ADVERTISEMENT

ವಿಜಯನಗರ: ಇಲ್ಲಗಳ ಬಡಾವಣೆ ಬಿಜೆ ಎಕ್ಸ್‌ಟೆನ್ಶನ್‌

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 15:21 IST
Last Updated 9 ಮಾರ್ಚ್ 2021, 15:21 IST
ಹೊಸಪೇಟೆಯ ಬಿ.ಜೆ. ಎಕ್ಸ್‌ಟೆನ್ಶನ್‌ನಲ್ಲಿ ಎಲ್ಲೆಡೆ ಹರಡಿಕೊಂಡಿರುವ ಕಸ
ಹೊಸಪೇಟೆಯ ಬಿ.ಜೆ. ಎಕ್ಸ್‌ಟೆನ್ಶನ್‌ನಲ್ಲಿ ಎಲ್ಲೆಡೆ ಹರಡಿಕೊಂಡಿರುವ ಕಸ   

ವಿಜಯನಗರ (ಹೊಸಪೇಟೆ): ಖಾಲಿ ಸೈಟುಗಳಲ್ಲಿ ಕಸದ ರಾಶಿ, ಹರಿಯದೆ ಒಂದೇ ಕಡೆ ನಿಂತಿರುವ ಚರಂಡಿ ನೀರು, ಬೀದಿಗುಂಟ ಸಾಲು ವಿದ್ಯುತ್‌ ಕಂಬಗಳಿದ್ದರೂ ಎರಡ್ಮೂರು ದೀಪಗಳಲ್ಲಷ್ಟೇ ಬೆಳಕು, ಎಲ್ಲೆಡೆ ಕತ್ತಲೋ ಕತ್ತಲು...

ಇದು ನಗರದ ಬಿ.ಜೆ. ಎಕ್ಸ್‌ಟೆನ್ಶನ್‌ ಬಡಾವಣೆಯ ದುಃಸ್ಥಿತಿ. ನಗರದ ಬಳ್ಳಾರಿ ರಸ್ತೆಯಲ್ಲಿರುವ ಈ ಬಡಾವಣೆ ಅಸ್ತಿತ್ವಕ್ಕೆ ಬಂದು ದಶಕಗಳೇ ಉರುಳಿದರೂ ಕನಿಷ್ಠ ಮೂಲಸೌಕರ್ಯ ಕಂಡಿಲ್ಲ.ವೈಜ್ಞಾನಿಕ ರೀತಿಯಲ್ಲಿ ಚರಂಡಿಗಳನ್ನು ನಿರ್ಮಿಸಿಲ್ಲ. ಇದರ ಪರಿಣಾಮವಾಗಿ ಎಲ್ಲೆಂದರಲ್ಲಿ ಹೊಲಸು ನೀರು ಸಂಗ್ರಹವಾಗುತ್ತದೆ. ಅದರಿಂದ ದುರ್ವಾಸನೆ, ಸೊಳ್ಳೆ ಕಾಟ ಹೆಚ್ಚಾಗಲು ಕಾರಣವಾಗಿದೆ.

ತ್ಯಾಜ್ಯ ವಿಲೇವಾರಿಗೂ ಅಗತ್ಯ ಕ್ರಮ ಕೈಗೊಂಡಿಲ್ಲ. ಜನ ಖಾಲಿ ನಿವೇಶನಗಳಲ್ಲೇ ಕಸ ಎಸೆಯುತ್ತಾರೆ. ಮಳೆ, ಗಾಳಿ ಬಂದರೆ ತ್ಯಾಜ್ಯವೆಲ್ಲ ಬಡಾವಣೆಯಲ್ಲಿ ಹರಡಿಕೊಂಡು ಪರಿಸರ ಮಲಿನವಾಗುತ್ತದೆ ಎನ್ನುವುದು ಸ್ಥಳೀಯರ ದೂರು.

ADVERTISEMENT

ಬಡಾವಣೆಯ ಬಹುತೇಕ ವಿದ್ಯುತ್ ದೀಪಗಳು ಕೆಟ್ಟು ಹೋಗಿರುವುದರಿಂದ ರಾತ್ರಿ ವೇಳೆ ಮಹಿಳೆಯರು, ಮಕ್ಕಳು ಓಡಾಡಲು ಭಯ ಪಡುವ ಪರಿಸ್ಥಿತಿ ಇದೆ. ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ಜನ ಕೊಳವೆಬಾವಿಗಳನ್ನೇ ನೆಚ್ಚಿಕೊಂಡಿದ್ದಾರೆ.

ಅಂದಹಾಗೆ, ಸ್ಥಳೀಯರು ಇಷ್ಟೊಂದು ಸಮಸ್ಯೆಗಳನ್ನು ಸಹಿಸಿಕೊಂಡು ಸುಮ್ಮನಿಲ್ಲ. ಅನೇಕ ಸಲ ನಗರಸಭೆಗೆ ಖುದ್ದು ಹೋಗಿ ಗೋಳು ತೋಡಿಕೊಂಡರೂ ಪ್ರಯೋಜನವಾಗಿಲ್ಲ.

‘ತಿಂಗಳಲ್ಲಿ ಒಂದೆರಡು ಸಲ ನಗರಸಭೆ ಸಿಬ್ಬಂದಿ ಕಸ ವಿಲೇವಾರಿ ಮಾಡಿದರೆ ಹೆಚ್ಚು. ನಗರಸಭೆಯ ವಾಹನಗಳಲ್ಲಿ ತ್ಯಾಜ್ಯ ಹಾಕುವುದರ ಬದಲು ಜನ ಖಾಲಿ ನಿವೇಶನಗಳಲ್ಲಿ ತಂದು ಸುರಿಯುತ್ತಾರೆ. ಇದರಲ್ಲಿ ಜನರದ್ದೂ ತಪ್ಪು ಇದೆ. ಆದರೆ, ಅಂತಹವರ ವಿರುದ್ಧ ಕ್ರಮ ಜರುಗಿಸಬೇಕು’ ಎನ್ನುತ್ತಾರೆ ಸ್ಥಳೀಯ ನಿವಾಸಿ ಎಸ್‌.ಎಚ್‌. ರಾಘವೇಂದ್ರ.

‘ಬಡಾವಣೆಯಲ್ಲಿ ಸಮರ್ಪಕವಾಗಿ ಚರಂಡಿಗಳನ್ನು ನಿರ್ಮಿಸಿಲ್ಲ. ಆಯಾ ಮನೆಗಳ ಚರಂಡಿ ನೀರು ಬೇಕಾಬಿಟ್ಟಿ ಹರಿದು ದುರ್ವಾಸನೆ ಸೃಷ್ಟಿಸುತ್ತದೆ. ಅನೇಕ ತಿಂಗಳ ಹಿಂದೆ ಬೀದಿ ದೀಪಗಳು ಕೆಟ್ಟು ಹೋಗಿವೆ. ಇದುವರೆಗೆ ದುರಸ್ತಿ ಮಾಡಿಲ್ಲ. ಈ ಕುರಿತು ನಗರಸಭೆಗೆ ಹೋಗಿ ದೂರು ಕೊಟ್ಟರೂ ಪ್ರಯೋಜನವಾಗಿಲ್ಲ. ನಗರಸಭೆಯ ಎಇಗೆ ಖುದ್ದು ಭೇಟಿ ಮಾಡಿ ವಿಷಯ ತಿಳಿಸಿದರೂ ಗಂಭೀರವಾಗಿ ತೆಗೆದುಕೊಂಡಿಲ್ಲ’ ಎಂದು ಗೋಳು ತೋಡಿಕೊಂಡರು.

‘ನಗರದ ಮಧ್ಯ ಭಾಗದಲ್ಲಿ ವಾಸಿಸುತ್ತಿದ್ದರೂ ನಾವು ಬೇರೆ ಪ್ರಪಂಚದಲ್ಲಿ ಇದ್ದೇವೆ ಎಂಬ ಭಾವನೆ ಇದೆ. ಯಾರೂ ನಮ್ಮ ಸಮಸ್ಯೆಗಳನ್ನು ಕೇಳುವವರಿಲ್ಲ. ಚುನಾವಣೆ ಬಂದಾಗಲಷ್ಟೇ ನೆನಪಾಗುತ್ತೇವೆ. ನಮ್ಮ ಸಮಸ್ಯೆ ಯಾರಿಗೂ ಬೇಡ’ ಎಂದು ಬಸವರಾಜ ಅಸಹಾಯಕರಾಗಿ ಹೇಳಿದರು.

ಈ ಸಂಬಂಧ ನಗರಸಭೆಯ ಪೌರಾಯುಕ್ತ ಮನ್ಸೂರ್‌ ಅಲಿ ಅವರನ್ನು ಸಂಪರ್ಕಿಸಿದಾಗ ಅವರು ಮಾಹಿತಿಗೆ ಲಭ್ಯರಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.