ಹೊಸಪೇಟೆ (ವಿಜಯನಗರ): ಹೊಸಪೇಟೆ ಸುತ್ತಮುತ್ತಲಿನ ಗಣಿಬಾಧಿತ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರ ವಸತಿ ಸಮಸ್ಯೆ ಬಹಳ ಗಂಭೀರ ವಿಚಾರ ಎಂಬ ವಿಷಯ ಕರ್ನಾಟಕ ಗಣಿಬಾಧಿತ ಪ್ರದೇಶ ಪರಿಸರ ಪುನಶ್ಚೇತನ ನಿಗಮದಲ್ಲಿ (ಕೆಎಂಇಆರ್‌ಸಿ) ಈಗಾಗಲೇ ಚರ್ಚೆಯಾಗಿದ್ದರೂ, ಪಾಪಿನಾಯಕನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಕ್ಯಾಂಪ್‌ಗಳ ವಸತಿಗೆ ಮಾತ್ರ ₹33.23 ಕೋಟಿ ತೆಗೆದಿರಿಸಿದ್ದು ಕಂಡುಬಂದಿದೆ.
ಗಣಿಗಾರಿಕೆ ಬಾಧಿತ ವಲಯಗಳ ಸಮಗ್ರ ಪರಿಸರ ಯೋಜನೆ (ಸಿಇಪಿಎಂಐಜೆಡ್) ಅಡಿಯಲ್ಲಿ ಸಲ್ಲಿಸಲಾದ ಯೋಜನಾ ಪ್ರಸ್ತಾವಗಳನ್ನು ಮೇಲುಸ್ತುವಾರಿ ಪ್ರಾಧಿಕಾರ ಅನುಮೋದನೆಗೆ ಅಂಗೀಕರಿಸಿರುವ ಕುರಿತಂತೆ ಕೆಎಂಇಆರ್‌ಸಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಅದರಲ್ಲಿ ಪಿ.ಕೆ.ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐದು ಗಣಿಬಾಧಿತ ಕ್ಯಾಂಪ್‌ಗಳಲ್ಲಿನ ವಸತಿ ರಹಿತರು ಮತ್ತು ಸೂರು ರಹಿತರಿಗೆ ಹೊಸ ಮನೆಗಳನ್ನು ಕಟ್ಟಿಸಿಕೊಡುವುದಕ್ಕೆ ಈ ಮೊತ್ತ ಬಳಸಲಾಗುತ್ತದೆ ಎಂದು ತಿಳಿಸಲಾಗಿದೆ.
ಪಿ.ಕೆ.ಹಳ್ಳಿ ವ್ಯಾಪ್ತಿಯ ಐದು ಕ್ಯಾಂಪ್‌ಗಳಲ್ಲಿ ಒಟ್ಟು 516 ಕುಟುಂಬಗಳು ವಾಸಿಸುತ್ತಿರುವುದು ಸಮೀಕ್ಷೆಯಿಂದ ಗೊತ್ತಾಗಿತ್ತು. ಆದರೆ ಅದರಲ್ಲಿ ಕೆಲವರಿಗೆ ಮನೆಗಳನ್ನು ನಿರ್ಮಿಸಿ ಆಗಿತ್ತು. ಹೀಗಾಗಿ ಕೊನೆಗೆ ಮನೆಗಳು ಇಲ್ಲದ 443 ಕುಟುಂಬಗಳು ಹಾಗೂ ಮನೆ ನಿವೇಶನ ಇಲ್ಲದ 27 ಕುಟುಂಬಗಳನ್ನು ಗುರುತಿಸಿ ಒಟ್ಟು 470 ಮಂದಿಗೆ ಮನೆ ಕಟ್ಟಿಸಿಕೊಡುವ ನಿಟ್ಟಿನಲ್ಲಿ ಸಲ್ಲಿಸಲಾದ ಯೋಜನೆಗೆ ಮೇಲುಸ್ತುವಾರಿ ಪ್ರಾಧಿಕಾರ ಅನುಮೋದನೆಗೆ ಅಂಗೀಕರಿಸಿದೆ. ರಾಜೀವ್ ಗಾಂಧಿ ಗೃಹ ನಿರ್ಮಾಣ ನಿಗಮ ಮನೆ ಕಟ್ಟಿಸಿಕೊಡಲಿದೆ.
ಅನುಮೋದನೆ ದೊರೆತ ಮನೆಗಳು ಎಲ್ಲೆಲ್ಲಿ ಎಷ್ಟು ನಿರ್ಮಾಣವಾಗಲಿವೆ ಎಂಬುದನ್ನು ಪ್ರತ್ಯೇಕಿಸಿ ನೋಡುವುದಾದರೆ, ಡಾಲ್ಮಿಯಾ ಕ್ಯಾಂಪಿನಲ್ಲಿ 97, ನಾಗಪ್ಪ ಕ್ಯಾಂಪಿನಲ್ಲಿ 116, ಪಿಬಿಎಸ್ ಕ್ಯಾಂಪಿನಲ್ಲಿ 50, ಶಂಕರನಗರ ಕ್ಯಾಂಪಿನಲ್ಲಿ 80 ಹಾಗೂ ಜಿ.ಜಿ.ಕ್ಯಾಂಪಿನಲ್ಲಿ 115 ಮನೆಗಳನ್ನು ನಿರ್ಮಿಸಲು ಅನುಮತಿ ಸಿಕ್ಕಿದೆ.
ಹೊಸಪೇಟೆ ನಗರಸಭೆ ವ್ಯಾಪ್ತಿಯೊಳಗೆ ಬರುವ 13 ಕ್ಯಾಂಪ್‌ಗಳಲ್ಲಿ 1,648 ಕುಟುಂಬಗಳು ವಾಸ ಮಾಡುತ್ತಿವೆ. ಇಲ್ಲೂ ಕೆಲವರಿಗೆ ಮನೆಗಳ ನಿರ್ಮಾಣ ಆಗಿದೆ. ಸಮೀಕ್ಷೆಯ ಕೊನೆಯಲ್ಲಿ 961 ಕುಟುಂಬಗಳಿಗೆ ಮನೆಗಳಿಲ್ಲ ಮತ್ತು 421 ಕುಟುಂಬಗಳಿಗೆ ಮನೆ ನಿವೇಶನ ಇಲ್ಲ. ಹೀಗಾಗಿ ಇವರಿಗೆ 1,382 ಮನೆಗಳನ್ನು ನಿರ್ಮಿಸಿಕೊಡಬೇಕಾಗುತ್ತದೆ ಎಂಬ ಸಮಗ್ರ ವರದಿಯನ್ನು ಸಿದ್ಧಪಡಿಸಲಾಗಿದೆ. ಕೆಎಂಇಆರ್‌ಸಿ ಪ್ರಾಧಿಕಾರದಿಂದ ಅನುಮತಿ ಸಿಗುವುದನ್ನು ಇಲ್ಲಿನ ನಿವಾಸಿಗಳು ಎದುರು ನೋಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.