ಹೂವಿನಹಡಗಲಿ: ತಾಲ್ಲೂಕಿನ ನವಲಿ ಗ್ರಾಮದ ಊರಮ್ಮದೇವಿ ಜಾತ್ರೆ ಶುಕ್ರವಾರ ಉಡಿ ತುಂಬುವ ಕಾರ್ಯಕ್ರಮದೊಂದಿಗೆ ಸಂಪನ್ನಗೊಂಡಿತು.
ಕಳೆದ ಮಂಗಳವಾರದಿಂದ ದೇವಿ ಸನ್ನಿಧಾನದಲ್ಲಿ ವಿಶೇಷ ಪೂಜೆ, ಧಾರ್ಮಿಕ ಕೈಂಕರ್ಯಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು. ಗ್ರಾಮದ ಮುಖ್ಯ ಬೀದಿಯಲ್ಲಿ ದೇವಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಜರುಗಿತು. ಸಮಾಳ, ನಂದಿಕೋಲು, ಉರುಮೆ ವಾದ್ಯಗಳು ಉತ್ಸವದ ಮೆರಗು ಹೆಚ್ಚಿಸಿದವು.
ಬುಧವಾರ ಬೆಳಗಿನ ಜಾವ ದೇವಿಯನ್ನು ಚೌತಮನೆಕಟ್ಟೆಯಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮಳೆ, ಬೆಳೆ ಸಮೃದ್ಧಿಗಾಗಿ ಪ್ರಾರ್ಥಿಸಿ ಗ್ರಾಮದ ಸುತ್ತಲೂ ಹುಲುಸು ಚೆಲ್ಲಲಾಯಿತು. ನವಲಿ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹಣ್ಣು, ಕಾಯಿ ಅರ್ಪಿಸಿ ದೇವಿ ದರ್ಶನ ಪಡೆದರು. ದೀಡು ನಮಸ್ಕಾರ ಸೇರಿದಂತೆ ವಿವಿಧ ಹರಕೆ ತೀರಿಸಿದರು.
ಗ್ರಾಮದಲ್ಲಿ ಒಂಭತ್ತು ವರ್ಷಗಳ ಬಳಿಕ ನಡೆದ ಊರಮ್ಮ ದೇವಿ ಜಾತ್ರೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಗ್ರಾಮದ ದೇವಸ್ಥಾನಗಳಿಗೆ, ಮುಖ್ಯ ಬೀದಿಗೆ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು. ಗ್ರಾಮದ ಹಿರಿಯರು, ದೈವಸ್ಥರು ಧಾರ್ಮಿಕ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.