ADVERTISEMENT

ಬಿಜೆಪಿ ತೊರೆಯುವ ವದಂತಿ ನಡುವೆ ಪಕ್ಷದ ರೋಡ್‌ ಶೋದಲ್ಲಿ ಶಾಸಕ ಗೋಪಾಲಕೃಷ್ಣ ಭಾಗಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 13:03 IST
Last Updated 15 ಮಾರ್ಚ್ 2023, 13:03 IST
   

ಕೂಡ್ಲಿಗಿ (ವಿಜಯನಗರ): ಬಿಜೆಪಿ ತೊರೆಯಲಿದ್ದಾರೆ ಎಂಬ ವದಂತಿ ನಡುವೆ ಶಾಸಕ ಎನ್‌.ವೈ. ಗೋಪಾಲಕೃಷ್ಣ ಅವರು ಸ್ವಕ್ಷೇತ್ರದ ಪಟ್ಟಣದಲ್ಲಿ ಬುಧವಾರ ನಡೆದ ಪಕ್ಷದ ರೋಡ್‌ ಶೋದಲ್ಲಿ ಭಾಗವಹಿಸಿ ಗಮನ ಸೆಳೆದರು.

ವಯಸ್ಸಿನ ಕಾರಣಕ್ಕಾಗಿ ಗೋಪಾಲಕೃಷ್ಣ ಅವರಿಗೆ ಬಿಜೆಪಿ ಟಿಕೆಟ್‌ ನೀಡುತ್ತಿಲ್ಲ. ಅವರು ಕಾಂಗ್ರೆಸ್‌ ಸೇರ್ಪಡೆಯಾಗಿ ಮೊಳಕಾಲ್ಮೂರು ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿವೆ. ಆದರೆ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಪಟ್ಟಣದಲ್ಲಿ ನಡೆದ ರೋಡ್‌ ಶೋದಲ್ಲಿ ಕಾಣಿಸಿಕೊಂಡರು.

ರೋಡ್‌ ಶೋ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ, ಗೋಪಾಲಕೃಷ್ಣ ಅವರು ಪಕ್ಷ ಬಿಡುವುದರ ಬಗ್ಗೆ ವದಂತಿ ಇದೆಯಲ್ಲ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ನಳಿನ್‌ಕುಮಾರ್‌ ಪ್ರತಿಕ್ರಿಯಿಸಿ, ‘ನಾವು ಯಾರಿಗೂ ಟಿಕೆಟ್ ಕೊಡಲ್ಲ ಎಂದು ಹೇಳಿಲ್ಲ. ಯಾರಿಗೆ ಟಿಕೆಟ್‌ ನೀಡಬೇಕು ಎಂಬುದು ನಿರ್ಧಾರವಾಗಿಲ್ಲ. ಎಲ್ಲವೂ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಸಮಯ ಬಂದಾಗ ಅಭ್ಯರ್ಥಿಗಳನ್ನು ಘೋಷಿಸಲಾಗುತ್ತದೆ. ಸಚಿವ ವಿ. ಸೋಮಣ್ಣ ಅವರಿಗೆ ಬೇರೆ ಬೇರೆ ಹೇಳಿಕೆಗಳಿಂದ ನೋವಾಗಿದೆ. ಬೇಜಾರಿನಿಂದ ಕಣ್ಣೀರು ಹಾಕಿದ್ದಾರೆ. ಬಿಜೆಪಿಯಲ್ಲಿಯೇ ಇರುತ್ತೇನೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಯಾರು ಕೂಡ ಪಕ್ಷ ಬಿಟ್ಟು ಹೋಗುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಸಚಿವ ಬಿ. ಶ್ರೀರಾಮುಲು ಅವರು ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಅವರ ಅಭಿಪ್ರಾಯ ತಿಳಿಸಿದ್ದಾರೆ. ಆದರೆ, ಅಂತಿಮವಾಗಿ ನಮ್ಮ ಪಕ್ಷದ ಸಂಸದೀಯ ಮಂಡಳಿ ನಿರ್ಧಾರ ಮಾಡುತ್ತದೆ’ ಎಂದರು.

‘ಉದ್ಘಾಟನೆಯಾಗಿ ಮೂರೇ ದಿನಕ್ಕೆ ಬೆಂಗಳೂರು–ಮೈಸೂರು ದಶಪಥ ರಸ್ತೆ ಕಿತ್ತು ಹೋಗಿರುವುದು ಗಮನಕ್ಕೆ ಬಂದಿದೆ. ಹೊಸ ಮಣ್ಣು ಹಾಕಿ ರಸ್ತೆ ಮಾಡಿದಾಗ ರಸ್ತೆಯಲ್ಲಿ ವ್ಯತ್ಯಾಸವಾಗುತ್ತದೆ. ಸರಿಪಡಿಸುವ ಕೆಲಸ ನಡೆಯುತ್ತದೆ’ ಎಂದು ತಿಳಿಸಿದರು.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರು ಇಂಧನ ಖಾತೆ ಸಚಿವರಿದ್ದಾಗ ವಿದ್ಯುತ್ ಕೇಳಿದವರನ್ನು ಬಂಧಿಸುವ ಕೆಲಸ ಮಾಡಿದ್ದರು. ಇವರು ಜನರಿಗೆ ಉಚಿತ ವಿದ್ಯುತ್ ನೀಡಲು ಹೇಗೆ ಸಾಧ್ಯ. ಅವರ ಪಕ್ಷ ಅಧಿಕಾರಿಕ್ಕೆ ಬರಲ್ಲ ಎಂಬ ಗ್ಯಾರಂಟಿ ಇದೆ’ ಎಂದು ವ್ಯಂಗ್ಯವಾಗಿ ನುಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.