ಹೊಸಪೇಟೆ (ವಿಜಯನಗರ): ಯೂರಿಯಾ ಗೊಬ್ಬರಕ್ಕೆ ರೈತರು ಹಲವೆಡೆ ಮುಗಿಬೀಳುರುವಂತೆಯೇ ನ್ಯಾನೊ ಯೂರಿಯಾದ ಬಳಕೆಯ ಕುರಿತು ಗುರುವಾರ ಇಲ್ಲಿಗೆ ಸಮೀಪದ ಚಿತ್ತವಾಡ್ಡಿಯ ಭತ್ತದ ಗದ್ದೆಯಲ್ಲಿ ಡ್ರೋನ್ ಮೂಲಕ ಯೂರಿಯಾ ಸಿಂಪಡಣೆಯ ಪ್ರಾತ್ಯಕ್ಷಿಕೆ ನಡೆಸಲಾಯಿತು.
ಕೃಷಿ ಇಲಾಖೆ, ಇಫ್ಕೋ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಜಿಲ್ಲಾ ಪಂಚಾಯಿತಿ ಸಿಇಒ ಮೊಹಮ್ಮದ್ ಅಲಿ ಅಕ್ರಂ ಷಾ, ಇಫ್ಕೊ ಸಂಸ್ಥೆಯ ಜಿ.ಗೋವಿಂದರಾಜ್, ಜಂಟಿ ಕೃಷಿ ನಿರ್ದೇಶಕ ಡಿ.ಟಿ.ಮಂಜುನಾಥ್ ಉಪಸ್ಥಿತಿಯಲ್ಲಿ ನಡೆಯಿತು.
ನ್ಯಾನೊ ಯೂರಿಯಾ ಒಂದು ದ್ರವ ರೂಪದ ರಸಗೊಬ್ಬರವಾಗಿದ್ದು, ಸಾಂಪ್ರದಾಯಿಕ ಯೂರಿಯಾ ಗೊಬ್ಬರಕ್ಕಿಂತ 8-10 ಪಟ್ಟು ಪರಿಣಾಮಕಾರಿಯಾಗಿದೆ. ಬೆಳೆಗಳಿಗೆ ತ್ವರಿತ ಪೋಷಕಾಂಶ ನೀಡುತ್ತದೆ. ನ್ಯಾನೊ ಯೂರಿಯಾ ಬಳಸಿದರೆ, ಸಾಂಪ್ರದಾಯಿಕ ಗ್ರಾನುಲರ್ ಯೂರಿಯಾ ಬಳಕೆ ಶೇ 50ರಷ್ಟು ಕಡಿಮೆ ಮಾಡಬಹುದು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದರು.
ಕೃಷಿ ಅಧಿಕಾರಿಗಳು ನ್ಯಾನೊ ಯೂರಿಯಾ ಕುರಿತು ಮಾಹಿತಿ ನೀಡಿ, ಜಿಲ್ಲೆಯ ಬಹುತೇಕ ಮಣ್ಣಿನಲ್ಲಿ ಸಾರಜನಕ ಕೊರತೆ ಹೆಚ್ಚಾಗಿರುತ್ತದೆ. ಸಾರಜನಕದ ಉದ್ದೇಶಿತ ಮತ್ತು ನಿಖರವಾದ ಬಳಕೆಗಾಗಿ ನ್ಯಾನೊ ಯೂರಿಯಾ ಪ್ಲಸ್ ಒಂದು ಉತ್ತಮ ರಸಗೊಬ್ಬರ. ಇದು ಗಿಡಕ್ಕೆ ಬೇಕಾಗಿರುವ ಸಾರಜನಕ ಮತ್ತು ರಂಜಕವನ್ನು ಸರಿಯಾದ ಪ್ರಮಾಣದಲ್ಲಿ ಒದಗಿಸುವುದರಿಂದ ಗಿಡದ ಬೆಳೆವಣಿಗೆ ಹಾಗೂ ಬೇರಿನ ಬೆಳವಣಿಗೆ ಉತ್ತಮವಾಗಿರುತ್ತದೆ. ಇವುಗಳನ್ನು ಬಳಸುವುದರಿಂದ ಬೆಳೆಗಳ ಉತ್ಪಾದಕತೆ ಹೆಚ್ಚಾಗಿ ವೆಚ್ಚ ಕಡಿಮೆಯಾಗುವುದರಿಂದ ರೈತರ ಆದಾಯ ಹೆಚ್ಚಾಗುತ್ತದೆ ಎಂದರು.
Highlights - ವಾಯು ಮತ್ತು ನೀರಿನ ಮಾಲಿನ್ಯ ಕಡಿಮೆ ಕೃಷಿ ಉತ್ಪನ್ನಗಳ ಉತ್ಪಾದಕತೆ, ಗುಣಮಟ್ಟ ಸುಧಾರಣೆ ಸಂಗ್ರಹಿಸಲು, ಸಾಗಿಸಲು ಸುಲಭ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.