ಹೊಸಪೇಟೆ (ವಿಜಯನಗರ): ಮೈನಿಂಗ್ ಎಂಜಿನಿಯರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಎಂಇಎಐ) ಬಳ್ಳಾರಿ ಹೊಸಪೇಟೆ ಚಾಪ್ಟರ್ ಸುವರ್ಣ ಮಹೋತ್ಸವ ಸಂಭ್ರಮದಲ್ಲಿದ್ದು, ಅದರ ಅಂಗವಾಗಿ ಇಲ್ಲಿನ ಮಲ್ಲಿಗೆ ಹೋಟೆಲ್‌ನಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಮುಂದಿನ ತಲೆಮಾರಿನ ಗಣಿಗಾರಿಕೆ (ನೆಕ್ಸ್ಟ್‌ಜೆನ್ ಮೈನಿಂಗ್) ಕುರಿತ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಡಿಜಿಟಲ್ ಗಣಿಗಾರಿಕೆ ಕುರಿತು ವಿಶೇಷ ಗಮನ ಹರಿಸಲಾಗಿದೆ.
ಕಾರ್ಯಕ್ರಮ ಉದ್ಘಾಟಿಸಿದ ಧನಬಾದ್‌ನ ಗಣಿ ಸುರಕ್ಷತಾ ಮಹಾನಿರ್ದೇಶಕ ಉಜ್ವಲ್ ತಹ್ ಮಾತನಾಡಿ, ಗಣಿಗಾರಿಕೆ ವೇಳೆ ದಕ್ಷತೆಗೆ ಮಾತ್ರವಲ್ಲ, ಗಣಿ ಕಾರ್ಮಿಕರ ಸುರಕ್ಷತೆಯ ದೃಷ್ಟಿಯಿಂದಲೂ ಡಿಜಿಟಲೀಕರಣ ಅಗತ್ಯವಾಗಿದೆ. ಡಿಜಿಟಲೀಕರಣ ಗಣಿಗಾರಿಕೆ ಕ್ಷೇತ್ರದ ನಿಜವಾದ ವಿಕಾಸ ಸೂಚಿಸುತ್ತದೆ ಎಂದರು.
ಗೌರವ ಅತಿಥಿಯಾಗಿದ್ದ ಭಾರತೀಯ ಗಣಿ ಬ್ಯೂರೋ ದಕ್ಷಿಣ ವಲಯದ ಬೆಂಗಳೂರಿನ ಗಣಿಗಳ ನಿಯಂತ್ರಕ ಶೈಲೇಂದ್ರ ಕುಮಾರ್ ಮಾತನಾಡಿ, ನೆಕ್ಸ್ಟ್‌ಜೆನ್ ಮೈನಿಂಗ್’ ಎಂಬ ಸಮ್ಮೇಳನದ ಶೀರ್ಷಿಕೆಯೇ ಗಣಿಗಾರಿಕೆ ಕ್ಷೇತ್ರದ ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಮುಂದಿನ ಪೀಳಿಗೆಯ ಮೈನಿಂಗ್ ಎಂಜಿನಿಯರ್‌ಗಳು ವಹಿಸಬೇಕಾದ ನಿರ್ಣಾಯಕ ಪಾತ್ರವನ್ನು ಒತ್ತಿಹೇಳುತ್ತದೆ ಎಂದರು.
ಬಳ್ಳಾರಿ ವಲಯ-1 ರ ಗಣಿ ಸುರಕ್ಷತಾ ನಿರ್ದೇಶಕ ಕೃಷ್ಣೇಂದು ಮೊಂಡಲ್, ಬಳ್ಳಾರಿ ವಲಯ-2ರ ಗಣಿ ಸುರಕ್ಷತಾ ನಿರ್ದೇಶಕ ಯೋಹಾನ್ ಯೆಜೆರ್ಲಾ, ಎಂಇಎಐ ಉಪಾಧ್ಯಕ್ಷರು ಮತ್ತು ಇಆರ್‌ಎಂ ಗ್ರೂಪ್‌ನ ಸಿಒಒ ಧನಂಜಯ ಜಿ. ರೆಡ್ಡಿ, ಎಂಇಎಐ ಮಾಜಿ ಅಧ್ಯಕ್ಷ ಹಾಗೂ ಬಲ್ದೋಟಾ ಗ್ರೂಪ್‌ನ ಸಿಇಒ ಕೆ.ಮಧುಸೂದನ, ಎಂಇಎಐ ಬಳ್ಳಾರಿ-ಹೊಸಪೇಟೆ ಚಾಪ್ಟರ್‌ನ ಅಧ್ಯಕ್ಷ ಹಾಗೂ ಜೆಎಸ್‌ಡಬ್ಲ್ಯು ಸ್ಟೀಲ್ ಕಂಪನಿಯ ಪ್ರಧಾನ ವ್ಯವಸ್ಥಾಪಕ (ಗಣಿ) ಎಸ್.ಎಚ್.ಎಂ. ಮಲ್ಲಿಕಾರ್ಜುನ, ಸಂಘದ ಕಾರ್ಯದರ್ಶಿ ಹಾಗೂ ಬಲ್ದೋಟಾ ಗ್ರೂಪ್‌ನ ಪ್ರಧಾನ ವ್ಯವಸ್ಥಾಪಕ (ಗಣಿ) ಪಿ.ವಿ. ರಾವ್ ಉಪಸ್ಥಿತರಿದ್ದರು.
ದೇಶ, ವಿದೇಶಗಳ 250ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಸಮ್ಮೇಳನದಲ್ಲಿ ವಿವಿಧ ಮಳಿಗೆಗಳನ್ನು ಪ್ರದರ್ಶಿಸಲಾಯಿತು.
ಸುವರ್ಣ ಮಹೋತ್ಸವದ ಅಂಗವಾಗಿ, ಬಳ್ಳಾರಿ-ಹೊಸಪೇಟೆ ಭಾಗದ ಗಣಿಗಾರಿಕೆ ಉದ್ಯಮಕ್ಕೆ ದೀರ್ಘಕಾಲದ ಕೊಡುಗೆ ಮತ್ತು ಸೇವೆಗಾಗಿ ಪಿಬಿಎಸ್ ಕಂಪನಿಯ ಪ್ರಕಾಶ್, ಜಿಜಿ ಬ್ರದರ್ಸ್ ಕಂಪನಿಯ ವಿಶ್ವನಾಥ ಸ್ವಾಮಿ ಅವರನ್ನು ಸನ್ಮಾನಿಸಲಾಯಿತು.
ಬಳ್ಳಾರಿ-ಹೊಸಪೇಟೆ ಚಾಪ್ಟರ್ 1975ರಲ್ಲಿ ಸ್ಥಾಪನೆಯಾಗಿದ್ದು, ಈ ಭಾಗದ ಗಣಿಗಾರಿಕೆ ಕ್ಷೇತ್ರದ ಸುಧಾರಣೆಗೆ ನಿರಂತರವಾಗಿ ಶ್ರಮಿಸುತ್ತಿದೆ. ದೇಶದಾದ್ಯಂತ ಇರುವ 27 ಚಾಪ್ಟರ್‌ಗಳ ಪೈಕಿ ಈ ಚಾಪ್ಟರ್ ನಿರಂತರವಾಗಿ ‘ಅತ್ಯುತ್ತಮ ಚಾಪ್ಟರ್’ ಪ್ರಶಸ್ತಿಗೆ ಭಾಜನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.