ADVERTISEMENT

ಹರಪನಹಳ್ಳಿ | 47 ಅಂಗನವಾಡಿ ಕೇಂದ್ರದ ಕಟ್ಟಡ ಶಿಥಿಲ

ಆತಂಕದಲ್ಲೇ ದಿನ ಕಳೆಯುತ್ತಿರುವ ಪುಟಾಣಿಗಳು, ಸಹಾಯಕಿಯರು

ವಿಶ್ವನಾಥ ಡಿ.
Published 14 ಜುಲೈ 2024, 6:39 IST
Last Updated 14 ಜುಲೈ 2024, 6:39 IST
ಹರಪನಹಳ್ಳಿಯ ಗುಡೆಕೋಟೆ ಕೇರಿಯ ಶಿಥಿಲಗೊಂಡಿರುವ ಶಾಲೆಯ ಕಟ್ಟಡದಲ್ಲಿರುವ ಎರಡು ಅಂಗನವಾಡಿ ಕೇಂದ್ರಗಳು
ಹರಪನಹಳ್ಳಿಯ ಗುಡೆಕೋಟೆ ಕೇರಿಯ ಶಿಥಿಲಗೊಂಡಿರುವ ಶಾಲೆಯ ಕಟ್ಟಡದಲ್ಲಿರುವ ಎರಡು ಅಂಗನವಾಡಿ ಕೇಂದ್ರಗಳು   

ಹರಪನಹಳ್ಳಿ: ಪಟ್ಟಣ ಒಳಗೊಂಡು ತಾಲ್ಲೂಕಿನ ವಿವಿಧೆಡೆ 47 ಅಂಗನವಾಡಿಗಳು ಶಿಥಿಲಗೊಂಡಿದ್ದು, ಪೋಷಕರು ಆತಂಕದಲ್ಲೇ ಮಕ್ಕಳನ್ನು ಕಳಿಸುತ್ತಿದ್ದರೆ, ಕಾರ್ಯಕರ್ತೆಯರು ಸಹ ಭಯದಲ್ಲಿ ಕಾಲ ಕಳೆಯುವಂತಾಗಿದೆ.

ಪಟ್ಟಣದ ಗುಡೆಕೋಟೆ ಕೇರಿಯಲ್ಲಿ ಸರ್ಕಾರಿ ಶಾಲಾ ಕಟ್ಟಡದ ಶಿಥಿಲಗೊಂಡಿರುವ ಎರಡು ಪ್ರತ್ಯೇಕ ಕೋಣೆಯಲ್ಲಿ ಗುಡೆಕೋಟೆ ಕೇರಿ ಅಂಗನವಾಡಿ-14 ಮತ್ತು ಕುರುಬರಗೇರಿಯಲ್ಲಿ ಅಂಗನವಾಡಿ-23 ನಡೆಯುತ್ತಿವೆ.

ಅಂಗನವಾಡಿ–14ರಲ್ಲಿ 20 ಚಿಣ್ಣರು, ಕುರುಬರಗೇರಿ ಕೇಂದ್ರದಲ್ಲಿ–25 ಚಿಣ್ಣರು ಹೆಸರು ನೋಂದಾಯಿಸಿದ್ದಾರೆ. ತುಂಬಾ ಹಳೆಯ ಕಟ್ಟಡವಾಗಿದ್ದು, ಹಂಚಿನ ಚಾವಣಿಗಳು ಮುರಿದು ಬಿದ್ದಿವೆ. ಎರಡೂ ಕೇಂದ್ರಗಳು ಒಂದೇ ಕೋಣೆಯಲ್ಲಿ ಆಹಾರ ದಾಸ್ತಾನು ಮಾಡಿಕೊಂಡಿದ್ದು, ಅಲ್ಲಿಯೇ ಸಹಾಯಕಿಯರು ಅಡುಗೆ ಮಾಡುತ್ತಾರೆ.

ADVERTISEMENT

ಮಳೆ ಸುರಿದರೆ ಮುರಿದ ಹಂಚಿನ ಒಳಗಿಂದ ನೀರು ಕೊಠಡಿ ಒಳಗೆ ಹರಿದು ಬರುತ್ತದೆ. ಸೋರದಿರುವ ಒಂದು ಮೂಲೆಯಲ್ಲಿ ಮಕ್ಕಳನ್ನು ಕೂರಿಸಿ, ಮಳೆ ನಿಂತ ಮೇಲೆ ಮನೆಗೆ ಕಳಿಸಲಾಗುತ್ತಿದೆ. ಅಂಗನವಾಡಿ ಕೇಂದ್ರ -14ಕ್ಕೆ ಹಡಗಲಿ ರಸ್ತೆಯಲ್ಲಿ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣವಾಗಿದೆ, ಆದರೆ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ಸ್ಥಳಾಂತರ ವಿಳಂಬವಾಗಿದೆ.

2007ರಲ್ಲಿ ಆರಂಭವಾಗಿರುವ ಅಂಗನವಾಡಿ ಕೇಂದ್ರ-23ಕ್ಕೆ ಜಾಗ ಹುಡುಕಾಟ ನಡೆದಿದೆ, ಈವರೆಗೂ ದೊರಕಿಲ್ಲ. ಶೀಘ್ರ ಎರಡು ಕೇಂದ್ರಗಳನ್ನು ಸುಸಜ್ಜಿತ ಕಟ್ಟಡಕ್ಕೆ ಸ್ಥಳಾಂತರಿಸಬೇಕು ಎಂದು ಪಾಲಕರು ಒತ್ತಾಯಿಸುತ್ತಿದ್ದಾರೆ. ಜುಲೈ 6ರಂದು ಜನಸ್ಪಂದನ ಕಾರ್ಯಕ್ರಮದ ವೇಳೆ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಅವರು ಕೇಂದ್ರಕ್ಕೆ ದಿಢೀರ್ ಭೇಟಿ ಕೊಟ್ಟು ಸ್ಥಳ ಪರಿಶೀಲಿಸಿದಾಗ ಶಿಥಿಲಗೊಂಡಿರುವ ಕಟ್ಟಡ ಮತ್ತು ಆಹಾರ ವಿತರಣೆ ಆಗದಿರುವುದಕ್ಕೆ ಬೇಸರ ವ್ಯಕ್ತಪಡಿಸಿದ್ದರು.

ಹರಪನಹಳ್ಳಿ ಪಟ್ಟಣದ ಗುಡೆಕೋಟೆಕೇರಿಯಲ್ಲಿ ಶಿಥಿಲಗೊಂಡಿರುವ ಕಟ್ಟಡದಲ್ಲಿ ಅಂಗನವಾಡಿ -14ರ ಮಕ್ಕಳು ಮತ್ತು ಕಾರ್ಯಕರ್ತೆ ಚಟುವಟಿಕೆಯಲ್ಲಿ ತೊಡಗಿರುವುದು.

ಜನಸ್ಪಂದನ ವೇಳೆ ಜಿಲ್ಲಾಧಿಕಾರಿಯಿಂದ ಪರಿಸ್ಥಿತಿ ವೀಕ್ಷಣೆ ಒಂದು ಅಂಗನವಾಡಿಗೆ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿ ಇನ್ನೊಂದು ಅಂಗನವಾಡಿಗೆ ಇನ್ನೂ ಜಾಗವೇ ಸಿಕ್ಕಿಲ್ಲ

‘ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ’ ‘ಗುಡೆಕೋಟೆ ಕೇರಿ ಅಂಗನವಾಡಿ ಕೇಂದ್ರವನ್ನು ಶೀಘ್ರ ಸ್ಥಳಾಂತರಿಸಲಾಗುವುದು. ತಾಲ್ಲೂಕಿನಲ್ಲಿ ಶಿಥಿಲಗೊಂಡಿರುವ 47 ಅಂಗನವಾಡಿ ಕೇಂದ್ರಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ನಗರದಲ್ಲಿ ಸ್ವಂತ ಕಟ್ಟಡಗಳಿಲ್ಲದ 6 ಅಂಗನವಾಡಿ ಕೇಂದ್ರಗಳಿಗೆ ಜಾಗಗಳನ್ನು ಗುರುತಿಸಲಾಗಿದೆ’ ಎಂದು ಶಿಶು ಅಭಿವೃದ್ದಿ ಯೋಜನಾಧಿಕಾರಿ ಅವಿನಾಶ್ ಎಸ್. ಗೋಟ‍ಕಿಂಡಿ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.