ADVERTISEMENT

ಹಂಪಿಯ ಮಾಲ್ಯವಂತದಲ್ಲಿ ರಾಮಕಥಾ ನಿರೂಪಕ ಮೊರಾರಿ ಬಾಪು ಪ್ರವಚನ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2025, 16:11 IST
Last Updated 30 ಅಕ್ಟೋಬರ್ 2025, 16:11 IST
<div class="paragraphs"><p>ರಾಮಕಥಾ ನಿರೂಪಕ ಮೊರಾರಿ&nbsp;ಬಾಪು </p></div>

ರಾಮಕಥಾ ನಿರೂಪಕ ಮೊರಾರಿ ಬಾಪು

   

ಹೊಸಪೇಟೆ (ವಿಜಯನಗರ): ಶ್ರೀರಾಮನು ನಡೆದಾಡಿದ ಪುಣ್ಯಭೂಮಿಯಲ್ಲಿ ಹನುಮ ಸಹಿತ ರಾಮನ ಕುರಿತು ಪ್ರವಚನ ಮಾಡುವ ಅವಕಾಶ ನನಗೆ ಲಭಿಸಿದೆ. ಇದಕ್ಕಿಂತ ದೊಡ್ಡ ಖುಷಿಯ ಸಂಗತಿ ಬೇರೆ ಇಲ್ಲ. ಈ ಪುಣ್ಯ ಭೂಮಿಯಲ್ಲಿ ಹುಟ್ಟಿದ ನೀವು ಪುಣ್ಯವಂತರು, ನಡೆದಾಡುತ್ತಿರುವ ನಾವೆಲ್ಲರೂ ಅದೃಷ್ಟವಂತರು ಎಂದು ರಾಮಕಥಾ ನಿರೂಪಕ ಮೊರಾರಿ ಬಾಪು ಹೇಳಿದರು.

ತಮ್ಮ ಐತಿಹಾಸಿಕ 11 ದಿನಗಳ ರಾಮಯಾತ್ರೆಯ ಭಾಗವಾಗಿ ಹಂಪಿ ಸಮೀಪದ ಮಾಲ್ಯವಂತ ರಘುನಾಥ ದೇವಸ್ಥಾನ ಬಳಿಯಲ್ಲಿ ಗುರುವಾರ ಪ್ರವಚನ ನೀಡಿದ ಅವರು ಈ ವಿಷಯ ತಿಳಿಸಿದರು.

ADVERTISEMENT

‘ರಾಮಾಯಣದ ಒಂದೊಂದು ಸನ್ನಿವೇಶಗಳೂ ಅದ್ಭುತ, ಅದು ಸಾರುವ ಸಂದೇಶ ಅನನ್ಯ. ಶ್ರೀರಾಮನು ಸೀತೆಯನ್ನು ಅರಸಿ ಕಿಷ್ಕಿಂಧೆ ಭಾಗಕ್ಕೆ ಬಂದಾಗ ಆತನಿಗೆ ದೊಡ್ಡ ಸೈನ್ಯದ ಜತೆಗೆ ಮನೋಬಲವೇ ಸಿಗುತ್ತದೆ. ಅದೆಲ್ಲವೂ ಈ ನೆಲದ ಗುಣ ಎಂದೇ ಹೇಳಬೇಕು. ಹನುಮನಿಗೆ ತನ್ನ ಶಕ್ತಿಯ ಅರಿವು ಇಲ್ಲದಾಗ ಜಾಂಬವಂತ ಅದನ್ನು ನೆನಪಿಸಿಕೊಡುತ್ತಾನೆ. ಮುಂದೆ ಸೀತೆಗೆ ಸಂದೇಶ ರವಾನಿಸುವುದು, ರಾಮನ ಜತೆಗೆ ಮರು ಪ್ರಯಾಣ, ಮತ್ತೆ ಕಿಷ್ಕಿಂಧೆಗೆ ಬಂದು ಇಲ್ಲಿನ ವಾನರ ಸೇನೆ ಮಾಡಿದ ಉಪಕಾರಕ್ಕೆ ಕೃತಜ್ಞತೆ ಸಲ್ಲಿಸುವುದು... ಇದೆಲ್ಲವೂ ಒಂದು ಭಾವನಾತ್ಮಕ ಸನ್ನಿವೇಶಗಳು. ಅಂತಹ ನೆಲದಲ್ಲಿ ನಾವಿಂದು ರಾಮಕಥಾ ಆಲಿಸುತ್ತಿದ್ದೇವೆ’ ಎಂದು ಮೊರಾರಿ ಬಾಪು ಹೇಳಿದರು.

ಮಾಲ್ಯವಂತ ರಘುನಾಥ ದೇವಸ್ಥಾನದಲ್ಲಿ ನಿತ್ಯ ಶ್ರೀರಾಮ ಸಂಕೀರ್ತನೆ ನಡೆಯುತ್ತಿರುವುದಕ್ಕೆ ಬಹಳಷ್ಟು ಮೆಚ್ಚುಗೆ ಸೂಚಿಸಿದ ಅವರು, ಇಂತಹ ಪುಣ್ಯ ಸ್ಥಳದ ಇನ್ನೂ ಸಾವಿರಾರು ವರ್ಷಗಳ ಕಾಲ ಹೀಗೆಯೇ ದಿವ್ಯ ಸಂದೇಶ ಸಾರುತ್ತಲೇ ಇರುತ್ತದೆ ಎಂದರು.

ಆರಂಭದಲ್ಲಿ ಮೊರಾರಿ ಬಾಪು ಅವರು ಸುಮಾರು ಅರ್ಧ ಗಂಟೆ ಕಾಲ ಧ್ಯಾನ, ಭಜನೆಯಲ್ಲಿ ತಲ್ಲೀನರಾದರು. ನೂರಾರು ಮಂದಿ ಆ ಭಜನೆಯಲ್ಲಿ ತಮ್ಮ ಧ್ವನಿಯನ್ನೂ ಸೇರಿಸಿ ಭಾವಪರವಶರಾದರು. ಬಳಿಕ ಬಾಪು ಅವರು ಚಾತುರ್ಮಾಸ್ಯದ ವೈಶಿಷ್ಟ್ಯತೆ, ಬುದ್ಧ, ಜೈನ ಧರ್ಮಗಳೊಂದಿಗೆ ಇರುವ ಅವಿನಾಭಾನ ಸಂಬಂಧಗಳ ಕುರಿತು ಕೇಳಲಾದ ಪ್ರಶ್ನೆಗಳಿಗೆ ಸವಿವರವಾದ ಉತ್ತರ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.