ADVERTISEMENT

ಹಳತು, ಹೊಸತರ ಸಂಘರ್ಷ ನಿರಂತರ: ಪ್ರೊ. ಗೋಪಾಲಕೃಷ್ಣ ಜೋಶಿ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 13:43 IST
Last Updated 29 ಸೆಪ್ಟೆಂಬರ್ 2021, 13:43 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ನುಡಿ ಕಟ್ಟಡದಲ್ಲಿ ನೂತನ ಅಂತರ್ಜಾಲ ಶೋಧ ಕೇಂದ್ರವನ್ನು ಬುಧವಾರ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಗೋಪಾಲಕೃಷ್ಣ ಜೋಶಿ ಉದ್ಘಾಟಿಸಿದರು. ಕುಲಪತಿ ಪ್ರೊ. ಸ.ಚಿ. ರಮೇಶ ಇದ್ದಾರೆ
ಹಂಪಿ ಕನ್ನಡ ವಿಶ್ವವಿದ್ಯಾಲಯದ ನುಡಿ ಕಟ್ಟಡದಲ್ಲಿ ನೂತನ ಅಂತರ್ಜಾಲ ಶೋಧ ಕೇಂದ್ರವನ್ನು ಬುಧವಾರ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಗೋಪಾಲಕೃಷ್ಣ ಜೋಶಿ ಉದ್ಘಾಟಿಸಿದರು. ಕುಲಪತಿ ಪ್ರೊ. ಸ.ಚಿ. ರಮೇಶ ಇದ್ದಾರೆ   

ಹೊಸಪೇಟೆ (ವಿಜಯನಗರ): ‘ಹಳತು, ಹೊಸತರ ಸಂಘರ್ಷ ನಿರಂತರವಾಗಿರುತ್ತದೆ. ಎರಡನ್ನೂ ಒಟ್ಟಿಗೆ ಸಮದೂಗಿಸಿಕೊಂಡು ಅಭಿವೃದ್ಧಿಯ ಕಡೆಗೆ ಸಾಗಬೇಕು’ ಎಂದು ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಗೋಪಾಲಕೃಷ್ಣ ಜೋಶಿ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ನುಡಿ ಕಟ್ಟಡದಲ್ಲಿ ನೂತನ ಅಂತರ್ಜಾಲ ಶೋಧ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು.

‘ಹೊಸದನ್ನು ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ಹಳತು ಮತ್ತು ಹೊಸತರ ನಡುವೆ ಸಂಘರ್ಷ ಸಹಜ. ಅದು ಅನಿವಾರ್ಯ ಕೂಡ ಹೌದು. ಇಂದಿನ ಸಂದರ್ಭದಲ್ಲಿ ಕಲಿಕೆಗೆ ಪೂರಕವಾಗಿ ಅಂತರ್ಜಾಲವನ್ನು ಸದುಪಯೋಗ ಪಡಿಸಿಕೊಳ್ಳುವುದು ಬಹಳ ಮುಖ್ಯ’ ಎಂದು ತಿಳಿಸಿದರು.

ADVERTISEMENT

‘ಆಧುನಿಕ ಸಮಾಜ ತಂತ್ರಜ್ಞಾನವನ್ನೇ ಹೆಚ್ಚಾಗಿ ಅವಲಂಬಿಸಿದೆ. ತಂತ್ರಜ್ಞಾನ ಕೇಂದ್ರೀತ ಸಮಾಜವಾಗಿ ಬದಲಾಗುತ್ತಿದೆ. ತಂತ್ರಜ್ಞಾನದಿಂದ ಶಿಕ್ಷಣ, ಮಾಹಿತಿ, ಮನರಂಜನೆ ಎಲ್ಲವನ್ನೂ ವೈಯಕ್ತಿಕ ನೆಲೆಯಲ್ಲಿ ಪಡೆದುಕೊಳ್ಳುವವರ ಪ್ರಮಾಣ ಹೆಚ್ಚಾಗುತ್ತಿದೆ’ ಎಂದು ಹೇಳಿದರು.

ಕುಲಪತಿ ಪ್ರೊ. ಸ.ಚಿ.ರಮೇಶ ಮಾತನಾಡಿ, ‘ಬದಲಾದ ಕಾಲದೊಂದಿಗೆ ಎಲ್ಲರೂ ಬದಲಾಗುವುದು ಅನಿವಾರ್ಯ. ಇಲ್ಲವಾದರೆ ಆಧುನಿಕ ಜಗತ್ತಿನಲ್ಲಿ ಹಿಂದುಳಿದು ಬಿಡುತ್ತೇವೆ. ಅಂತರ್ಜಾಲದ ಬಳಕೆ ಜನರ ಜೀವನದ ಅವಿಭಾಜ್ಯ ಅಂಗವಾಗಿದೆ. ಶಿಕ್ಷಣ, ಮಾಹಿತಿ, ಬ್ಯಾಂಕಿಂಗ್ ಸಂಶೋಧನೆ ಸೇರಿದಂತೆ ಎಲ್ಲದಕ್ಕೂ ಅಂತರ್ಜಾಲವನ್ನೇ ಅವಲಂಬಿಸಿದ್ದೇವೆ. ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರತ್ಯೇಕವಾದ ಸುಸಜ್ಜಿತವಾದ ಅಂತರ್ಜಾಲ ಶೋಧ ಕೇಂದ್ರವನ್ನು ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳ ಉಪಯೋಗಕ್ಕಾಗಿ ನಿರ್ಮಿಸಲಾಗಿದೆ’ ಎಂದು ತಿಳಿಸಿದರು.

ಎಂ.ಎಸ್.ಪಿ.ಎಲ್. ಕಾರ್ಯನಿರ್ವಾಹಕ ನಿರ್ದೇಶಕ ಕೆ.ಪ್ರಭುದೇವಪ್ಪ ಮಾತನಾಡಿ, ‘ತಂತ್ರಜ್ಞಾನ ನಮ್ಮ ಜೀವನಕ್ಕೆ ಅನಿವಾರ್ಯ ಹೌದು. ತಂತ್ರಜ್ಞಾನದ ಜೊತೆಯೇ ನಾವು ಬದುಕಬೇಕಾಗಿರುವುದರಿಂದ ಅದನ್ನು ನಮ್ಮ ಅನುಕೂಲಕ್ಕೆ ಬಳಸಬೇಕೆ ಹೊರತು ಅದರ ಬಳಕೆಯೇ ಚಟವಾಗಬಾರದು’ ಎಂದು ಸೂಚ್ಯವಾಗಿ ಹೇಳಿದರು.

ಕುಲಸಚಿವ ಪ್ರೊ. ಸುಬ್ಬಣ್ಣ ರೈ, ಅಭೆರಾಜ್ ಬಲ್ದೋಟ ಜೈನ್ ಅಧ್ಯಯನ ಪೀಠದ ಸಂಚಾಲಕ ಎಲ್. ಶ್ರೀನಿವಾಸ್, ಅಧ್ಯಯನಾಂಗದ ನಿರ್ದೇಶಕ ಪಿ. ಮಹಾದೇವಯ್ಯ, ಗಣಕ ಕೇಂದ್ರದ ಮುಖ್ಯಸ್ಥ ಎಸ್.ಕೆ.ವಿಜಯೇಂದ್ರ, ಶಕುಂತಲ ಚೌಡನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.