ADVERTISEMENT

ಮತಾಂತರ ನಿಷೇಧ ಕಾಯ್ದೆಗೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ವಿರೋಧ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2021, 11:08 IST
Last Updated 20 ಡಿಸೆಂಬರ್ 2021, 11:08 IST
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ಕಾರ್ಯಕರ್ತರು ಸೋಮವಾರ ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ಕಾರ್ಯಕರ್ತರು ಸೋಮವಾರ ಹೊಸಪೇಟೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು   

ಹೊಸಪೇಟೆ (ವಿಜಯನಗರ): ರಾಜ್ಯ ಸರ್ಕಾರ ಜಾರಿಗೆ ತರಲು ಹೊರಟಿರುವ ಮತಾಂತರ ನಿಷೇಧ ಕಾಯ್ದೆ ವಿರೋಧಿಸಿ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಸಮಿತಿ ಕಾರ್ಯಕರ್ತರು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ದೇಶದ ಸಂವಿಧಾನವೇ ಪ್ರತಿಯೊಬ್ಬರಿಗೂ ಧಾರ್ಮಿಕ ಹಕ್ಕು ಕೊಟ್ಟಿದೆ. ಪ್ರತಿಯೊಬ್ಬರೂ ಅವರಿಗಿಷ್ಟವಾದ ಧರ್ಮವನ್ನು ಆಯ್ಕೆ ಮಾಡಿಕೊಳ್ಳಬಹುದು. ಬಲವಂತ, ಆಮಿಷವೊಡ್ಡಿ ಮತಾಂತರ ಮಾಡಬಾರದು ಎಂದೂ ಹೇಳಿದೆ. ಹೀಗಿರುವಾಗ ರಾಜ್ಯ ಸರ್ಕಾರ ಜನರ ದಿಕ್ಕು ತಪ್ಪಿಸಿ ಕಾಯ್ದೆ ಜಾರಿಗೆ ತರಲು ಮುಂದಾಗಿರುವುದು ಸರಿಯಲ್ಲ ಎಂದು ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ ಖಂಡನಾರ್ಹವಾದುದು. ತನ್ನ ಗುಪ್ತ ಕಾರ್ಯಸೂಚಿ ಪ್ರಕಾರ ಕಾಯ್ದೆ ಜಾರಿಗೆ ಹೊರಟಿದೆ. ಹಾಲಿ ಬೆಳಗಾವಿ ವಿಧಾನಸಭೆ ಅಧಿವೇಶನದಲ್ಲಿ ಮಸೂದೆ ಮಂಡಿಸಲು ತಯಾರಿ ನಡೆಸಿದೆ. ಆದರೆ, ಅದನ್ನು ಮಾಡುವ ಅಗತ್ಯವಿಲ್ಲ. ರಾಜ್ಯದಲ್ಲಿ ಅನೇಕ ಜ್ವಲಂತ ಸಮಸ್ಯೆಗಳಿವೆ. ಅವುಗಳನ್ನು ಬಗೆಹರಿಸಲು ಒತ್ತು ಕೊಡಬೇಕು. ಜಾನುವಾರು ಹತ್ಯೆ ಪ್ರಬಂಧಕ ಕಾಯ್ದೆ ಕೂಡ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.

ADVERTISEMENT

ಸಂಘಟನೆಯ ಜಿಲ್ಲಾ ಅಧ್ಯಕ್ಷೆ ಜೆ. ಚಂದ್ರಕುಮಾರಿ, ಸಹ ಕಾರ್ಯದರ್ಶಿ ಸರ್ದಾರ್‌ ಹುಲಿಗೆಮ್ಮ, ಜಿಲ್ಲಾ ಕಾರ್ಯದರ್ಶಿ ಜಿ. ಸರೋಜ, ಬಿ. ರೇಣುಕಾ, ಕೆ. ವಿಜಯಲಕ್ಷ್ಮಿ, ಅಂಬಿಕಾ, ಸ್ವಪ್ನ ಕೆ.ಎಂ., ಬಿ. ಸುನೀತಾ, ಕೆಂಚಮ್ಮ, ಎನ್‌.ಎಂ. ಸುಮಂಗಲಾ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಆರ್‌. ಭಾಸ್ಕರ್‌ ರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.