ADVERTISEMENT

ಹಗರಿಬೊಮ್ಮನಹಳ್ಳಿ: ಬಿರುಬಿಸಿಲಲ್ಲಿ ಸಾಲು ಮರಗಳ ತಂಗಾಳಿ

ಸಿ.ಶಿವಾನಂದ
Published 27 ಏಪ್ರಿಲ್ 2025, 6:59 IST
Last Updated 27 ಏಪ್ರಿಲ್ 2025, 6:59 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳು ಗ್ರಾಮದಿಂದ ಅಡವಿ ಆನಂದೇವನಹಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗ ಬೇವಿನ ಮರಗಳಿಂದ ಕಂಗೊಳಿಸುತ್ತಿರುವುದು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕಡಲಬಾಳು ಗ್ರಾಮದಿಂದ ಅಡವಿ ಆನಂದೇವನಹಳ್ಳಿ ಗ್ರಾಮಕ್ಕೆ ತೆರಳುವ ಮಾರ್ಗ ಬೇವಿನ ಮರಗಳಿಂದ ಕಂಗೊಳಿಸುತ್ತಿರುವುದು   

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ತಾಲ್ಲೂಕಿನ ಅಡವಿ ಆನಂದೇವನಹಳ್ಳಿ ಮತ್ತು ಕಡಲಬಾಳು ಗ್ರಾಮಗಳ ನಡುವೆ ಐದು ಕಿಲೋಮೀಟರ್ ರಸ್ತೆಯ ಉದ್ದಕ್ಕೂ ಎರಡೂ ಬದಿಯಲ್ಲಿ ನೆಟ್ಟಿರುವ ಬೇವಿನ ಮರಗಳು ರಸ್ತೆಗೆ ತೋರಣ ಕಟ್ಟಿದಂತೆ ಕಂಗೊಳಿಸುತ್ತಿದ್ದು, ಬಿರುಬಿಸಿಲಿನ ಈ ದಿನಗಳಲ್ಲಿ ದಾರಿಹೋಕರಿಗೆ, ವಾಹನ ಚಾಲಕರಿಗೆ ತಂಗಾಳಿ ಬೀಸಿ ನೆಮ್ಮದಿ ನೀಡುತ್ತಿವೆ.

ಎರಡೂ ಗ್ರಾಮಗಳ ಸಮುದಾಯದ ಸಹಭಾಗಿತ್ವ ಮತ್ತು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಬೆಳೆದು ದೊಡ್ಡದಾಗಿರುವ ಈ ಮರಗಳು ಎರಡು ಗ್ರಾಮಗಳ ರೈತರ, ಯುವಕರ, ಪರಿಸರ ಪ್ರಿಯರ ಇಚ್ಛಾಶಕ್ತಿಯ ದ್ಯೋತಕವಾಗಿ ನಿಂತುಕೊಂಡಿವೆ.

20 ವರ್ಷಗಳ ಹಿಂದೆ ನೆಟ್ಟ ಮರಗಳು ಇಂದು ದಾರಿಯುದ್ದಕ್ಕೂ ಚಪ್ಪರ ಹಾಕಿದಂತೆ ದೊಡ್ಡದಾಗಿ ಬೆಳೆದಿವೆ, ಈ ಮಾರ್ಗವು ಅಡವಿ ಆನಂದೇವನಹಳ್ಳಿ, ಅಂಕಸಮುದ್ರ ಸೇರಿದಂತೆ ಪಕ್ಷಿಧಾಮಕ್ಕೆ ತೆರಳುವವರಿಗೆ ತಂಗಾಳಿ ಮೂಲಕ ಸ್ವಾಗತಿಸುತ್ತದೆ. ಬೇಸಿಗೆಯ ಬಿಸಿಲಿನ ಬೇಗೆ ಈ ಮಾರ್ಗದಲ್ಲಿ ಸಂಚರಿಸುವವರಿಗೆ ಗೊತ್ತಾಗುವುದೇ ಇಲ್ಲ.

ADVERTISEMENT

ಅರಣ್ಯ ಇಲಾಖೆ ವಿಶೇಷ ಯೋಜನೆ ಅಡಿಯಲ್ಲಿ ನೆಡುತೋಪು ನಿರ್ಮಾಣಕ್ಕೆ ನೆಟ್ಟ 1,500ಕ್ಕೂ ಹೆಚ್ಚು ಗಿಡಗಳಿಗೆ ಅಡವಿ ಆನಂದೇವನಹಳ್ಳಿ ಗ್ರಾಮದ ಜನರು ರಕ್ಷಕರಾದರು, ಇಲಾಖೆಯ ನೌಕರರೊಂದಿಗೆ ಸೇರಿ ತಳ್ಳುವ ಬಂಡಿಗಳಲ್ಲಿ ನೀರೆರದು ಪೋಷಿಸಿದರು, ಇದರ ಫಲವೇ ಇಂದು ಬೇವಿನಮರಗಳ ಚಪ್ಪರವಾಗಿವೆ. ಹಚ್ಚ ಹಸಿರಾಗಿ ನೆರಳು ಮತ್ತು ತಂಗಾಳಿ ನೀಡುತ್ತಿದೆ.

ಅಂದು ಗಿಡಗಳನ್ನು ನೆಡುವಲ್ಲಿ ಕೈ ಜೋಡಿಸಿದವರು ಈಗ ಇಲ್ಲ, ಆದರೆ ಅವರು ಪಟ್ಟ ಶ್ರಮ ಮತ್ತು ಹೆಸರು ಇಂದಿಗೂ ಹಸಿರಾಗಿದೆ, ಇಲ್ಲಿ ಸಂಚರಿಸುವ ಅನೇಕರು ಅವರನ್ನು ದಿನಾ ಸ್ಮರಿಸುತ್ತಲೇ ಇರುತ್ತಾರೆ.

ಈ ಮಾರ್ಗದಲ್ಲಿ ಓಡಾಡುವುದೇ ಒಂದು ಖುಷಿ ಅಂಕಸಮುದ್ರ ಪಕ್ಷಿಧಾಮಕ್ಕೆ ಇದೇ ಮಾರ್ಗದಲ್ಲಿ ಹೋಗುತ್ತೇನೆ ಈ ರಸ್ತೆಯ ಸಂಚಾರ ಮನಸ್ಸಿಗೆ ಮುದ ನೀಡುತ್ತದೆ
ಎನ್.ಗುರುಬಸವರಾಜ ನಿವೃತ್ತ ಸೈನಿಕ ಹಗರಿಬೊಮ್ಮನಹಳ್ಳಿ
ಹಿಂದೆ ಅರಣ್ಯ ಇಲಾಖೆ ಸಮುದಾಯದ ಜತೆ ಸೇರಿ ಕೈಗೊಂಡ ಕಾರ್ಯ ಇಂದು ಅತ್ಯುತ್ತಮ ಫಲ ನೀಡಿದೆ ಸ್ವಯಂ ಪ್ರೇರಣೆಯಿಂದ ಉತ್ತಮ ಕೆಲಸವೊಂದು ದಾಖಲೆಯಾಗಿ ಉಳಿದಿದೆ
ರೇಣುಕಮ್ಮ ವಲಯ ಅರಣ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.