡಿ.
Published 27 ಸೆಪ್ಟೆಂಬರ್ 2022, 6:17 IST
Last Updated 27 ಸೆಪ್ಟೆಂಬರ್ 2022, 6:17 IST
ಹರಪನಹಳ್ಳಿ ತಾಲ್ಲೂಕು ನೀಲಗುಂದ ಭೀಮೇಶ್ವರ ದೇವಸ್ಥಾನ
ಹರಪನಹಳ್ಳಿ ತಾಲ್ಲೂಕು ನೀಲಗುಂದ ಭೀಮೇಶ್ವರ ದೇವಸ್ಥಾನ   

ಹರಪನಹಳ್ಳಿ : ಮಲೆನಾಡು-ಬಯಲುಸೀಮೆಯ ಸಂಪರ್ಕಕೊಂಡಿ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕು ಶ್ರೀಮಂತ ವಾಸ್ತುಶಿಲ್ಪಗಳಿಂದ ಕೂಡಿರುವ ಐತಿಹಾಸಿಕ ದೇವಸ್ಥಾನಗಳ ತವರೂರು.

ತಾಲ್ಲೂಕಿನ ನೀಲಗುಂದ ಗ್ರಾಮದ ಕೆರೆಯ ದಂಡೆ ಮೇಲೆ ಭೀಮೇಶ್ವರ ದೇವಾಲಯ ರಾಷ್ಟ್ರೀಯ ಸ್ಮಾರಕ. ಕಲ್ಯಾಣಿ ಚಾಲುಕ್ಯರ ಅವಧಿಯಲ್ಲಿ ವೇಸರ ಶೈಲಿಯ ಕಲ್ಲಿನ ಸುಂದರ ತ್ರಿಕೂಟಾಚಲ ದೇವಸ್ಥಾನವಿದೆ. ಗೋಪುರ ಹೊಯ್ಸಳರ ಅವಧಿಯಲ್ಲಿ ಪೂರ್ಣಗೊಂಡಿದೆ.

ರಾಷ್ಟ್ರಕೂಟ, ಹೊಯ್ಸಳ, ಚಾಲುಕ್ಯ ಮತ್ತು ವಿಜಯನಗರ ಅರಸರ ಅವಧಿಯ ವಾಸ್ತುಶಿಲ್ಪಗಳ ಸಮ್ಮಿಲನವೇ ಬಾಗಳಿ ಗ್ರಾಮದ ಕಲ್ಲೇಶ್ವರ ದೇವಸ್ಥಾನ. ಗರ್ಭಗುಡಿ ರಾಷ್ಟ್ರಕೂಟರ ಶೈಲಿ, ಮುಖಮಂಟಪ ಹೊಯ್ಸಳ, ನವರಂಗ ಚಾಲುಕ್ಯ, ಗೋಪುರ ವಿಜಯನಗರ ಸಾಮ್ರಾಜ್ಯ ನೆನಪಿಸುತ್ತದೆ. 64 ಸ್ತಂಭಗಳಿದ್ದು, ಯುಗಾದಿ ಹಬ್ಬದ ದಿನ ಸೂರ್ಯರಶ್ಮಿ ನೇರವಾಗಿ ಈಶ್ವರ ವಿಗ್ರಹದ ಮೇಲೆ ಬೀಳುತ್ತವೆ. ಗ್ರಾಮದೊಳಗೂ ಪುರಾತನ ದೇವಾಲಯಗಳಿವೆ.

ADVERTISEMENT

ಅಲ್ಲಿಂದ ಒಂದು ಕಿ.ಮೀ.ದೂರದಲ್ಲಿರುವ ಕೂಲಹಳ್ಳಿಯಲ್ಲಿ 15ನೇ ಶತಮಾನದ ಪಂಚಗಣಾಧೀಶ್ವರರಾದ ಮದ್ದಾನೇಶ್ವರ ಮತ್ತು ಆತನ ಪುತ್ರ ಗೋಣಿಬಸವೇಶ್ವರ ದೇವಸ್ಥಾನ ಮತ್ತು ಗುಹೆಗಳಿವೆ. ಮಧ್ಯ ಕರ್ನಾಟಕದ ತಿರುಪತಿ ಎಂದೇ ಪ್ರಸಿದ್ದಿ ಹೊಂದಿರುವ ದೇವರ ತಿಮ್ಲಾಪುರದಲ್ಲಿ 60 ಅಡಿ ಎತ್ತರದ ಗೋಪುರ, 60 ಅಡಿ ಆಳದ ಪುಷ್ಕರಣಿ ಆಕರ್ಷಣೀಯ. ಕ್ಷೇತ್ರದ ಕುರಿತು ಕವಯತ್ರಿ ಹರಪನಹಳ್ಳಿ ಭೀಮವ್ವ 16ನೇ ಶತಮಾನದಲ್ಲಿ ‘ಧನ್ಯನಾದೆ ತಿಮಲಾಪುರೀಶ ದೊರೆಯೇ’ ಕೀರ್ತನೆ ರಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.