ADVERTISEMENT

ಕೇರಿ ನವರಾತ್ರಿ ‘ಮಾರ್ನಾಮಿ’ ವೈಭವ

ದಸರಾ:’ ಏಳು ಕೇರಿಗಳಲ್ಲಿ ಶಕ್ತಿದೇವತೆಗಳ ಸಡಗರದ ಮೆರವಣಿಗೆ

ಎಂ.ಜಿ.ಬಾಲಕೃಷ್ಣ
Published 30 ಸೆಪ್ಟೆಂಬರ್ 2025, 5:04 IST
Last Updated 30 ಸೆಪ್ಟೆಂಬರ್ 2025, 5:04 IST
ಮ್ಯಾಸಕೇರಿ ಹುಲಿಗೆಮ್ಮ, ಕೊಂಗಮ್ಮ
ಮ್ಯಾಸಕೇರಿ ಹುಲಿಗೆಮ್ಮ, ಕೊಂಗಮ್ಮ   

ಹೊಸಪೇಟೆ (ವಿಜಯನಗರ): ಮೈಸೂರು ದಸರಾದ ಮೂಲ ಬೇರು ಇರುವ ಹೊಸಪೇಟೆಯು ವಿಜಯನಗರ ಸಾಮ್ರಾಜ್ಯದ ಮಹಾನ್‌ ಶೂರ ಸೇನಾನಿಗಳಾಗಿದ ಬೇಡ ನಾಯಕರ ನೆಲೆಯಾಗಿತ್ತು. ಸಾಮ್ರಾಜ್ಯ ಅಳಿದರೂ ದಸರಾ ಆಚರಣೆ ‘ಮಾರ್ನಾಮಿ’ ಹೆಸರಲ್ಲಿ ಇನ್ನೂ ಉಳಿದು ಬಂದಿದ್ದು, ಏಳು ಕೇರಿಗಳಲ್ಲಿ ಅಮ್ಮಂದಿರ ಉತ್ಸವ, ಸವಾರಿ, ಹಲವು ಅಮ್ಮಂದಿರ ಪ್ರತಿಬಿಂಬದಂತೆ ಕಂಗೊಳಿಸುತ್ತಿದೆ.

ವಿಜಯನಗರ ಕಾಲದಲ್ಲಿ ಹಂಪಿಯ ಮಹಾನವಮಿ ದಿಬ್ಬದ ಬಳಿಯಲ್ಲಿ ವೈಭವದ ದಸರಾ ನಡೆಯುತ್ತಿತ್ತು. ಮಹಾನವಮಿ ಆಡುಮಾತಲ್ಲಿ ಮಾರ್ನಾಮಿ ಎಂದಾಯಿತು. ತುಳು ಭಾಷೆಯಲ್ಲಿ ಸಹ ನವರಾತ್ರಿಗೆ ‘ಮಾರ್ನಮಿ’ ಎಂದೇ ಹೆಸರು. ಸ್ವತಃ ಕೃಷ್ಣದೇವರಾಯ ತುಳು ವಂಶಕ್ಕೆ ಸೇರಿದ ಅರಸ. ಹೀಗಾಗಿ ಭಾಷಾ ಸಾಮ್ಯತೆ ಬಂತೇ ಎಂಬ ಕುತೂಹಲವೂ ಇದೆ. ಕೃಷ್ಣದೇವರಾಯನ ಕಾಲದಲ್ಲಿ ಏಳು ಸಾವಿರ ಬೇಡ ನಾಯಕರ ಪಡೆಯೇ ಸಾಮ್ರಾಜ್ಯದ ರಕ್ಷಾಕವಚವಾಗಿತ್ತು.

‘1565ರಲ್ಲಿ ರಕ್ಕಸತಂಗಡಿ ಯುದ್ಧದಲ್ಲಿ ವಿಜಯನಗರ ಸಾಮ್ರಾಜ್ಯದ ಪತನದ ನಂತರ ಏಳು ಸಾವಿರ ಬೇಡರ ಪಡೆ ಏಳು ಕೇರಿಗಳಾಗಿ ಮಾರ್ಪಾಟಾದವು. ಪ್ರತಿಯೊಂದು ಕೇರಿಯಲ್ಲೂ ಹೆಣ್ಣು ದೇವತೆಗಳನ್ನು (ಶಕ್ತಿ ದೇವತೆ) ಸ್ಥಾಪನೆ ಮಾಡಿದರು. ಆಗಿನ ಕಾಲದಲ್ಲಿ ಮುಂದುವರಿದ ಜನಾಂಗದವರು ಬೇಡ ಜನಾಂಗದವರನ್ನು ತಮ್ಮ ದೇವಾಲಯಗಳಿಗೆ ಬಿಟ್ಟುಕೊಡುತ್ತಿರಲಿಲ್ಲ. ಹೀಗಾಗಿ ತಾವೇ ತಮ್ಮ ದೇವತೆಗಳನ್ನು ಸ್ಥಾಪಿಸಿಕೊಂಡರು’ ಎಂದು ವಿವರಣೆ ನೀಡುತ್ತಾರೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ.ತಾರಿಹಳ್ಳಿ ಹನುಮಂತಪ್ಪ.

ADVERTISEMENT

ಏಳು ಕೇರಿಗಳೇ ಈಗಿನ ದಸರಾದ ಕೇಂದ್ರ ಬಿಂದುಗಳು. ಮ್ಯಾಸಕೇರಿ, ತಳವಾರಕೇರಿ, ಚಿತ್ರಕೇರಿ, ಜಂಬಾನಳ್ಳಿಕೇರಿ, ಉಕ್ಕಡಕೇರಿ, ಬಾಣದಕೇರಿ ಹಾಗೂ ಬಂಡೆಕೇರಿಗಳ ಪೈಕಿ ಬಂಡೆಕೇರಿಯಲ್ಲಿ ಮಾತ್ರ ಅಮ್ಮನ ಭಕ್ತರು ಅಷ್ಟಾಗಿ ಇಲ್ಲ, ಉಳಿದ ಆರೂ ಕೇರಿಗಳಲ್ಲಿ ವಾರದಿಂದೀಚೆಗೆ ಹಬ್ಬ ಕಳೆಗಟ್ಟಿದೆ. ಮ್ಯಾಸಕೇರಿಯ ಹುಲಿಗೆಮ್ಮ, ಕೊಂಗಮ್ಮ, ತಳವಾರಕೇರಿಯ ರಾಂಪುರ ದುರ್ಗಮ್ಮ, ಚಿತ್ರಕೇರಿಯ ತಾಯಮ್ಮ, ಬಾಣದಕೇರಿಯ ನಿಜಲಿಂಗಮ್ಮ,  ಉಕ್ಕಡಕೇರಿಯ ಜಲದುರ್ಗಮ್ಮ ಹಾಗೂ ಜಂಬಾನಳ್ಳಿಕೇರಿಯ ತಾಯಮ್ಮ ದೇವಿಯ ಪಲ್ಲಕ್ಕಿ ಮೆರವಣಿಗೆ ಅತ್ಯಾಕರ್ಷಕ.

ಶಕ್ತಿದೇವತೆಗಳೆಂದರೆ ಉಗ್ರ ಸ್ವರೂಪಿಗಳು. ಪಿತೃಪಕ್ಷದಲ್ಲಿ ಮಾತ್ರ ಅವುಗಳಿಗೆ ತಮ್ಮ ಕ್ಷೇತ್ರದಲ್ಲಿ ಸುತ್ತಾಡಲು ಅವಕಾಶ ಇದೆ. ನವರಾತ್ರಿಯ ಒಂಭತ್ತು ದಿನಗಳು ಅವುಗಳಿಗೆ ತೊಟ್ಟಿಲ ಸೇವೆ ನಡೆಯುತ್ತದೆ. ಆಯುಧ ಪೂಜೆಯ ದಿನ ಮಾತ್ರ ತಮ್ಮಕ್ಷೇತ್ರ ಬಿಟ್ಟು ಹೊರಹೋಗಲು ಅವಕಾಶ ಇದೆ.

ಪಲ್ಲಕ್ಕಿ ಮೆರವಣಿಗೆ ಮನೆಗೆ ತೆರಳಿ, ಭಕ್ತರಿಗೆ ಆಶೀರ್ವಾದ ಮಾಡುತ್ತದೆ. ಈ ವೇಳೆ ಭಕ್ತರು, ಮನೆಯಲ್ಲಿರುವ ದವಸ-ಧಾನ್ಯ, ಹೂಹಣ್ಣು ಹಾಗೂ ಕಾಣಿಕೆ ಸಲ್ಲಿಸಿ, ಭಕ್ತಿ ಸಮರ್ಪಣೆ ಮಾಡುತ್ತಾರೆ. ಈ ವೇಳೆ ಮಹಿಳೆಯರು ಸೋಬಾನ ಪದಗಳು ಹಾಡಿ, ಭಕ್ತಿಭಾವ ಮೆರೆಯುತ್ತಾರೆ.  ಮಹಾಲಯ ಅಮಾವಾಸ್ಯೆಯಂದು ಶಕ್ತಿ ದೇವತೆಗೆಳನ್ನು ತೊಟ್ಟಿಲ ಸೇವೆಗೆ ಕೂಡಿಸುವುದು, ತೊಟ್ಟಿಲು ತೂಗುವುದು, ಒಂಭತ್ತೂ ದಿನ ದೇವಿಯೆ ಪ್ರತಿಮೆಗಳಿಗೆ ನಿತ್ಯ ಒಂದು ಹೊಸ ರೇಷ್ಮೆ ಸೀರೆ ತೊಡಿಸಿ ಅಲಂಕಾರ ಮಾಡುವುದು, ಇಡೀ ರಾತ್ರಿ ದೇವಿಯ ಮುಂದೆ ಸಾಂಪ್ರದಾಯಿಕ ಹಾಡುಗಳಿಂದ ದೇವಿಯನ್ನು ಆರಾಧಿಸುವುದು ಇಲ್ಲಿ ನಡೆಯುತ್ತ ಬಂದಿದೆ. ಕೇರಿಗಳಲ್ಲಿ ಅಳವಡಿಸಲಾದ ವಿದ್ಯುತ್ ದೀಪಗಳು ರಾತ್ರಿಯನ್ನು ಹಗಲು ಮಾಡುತ್ತವೆ, ಮೈಸೂರಿಗೆ ಹೋಲಿಸಿಸುವುದು ಸಾಧ್ಯವಿಲ್ಲವಾದರೂ, ಅದರ ತುಣುಕೊಂದು ಹೊಸಪೇಟೆಯ ಭಾಗದಲ್ಲಿ ಬಂದು ಬಿದ್ದಂತೆ ಕಾಣಿಸಿದರೆ ಅಚ್ಚರಿ ಇಲ್ಲ.

ಪ್ರೊ.ತಾರಿಹಳ್ಳಿ ಹನುಮಂತಪ್ಪ

‘ಅಮ್ಮನವರ ಬನ್ನಿ’

‘ಊರಬನ್ನಿ’ ವಿಜಯನಗರ ಕಾಲದಲ್ಲಿ ಮಹಾನ್‌ ಶೂರ ಸೇನಾನಿಗಳಾಗಿದ್ದ ಬೇಡ ನಾಯಕರು ಮಹಾನವಮಿ ದಿಬ್ಬದ ಮೇಲೆ ಕುಳಿತು ವೀಕ್ಷಿಸುತ್ತಿದ್ದ ರಾಜರ ಮುಂದೆ ತಮ್ಮ ಶಕ್ತಿ ಪ್ರದರ್ಶನ ಮಾಡಿ ಮುಂದಕ್ಕೆ ಸಾಗಿ ಬನ್ನಿ ಸ್ವೀಕರಿಸುತ್ತಿದ್ದರು. ಈಗಲೂ ಆ ಪರಂಪರೆ ಪರೋಕ್ಷ ರೀತಿಯಲ್ಲಿ ನಡೆಯುತ್ತಿದೆ. ಕೇರಿಗಳ ದೇವತೆಗಳನ್ನು ಪಲ್ಲಕ್ಕಿಯಲ್ಲಿ ಹೊತ್ತು ಸಾಗುವ ಭಕ್ತರು ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲೇ ಸ್ಥಾಪನೆಯಾದ ಧರ್ಮದಗುಡ್ಡದ ಚನ್ನಬಸವೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿನ ಉತ್ಸವ ಮೂರ್ತಿಯ ಜತೆಗೆ ಶಮೀ ವೃಕ್ಷಕ್ಕೆ ಪ್ರದಕ್ಷಿಣೆ ಹಾಕಿ ಬನ್ನಿ ಮುಡಿಯುತ್ತವೆ. ಈ ಸಂಪ್ರದಾಯಕ್ಕೆ ‘ಅಮ್ಮನವರ ಬನ್ನಿ’ ಎಂದು ಹೆಸರು. ಅಲ್ಲಿಂದ ಕೇರಿಗಳಿಗೆ ವಾಪಸಾಗುವ ದೇವತೆಗಳು ರಾತ್ರಿ ಇಡೀ ಡೊಳ್ಳು ಕುಣಿತ ಕೋಲಾಟ ಭಜನೆ ಬೆಂಕಿ ಭರಾಟೆ ಕುಸ್ತಿ ಸೋಬಾನೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಬಂಡಿಯ ಚಕ್ರ ಬಿಚ್ಚುವ ಜೋಡಿಸುವ ರೋಮಾಂಚಕ ಪ್ರದರ್ಶನಗಳಿಗೆ ಸಾಕ್ಷಿಯಾಗುತ್ತವೆ. ಮರುದಿನ ವಿಜಯದಶಮಿಯಂದು ಬೆಳಿಗ್ಗೆ ತಮ್ಮ ಸ್ವಸ್ಥಾನ ಸೇರಿಕೊಳ್ಳುತ್ತವೆ. ಅಂದು ‘ಊರಬನ್ನಿ’ಯ ಸಂಭ್ರಮ ಕೇರಿಗಳಲ್ಲಿ ಇರುತ್ತದೆ ಎಂದು ಹೇಳುತ್ತಾರೆ ಪ್ರೊ.ತಾರಿಹಳ್ಳಿ ಹನುಮಂತಪ್ಪ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.