ADVERTISEMENT

ಕೊಟ್ಟೂರೇಶ್ವರ ಸ್ವಾಮಿ‌ ಮೂರ್ತಿಯನ್ನು ಕಣ್ತುಂಬಿಕೊಂಡ 40 ಸಾವಿರಕ್ಕೂ ಅಧಿಕ ಭಕ್ತರು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 15:30 IST
Last Updated 10 ಮಾರ್ಚ್ 2025, 15:30 IST
   

ಹರಪನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಕೂಲಹಳ್ಳಿಯಲ್ಲಿ ಪಂಚಗಣಾಧೀಶ್ವರರಲ್ಲಿ ಒಬ್ಬರಾದ ಮದ್ದಾನೇಶ್ವರರ ಪುತ್ರ ಗೋಣಿ ಬಸವೇಶ್ವರ ಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ಸಂಜೆ ಸಂಭ್ರಮದಿಂದ ಜರುಗಿತು.

ಜಾತ್ರೆ ಗೋಣಿ ಬಸವೇಶ್ವರನ ಹೆಸರಿನಲ್ಲಿ ನಡೆಯುತ್ತದೆ, ಆದರೆ ರಥವೇರುವ ಕೊಟ್ಟೂರೇಶ್ವರ ಸ್ವಾಮಿ‌ ಮೂರ್ತಿ ಸರ್ವ ಜನಾಂಗದ ಭಕ್ತರು‌ ಕಣ್ತುಂಬಿಕೊಳ್ಳುವ ಸಂಭ್ರಮ‌ ಇಲ್ಲಿ ಸೃಷ್ಟಿಯಾಗಿತ್ತು.

ದೇವಸ್ಥಾನದ ಆವರಣದಲ್ಲಿ ಭಾನುವಾರ ಬಸವ ಉತ್ಸವ ಜರುಗಿತು. ಸೋಮವಾರ ಬೆಳಿಗ್ಗೆ ಗೋಣಿ ಬಸವೇಶ್ವರ ಸ್ವಾಮಿಗೆ ವಿಶೇಷ ಅಲಂಕಾರ, ಅಭಿಷೇಕ ನಡೆಯಿತು.

ADVERTISEMENT

ಮದ್ದಾನೇಶ್ವರ ಸ್ವಾಮಿ, ಕೊಟ್ಟೂರೇಶ್ವರ ಸ್ವಾಮಿ ದೇವಸ್ಥಾನದಲ್ಲೂ ಅಲಂಕಾರ ಅಭಿಷೇಕ ನಡೆಯಿತು. ಸಂಜೆ 4.30ಕ್ಕೆ ಮದ್ದಾನೇಶ್ವರ ಸಂಸ್ಥಾನದ ಆವರಣದಲ್ಲಿ ಪಟ್ಟದ ಚಿನ್ಮಯಿ ಸ್ವಾಮೀಜಿ, ಅರುಣ್ ಸ್ವಾಮೀಜಿಗಳ‌ ನೇತೃತ್ವದಲ್ಲಿ ಪೂಜೆ ನೆರವೇರಿಸಿ ಪಟ್ಟದ ಕುದುರೆ, ಚಾಮರ‌ ಬೀಸುತ್ತಿದ್ದ‌ ಮುತ್ತೈದೆಯರು, ನಂದಿದ್ವಜ, ಪಂಜಿನ, ಬೆತ್ತದ ಸೇವಕರು‌ ಅರ್ಚಕರು ಮೆರವಣಿಗೆಯಲ್ಲಿ ಸಾಗಿದರು.

ಕೊಟ್ಟೂರೇಶ್ವರನ ದೇವಸ್ಥಾನ ತಲುಪಿ ಗುರುಬಸವೇಶ್ವರ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಕೂರಿಸಿಕೊಂಡು ರಥಬೀದಿಗೆ ತರಲಾಯಿತು. ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ಸ್ವಾಮಿಯನ್ನು ರಥದಲ್ಲಿ ಸ್ಥಾಪಿಸಲಾಯಿತು.

ಸ್ವಾಮಿ ಧ್ವಜವನ್ನು ₹ 4,01,100 ಹರಾಜಿನಲ್ಲಿ ಭಕ್ತ ಬೇವಿನಹಳ್ಳಿ ಪಕ್ಕೀರಪ್ಪ ಪಡೆದುಕೊಳ್ಳುತ್ತಿದ್ದಂತೆ ಸಕಲ ವಾದ್ಯಮೇಳ, ಭಕ್ತರ ಜಯ ಘೋಷಗಳು ಮೊಳಗುತ್ತಿದ್ದಂತೆಯೇ, ಉತ್ತರಾಭಿಮುಖವಾಗಿ ರಥಕ್ಕೆ ಸಂಜೆ 5.41ಕ್ಕೆ ಚಾಲನೆ ನೀಡಲಾಯಿತು.

ಭಕ್ತರು ರಥದ ಚಕ್ರಕ್ಕೆ ತೆಂಗಿನ ಕಾಯಿ, ಬಾಳೆ ಹಣ್ಣು ಎಸೆದು ಭಕ್ತಿ ಸಲ್ಲಿಸಿದರು.

ಪಟ್ಟದ ಚಿನ್ಮಯಿ ಸ್ವಾಮೀಜಿ ಮಾತನಾಡಿ, 'ಪವಾಡ‌ ಪುರುಷ ಗೋಣಿ ಬಸವೇಶ್ವರ ರಾಜ್ಯ, ಆಂಧ್ರ ಸೇರಿ ವಿವಿಧೆಡೆ 777 ಮಠ ನಿರ್ಮಿಸಿದ್ದಾರೆ. ಕೇಳಿದ್ದನ್ನು ಕೊಡುವ ಮಹಿಮ, ಜಾತ್ರೆಗೆ ಬಂದಿರುವ ಭಕ್ತರಿಗೆ ಒಳ್ಳೆಯದಾಗಲಿ' ಎಂದರು.

ರಥದ ಆವರಣದಲ್ಲಿ ಭಕ್ತರು‌ ಕಲ್ಲಿನ ಚೂರುಗಳಿಂದ ಮನೆ, ತೊಟ್ಟಿಲು, ಚಪ್ಪರ ನಿರ್ಮಿಸಿ‌ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು.

ರಥಬೀದಿಯಲ್ಲಿ ಬಾವುಟಗಳ ಹಾವಳಿಗೆ ಭಕ್ತರು ಬೇಸರ ವ್ಯಕ್ತಪಡಿಸಿದರು. ಸಂಚಾರ ದಟ್ಟಣೆ ಸಮಸ್ಯೆ ಆಗದಂತೆ ಪೊಲೀಸರು ನೋಡಿಕೊಂಡರು. ಆಡಳಿತಾಧಿಕಾರಿ ಎಚ್.ಕೆ.ಮಲ್ಲಪ್ಪ, ಡಿವೈಎಸ್ಪಿ ವೆಂಕಟಪ್ಪ ನಾಯಕ, ಸಿಪಿಐ ನಾಗರಾಜ್ ಕಮ್ಮಾರ, ಎಸ್ಐ ಶಂಭುಲಿಂಗ ಹಿರೇಮಠ ಹಾಗೂ ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಗ್ರಾಮದ ಮುಖಂಡರು ಇದ್ದರು.

ದಾವಣಗೆರೆ, ವಿಜಯನಗರ, ಬಳ್ಳಾರಿ, ಹಾವೇರಿ, ಗದಗ, ಬಾಗಲಕೋಟೆ, ಕೊಪ್ಪಳ, ಚಿತ್ರದುರ್ಗ, ಶಿವಮೊಗ್ಗ, ಆಂಧ್ರ ಸೇರಿದಂತೆ ಹಲವೆಡೆಗಳಿಂದ ಭಕ್ತರು ಆಗಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.