ಕಾನಹೊಸಹಳ್ಳಿ (ಕೂಡ್ಲಿಗಿ): ತಾಲ್ಲೂಕಿನ ಪ್ರಮುಖ ವಾಣಿಜ್ಯ, ಶೈಕ್ಷಣಿಕ ಹಾಗೂ ಹೋಬಳಿ ಕೇಂದ್ರವಾಗಿರುವ ಕಾನಹೊಸಹಳ್ಳಿಯಲ್ಲಿ ಸೂಕ್ತ ಬಸ್ ತಂಗುದಾಣಗಳಿಲ್ಲದೆ ಪ್ರಯಾಣಿಕರು ಪರದಾಡುವ ಸ್ಥಿತಿ ಇದೆ.
ಗ್ರಾಮ ವೇಗವಾಗಿ ಬೆಳೆಯುತ್ತಿದ್ದು, ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೆ ಏರಿಸಬೇಕು ಎಂಬ ಕೂಗು ಸಹ ಕೇಳಿ ಬರುತ್ತಿದೆ. ಆದರೆ, ಬಸ್ಸುಗಳಿಗಾಗಿ ಕಾಯುವ ಪ್ರಯಾಣಿಕರು ನಿಲ್ಲಲು ತಂಗುದಾಣಗಳೇ ಇಲ್ಲ. ಪ್ರಯಾಣಿಕರು ಮಳೆಯಲ್ಲಿ ನೆನೆದು, ಬಿಸಿಲಲ್ಲಿ ಬೆವರಿ ನಿಂತುಕೊಂಡೆ ಬಸ್‌ಗಳಿಗೆ ಕಾಯಬೇಕಾಗಿದೆ.
ಗ್ರಾಮದ ಮದಕರಿ ವೃತ್ತದಲ್ಲಿ, ಜಗಳೂರು ರಸ್ತೆ ಹಾಗೂ ಉಜ್ಜನಿ ರಸ್ತೆಯಲ್ಲಿ ತಂಗುದಾಣ ಅವಶ್ಯವಿದೆ. ಸ್ಥಳೀಯ ಆಡಳಿತವಾಗಲಿ, ಜನಪ್ರತಿನಿಧಿಗಳಾಗಲಿ ತಂಗುದಾಣ ನಿರ್ಮಾಣಕ್ಕೆ ಮುಂದಾಗಿಲ್ಲ. ಯಾವುದಾದರೂ ಅಂಗಡಿ ಮುಂದೆ ನಿಂತರೆ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಎಂದು ಬೇರೆಡೆ ಹೋಗಲು ಹೇಳುತ್ತಾರೆ. ನೆರಳಿರುವ ಜಾಗದಲ್ಲಿ ನಿಂತರೆ, ಬಸ್ ಬಂದಾಗ ಓಡಿ ಹೋಗಬೇಕಿದೆ.
ಈ ಮೊದಲು ಮದಕರಿ ವೃತ್ತ ಹಾಗೂ ಜಗಳೂರು ರಸ್ತೆಯಲ್ಲಿ ತಂಗುದಾಣಗಳಿದ್ದವು. ಮುಖ್ಯ ರಸ್ತೆ ವಿಸ್ತರಣೆ ಮಾಡಿದ ನಂತರ ಅವು ನೆಲಸಮವಾದವು. ಹುಡೇಂ, ತಾಯಕನಹಳ್ಳಿ, ಚಿಕ್ಕಜೋಗಿಹಳ್ಳಿ ಮೋಳಕಾಲ್ಮೂರು ಕಡೆ ಹೋಗಲು ಮದಕರಿ ವೃತ್ತದಲ್ಲಿ, ಹುಲಿಕೆರೆ, ಕಾನಮಡಗು, ಹಿರೇಕುಂಬಳಗುಂಟೆ, ಜಗಳೂರು ಕಡೆ ಹೋಗಲು ಮೊದಲಿದ್ದ ತಂಗುದಾಣದ ಸ್ಥಳದಲ್ಲಿ ಹಾಗೂ ನಿಂಬಳಗೆರೆ, ಉಜ್ಜನಿ, ಹಾರಕಭಾವಿ, ಕೊಟ್ಟೂರು ಕಡೆ ಹೋಗಲು ಉಜ್ಜನಿ ರಸ್ತೆಯಲ್ಲಿ ತಂಗುದಾಣ ನಿರ್ಮಾಣ ಮಾಡಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸಂಸದರ ಅನುದಾನದಲ್ಲಿ ಕ್ಷೇತ್ರಕ್ಕೆ 10 ಬಸ್ ನಿಲ್ದಾಣಗಳ ಪ್ರಸ್ತಾವನೆ ಸಲ್ಲಿಸಲಾಗಿದ್ದು ಅವಶ್ಯವಿದ್ದರೆ ಇನ್ನೊಂದು ಬಸ್ ನಿಲ್ದಾಣ ನೀಡಲಾಗುವುದುಡಾ. ಶ್ರೀನಿವಾಸ್ ಎನ್.ಟಿ. ಶಾಸಕರು ಕೂಡ್ಲಿಗಿ
ಹೋಬಳಿ ಕೇಂದ್ರಕ್ಕೆ ನಾನಾ ಕಾರ್ಯಗಳಿಗೆ ಜನರು ಬಂದು ಹೋಗುತ್ತಾರೆ. ಅವರ ಅನುಕೂಲಕ್ಕೆ ತಂಗುದಾಣ ನಿರ್ಮಿಸಲು ಅಧಿಕಾರಿಗಳು ಮುಂದಾಗಬೇಕುಬಸಪ್ಪ ಪೂಜಾರಹಳ್ಳಿ ನಿವಾಸಿ
ಹೆದ್ದಾರಿ ಪಕ್ಕದಲ್ಲಿ ಕೆಕೆಆರ್‌ಟಿಸಿ ನಿರ್ಮಾಣ ಮಾಡಿರುವ ಬಸ್‌ನಿಲ್ದಾಣ ಉತ್ತರ ಕರ್ನಾಟಕ ಹಾಗೂ ಬೆಂಗಳೂರು ನಡುವೆ ಓಡಾಡುವ ಬಸ್ಸುಗಳಿಗೆ ಮಾತ್ರ ಎನ್ನುವಂತಾಗಿದೆ. ರಾತ್ರಿ 9 ಗಂಟೆ ನಂತರ ಬೆಂಗಳೂರು ಕಡೆಗೆ ಹೋಗುವ ಮತ್ತು ಆ ಕಡೆಯಿಂದ ಬರುವ ಯಾವ ಬಸ್‍ಗಳೂ ನಿಲ್ದಾಣಕ್ಕೆ ಹೋಗುವುದಿಲ್ಲ. ಇದರಿಂದ ಹೆದ್ದಾರಿಯಲ್ಲೇ ಬಸ್ಸುಗಳನ್ನು ಹತ್ತಿ ಇಳಿಯಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.