ADVERTISEMENT

ಹರಪನಹಳ್ಳಿ: ಸ್ಮಶಾನವೇ ಇಲ್ಲದ ಶಾಂತಿನಗರ, ಸ್ವಂತ ಜಾಗದಲ್ಲಿ ಮೃತದೇಹ ಹೂಳುವ ಸ್ಥಿತಿ

ವಿಶ್ವನಾಥ ಡಿ.
Published 5 ಆಗಸ್ಟ್ 2023, 6:11 IST
Last Updated 5 ಆಗಸ್ಟ್ 2023, 6:11 IST
ಹರಪನಹಳ್ಳಿ ತಾಲ್ಲೂಕು ಶಾಂತಿನಗರದಲ್ಲಿ ಈಚೆಗೆ ನಿಧನರಾದ ವ್ಯಕ್ತಿಯೊಬ್ಬರನ್ನು ಜಮೀನಿನಲ್ಲಿ ಹೂಳಲಾಗಿದೆ
ಹರಪನಹಳ್ಳಿ ತಾಲ್ಲೂಕು ಶಾಂತಿನಗರದಲ್ಲಿ ಈಚೆಗೆ ನಿಧನರಾದ ವ್ಯಕ್ತಿಯೊಬ್ಬರನ್ನು ಜಮೀನಿನಲ್ಲಿ ಹೂಳಲಾಗಿದೆ   

ಹರಪನಹಳ್ಳಿ: ಇಲ್ಲಿನ ಶಾಂತಿನಗರ ಗ್ರಾಮದಲ್ಲಿ ಸ್ಮಶಾನ ಭೂಮಿ ಇಲ್ಲದ ಕಾರಣ ಸ್ವಂತ ಜಾಗ ಅಥವಾ ಜಮೀನಿನಲ್ಲಿ ಮೃತದೇಹ ಹೂಳಬೇಕಾಗದ ಪರಿಸ್ಥಿತಿ ಇದೆ.

70 ವರ್ಷಗಳ ಹಿಂದೆ ಖಂಡಿಕೇರಿ ತಾಂಡದ ಲಂಬಾಣಿಗರು ಮತ್ತು ಕಡತಿ ಗ್ರಾಮದ ಪರಿಶಿಷ್ಟರ ಕುಟುಂಬಗಳಿಗೆ ಭೂಮಿ ಗುರುತಿಸಿ, ಮನೆ ಮತ್ತು ಉಳುಮೆಗೆ ಭೂಮಿ ನೀಡಿ, ಶಾಂತಿನಗರವೆಂದು ಸರ್ಕಾರ ನಾಮಕರಣ ಮಾಡಿತ್ತು. ಕಡತಿ ಗ್ರಾಮ ಪಂಚಾಯ್ತಿಗೆ ಒಳಪಡುವ ಶಾಂತಿನಗರದಲ್ಲಿ ಒಂದು ಲಿಂಗಾಯತ ಮನೆ ಸೇರಿದಂತೆ 80 ಪರಿಶಿಷ್ಟರ ಕುಟುಂಬಗಳು ವಾಸವಿದ್ದು, 1,096 ಜನಸಂಖ್ಯೆ ಇದೆ. ಗ್ರಾಮ ಆರಂಭವಾದಾಗಿನಿಂದ ಇಲ್ಲಿವರೆಗೆ ಯಾರೇ ಸತ್ತರೂ ಸ್ವಂತ ಜಮೀನು, ಜಾಗದಲ್ಲಿ ಹೂಳುತ್ತಾರೆ.

‘ಸ್ಮಶಾನವಿಲ್ಲದ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ, ಜಾಗ ಗುರುತಿಸಿ, ಸ್ಮಶಾನಕ್ಕೆ ಮೂಲಸೌಕರ್ಯ ಒದಗಿಸಬೇಕು ಎನ್ನುವ ನಿಯಮವಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದ ತಾಂಡ, ಹಟ್ಟಿ, ಕೇರಿಗಳಲ್ಲಿ ಈ ನಿಮಯ ಕಾರ್ಯಗತವಾಗಿಲ್ಲ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, ಸ್ಮಶಾನಕ್ಕೆ ಭೂಮಿ ಒದಗಿಸಬೇಕು’ ಎಂದು ಶಾಂತಿನಗರದ ವಕೀಲ ಅನಂತ ನಾಯ್ಕ ಒತ್ತಾಯಿಸಿದರು.

ADVERTISEMENT

ಚರಂಡಿಯೂ ಇಲ್ಲ: ‘ಗ್ರಾಮದಲ್ಲಿ ಚರಂಡಿಗಳಿಲ್ಲದ ಕಾರಣ ರಸ್ತೆ ಬದಿ ನೀರು ನಿಂತು, ಸೊಳ್ಳೆಗಳ ಕಾಟ ಹೆಚ್ಚಾಗಿದೆ. ಇದು ಜನರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ. ಅನೇಕ ವರ್ಷಗಳಿಂದ ಚರಂಡಿ ಮತ್ತು ಸ್ಮಶಾನ ನಿರ್ಮಾಣಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ’ ಎಂದು ದಲಿತ ಹಕ್ಕುಗಳ ಸಮಿತಿ ಸಂಚಾಲಕ ಭರಮಪ್ಪ ದೂರಿದರು.

ಹರಪನಹಳ್ಳಿ ತಾಲ್ಲೂಕು ಶಾಂತಿನಗರದಲ್ಲಿ ಚರಂಡಿಗಳಿಲ್ಲದೇ ಮನೆಗಳ ಮುಂದೆ ನೀರಿನ ಗುಂಡಿಯಾಗಿರುವುದು.
ಶಾಂತಿನಗರದಲ್ಲಿ ಸ್ಮಶಾನ ಇಲ್ಲದಿರುವುದು ಗಮನಕ್ಕೆ ಬಂದಿದೆ. ಶೀಘ್ರದಲ್ಲೇ ಗ್ರಾಮಕ್ಕೆ ಭೇಟಿ ನೀಡಿ ಪರಿಹಾರ ಸೂಚಿಸಲಾಗುವುದು.
–ಕಾರ್ತಿಕ್ ಪ್ರಭಾರ, ತಹಶೀಲ್ದಾರ್‌ ಹರಪನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.