ಹೊಸಪೇಟೆ (ವಿಜಯನಗರ): ರಾಜ್ಯದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಶೇ 15ರಷ್ಟು ಎನ್‌ಆರ್‌ಐ ಕೋಟಾ ಜಾರಿ ಮಾಡಿರುವುದನ್ನು ಕೈ ಬಿಡಲು ಆಗ್ರಹಿಸಿ ಎಐಡಿಎಸ್‌ಒ ಜಿಲ್ಲಾ ಘಟಕದ ವತಿಯಿಂದ ಮಂಗಳವಾರ ಇಲ್ಲಿನ ತಾಲ್ಲೂಕು ಕಚೇರಿ ಬಳಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಸಂಚಾಲಕ ರವಿಕಿರಣ್ ಜೆ.ಪಿ. ಮಾತನಾಡಿ, ರಾಜ್ಯ ಸರ್ಕಾರವು ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ಸೀಟಿಗೆ ₹25 ಲಕ್ಷ ದುಬಾರಿ ಶುಲ್ಕದೊಂದಿಗೆ ಶೇ15 ಎನ್‍ಆರ್‌ಐ ಕೋಟಾವನ್ನು ಆರಂಭಿಸಲು ನಿರ್ಧರಿಸಿರುವುದು ಖಂಡನೀಯ ಎಂದರು.
ವೈದ್ಯಕೀಯ ಕಾಲೇಜುಗಳನ್ನು ಬಲಪಡಿಸಲು ರಾಜ್ಯದ ಬೊಕ್ಕಸದಿಂದ ಅವಶ್ಯಕ ಹಣವನ್ನು ಮಂಜೂರು ಮಾಡುವ ಬದಲು, ಸರ್ಕಾರವು ಈ ಹೊರೆಯನ್ನು ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳ ಮೇಲೆ ವರ್ಗಾಯಿಸುತ್ತಿದೆ. ಇಂತಹ ನೀತಿಗಳು ಸರ್ಕಾರಿ ಕಾಲೇಜುಗಳಲ್ಲಿ ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸುತ್ತಾ, ಸಂಪೂರ್ಣ ಖಾಸಗೀಕರಣಕ್ಕೆ ಎಡೆ ಮಾಡಿಕೊಡುತ್ತವೆ ಎಂದರು.
ಯು.ಉಮಾದೇವಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಾದ ಆದಿತ್ಯ, ಗೌತಮ್, ಸುಮಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.