ADVERTISEMENT

ಪಿಂಜಾರರಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮಕ್ಕೆ ಚಿಂತನೆ: ಸಚಿವ ಆನಂದ್‌ ಸಿಂಗ್‌

ನದಾಫ್‌/ಪಿಂಜಾರರ ಸಂಘದ 30ನೇ ವಾರ್ಷಿಕೋತ್ಸವ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2022, 13:18 IST
Last Updated 29 ಅಕ್ಟೋಬರ್ 2022, 13:18 IST
ಕೊಟ್ಟೂರು ಸ್ವಾಮಿ ಮಠದ ಬಸವಲಿಂಗ ಸ್ವಾಮೀಜಿ, ಎಮ್ಮಿಗನೂರಿನ ವಾಮದೇವ ಮಹಾಂತ ಸ್ವಾಮೀಜಿ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಹತ್ತಿ ಹಿಂಜುವುದರ ಮೂಲಕ ಕರ್ನಾಟಕ ರಾಜ್ಯ ನದಾಫ್‌/ಪಿಂಜಾರ ಸಂಘದ 30ನೇ ಸಂಸ್ಥಾಪನಾ ದಿನ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ
ಕೊಟ್ಟೂರು ಸ್ವಾಮಿ ಮಠದ ಬಸವಲಿಂಗ ಸ್ವಾಮೀಜಿ, ಎಮ್ಮಿಗನೂರಿನ ವಾಮದೇವ ಮಹಾಂತ ಸ್ವಾಮೀಜಿ ಹಾಗೂ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅವರು ಹತ್ತಿ ಹಿಂಜುವುದರ ಮೂಲಕ ಕರ್ನಾಟಕ ರಾಜ್ಯ ನದಾಫ್‌/ಪಿಂಜಾರ ಸಂಘದ 30ನೇ ಸಂಸ್ಥಾಪನಾ ದಿನ ಉದ್ಘಾಟಿಸಿದರು –ಪ್ರಜಾವಾಣಿ ಚಿತ್ರ   

ಹೊಸಪೇಟೆ (ವಿಜಯನಗರ): ಕರ್ನಾಟಕ ರಾಜ್ಯ ನದಾಫ್‌/ಪಿಂಜಾರ ಸಂಘದ ವಿಜಯನಗರ ಜಿಲ್ಲಾ ಘಟಕದ 30ನೇ ಸಂಸ್ಥಾಪನಾ ದಿನವನ್ನು ನಗರದಲ್ಲಿ ಶನಿವಾರ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಜಿಲ್ಲೆಯ ವಿವಿಧ ಭಾಗಗಳಲ್ಲದೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಪಿಂಜಾರ ಸಮಾಜದವರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಬೆಳಿಗ್ಗೆ ನಗರದ ಡಾ. ಪುನೀತ್ ರಾಜಕುಮಾರ್‌ ವೃತ್ತದಲ್ಲಿ ಅಪ್ಪು ಪ್ರತಿಮೆಗೆ ಹೂಮಾಲೆ ಹಾಕಿ ಗೌರವ ಸಲ್ಲಿಸಿದ ಸಮಾಜದ ಮುಖಂಡರು, ಅಲ್ಲಿಂದ ನಗರದ ಶ್ರೀಸಾಯಿ ಲೀಲಾ ರಂಗಮಂದಿರದ ವರೆಗೆ ರ್‍ಯಾಲಿ ನಡೆಸಿದರು.

ಸಭಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಅಸಂಖ್ಯ ಜನರ ನಡುವೆ ಕಾರ್ಯಕ್ರಮ ಉದ್ಘಾಟಿಸಿದ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌, ಪಿಂಜಾರ ಸಮಾಜದವರ ಅಭಿವೃದ್ಧಿಗೆ ಪ್ರತ್ಯೇಕ ಅಭಿವೃದ್ಧಿ ನಿಗಮ ಮಾಡಬೇಕೆಂಬ ಚರ್ಚೆ ನಡೆಯುತ್ತಿದೆ. ಅದರ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅಲ್ಲಿಯವರೆಗೆ ಕಾದು ನೋಡೋಣ ಎಂದು ಹೇಳಿದರು.

ADVERTISEMENT

ನದಾಫ್‌/ಪಿಂಜಾರ ಸಮಾಜದವರನ್ನು ಎತ್ತಿ ಹಿಡಿದು, ಅದರ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಮಟ್ಟದಲ್ಲೂ ಚರ್ಚೆಗಳು ನಡೆಯುತ್ತಿದೆ. ಹಿಂದುಳಿದ ಸಮಾಜ ಸಂಘಟಿಸಿ ಮುಂದೆ ತರಬೇಕೆಂದು ಶ್ರಮಿಸುತ್ತಿರುವುದರಿಂದ ಈಗ ಬೆಳಕಿಗೆ ಬಂದಿದೆ. ನೂತನ ವಿಜಯನಗರ ಜಿಲ್ಲೆಯಲ್ಲಿ ವಾರ್ಷಿಕೋತ್ಸವ ನಡೆಸುತ್ತಿರುವುದು ಖುಷಿಯ ವಿಚಾರ. ಕಳೆದು 15 ವರ್ಷಗಳಿಂದ ಜನಪ್ರತಿನಿಧಿಯಾಗಿ ನಾನು ಕೆಲಸ ಮಾಡುತ್ತಿದ್ದು, ಈ ಸಮಾಜದವರು ಹೆಚ್ಚಿಗೆ ನನ್ನ ಸಂಪರ್ಕಕ್ಕೆ ಬಂದಿಲ್ಲ ಎಂದು ತಿಳಿಸಿದರು.

ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಬಸವಲಿಂಗ ಸ್ವಾಮೀಜಿ ಮಾತನಾಡಿ, ಕೊಟ್ಟೂರು ಮಠ ಸರ್ವಧರ್ಮಿಯರ ಮಠ. ಎಲ್ಲ ಸಮಾಜಗಳೊಂದಿಗೆ ಅನೊನ್ಯ ಸಂಬಂಧ ಹೊಂದಿದೆ. ಸರ್ವಧರ್ಮಗಳ ಸಮಭಾವ, ಕೋಮು ಸೌಹಾರ್ದ ಈಗಿನ ಸಂದರ್ಭದಲ್ಲಿ ಬಹಳ ಅಗತ್ಯ ಎಂದರು.

ಬೀಜ ಮಣ್ಣಾಗಬಾರದು. ಅದು ಬೆಳೆಯಬೇಕು. ಅದೇ ರೀತಿ ನದಾಫ ಸಮಾಜ ತನ್ನತನದೊಂದಿಗೆ ಬೆಳೆದು ದೀಪದಂತೆ ಬೆಳೆಯಬೇಕು. ಕೆಎಎಸ್, ಐಎಎಸ್ ಓದಲು ಆಸಕ್ತಿ ಇರುವ ಮಕ್ಕಳಿಗೆ ಮಠದಿಂದ ಎಲ್ಲ ರೀತಿಯ ಸಹಕಾರ ಕೊಡಲಾಗುವುದು ಎಂದು ಹೇಳಿದರು.
ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಡಿ. ನದಾಫ ಮಾತನಾಡಿ, ಪಿಂಜಾರರು ಮೂಲತಃ ಅಲೆಮಾರಿಗಳು. ಹಗ್ಗ, ಗಾದಿ ಮಾಡುವ ಕಾಯಕ ನಮ್ಮದು. ಸಮಾಜ ಆರ್ಥಿಕ, ಸಾಮಾಜಿಕ,‌ ಶೈಕ್ಷಣಿವಾಗಿ ಬಹಳ ಹಿಂದುಳಿದಿದೆ. ರಾಜ್ಯದಲ್ಲಿ ಈ ಸಮಾಜವನ್ನು ಕೆಟಗರಿ ಒಂದರಲ್ಲಿ ಸೇರಿಸಲಾಗಿದೆ. ಕೇಂದ್ರದಲ್ಲಿ ಒಬಿಸಿಯಲ್ಲಿ ಸೇರಿಸಲಾಗಿದೆ. ಕೆಟಗರಿ ಒಂದರಲ್ಲಿ 104 ಜಾತಿಗಳಿವೆ. ಅದಕ್ಕೆ ಶೇ 4ರಷ್ಟು ಮೀಸಲಾತಿ ಇದೆ. ರಾಜಕೀಯ ಪ್ರಾತಿನಿಧ್ಯ ಇಲ್ಲ. ಕೀಳುಮಟ್ಟದಿಂದ ಜ‌ನ ಕಾಣುತ್ತಾರೆ. ಪಿಂಜಾರರ ಹೆಸರಿನಲ್ಲಿ ಈಗಲೂ ಹಳ್ಳಿಗಳಲ್ಲಿ ಜನ ಬೈಯುತ್ತಾರೆ ಎಂದರು.

ಪಿಂಜಾರರಲ್ಲಿ ಒಗ್ಗಟ್ಟಿನ ಕೊರತೆ ಇದೆ. ಸಂಘಟನೆಯ ಅಗತ್ಯವಿದೆ. ಶಿಕ್ಷಣ, ಸಂಘಟನೆ, ಹೋರಾಟದಿಂದ ಹಕ್ಕು ಪಡೆಯಲು ಸಾಧ್ಯ. ಕಳೆದ ಮೂವತ್ತು ವರ್ಷಗಳಲ್ಲಿ ಶಿಕ್ಷಣ, ಸಂಘಟನೆ ಆಗಿದೆ. ಈಗ ಹೋರಾಟ ಮಾಡಬೇಕಾದ ಕಾಲ ಬಂದಿದೆ. ಯಾವುದೇ ರಾಜಕೀಯ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿಲ್ಲ. ನಮ್ಮ ಮನವಿಗಳಿಗೆ ಇದುವರೆಗೆ ಸ್ಪಂದಿಸಿಲ್ಲ ಎಂದು ಹೇಳಿದರು.

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಡಾ. ಪುನೀತ್‌ ರಾಜಕುಮಾರ್‌ ಹಾಗೂ ಸಮಾಜ ಸೇವಕ ಹಿರೇಹಾಳ್‌ ಡಿ. ಇಬ್ರಾಹಿಂ ಸಾಬ್‌ ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನ ಆಚರಿಸಲಾಯಿತು. ಹಿರೇಹಾಳ್‌ ಡಿ. ಇಬ್ರಾಹಿಂ ಅವರಿಗೆ ಮರಣೋತ್ತರವಾಗಿ ಕರ್ನಾಟಕ ರಾಜ್ಯ ನದಾಫ/ಪಿಂಜಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು. ಅವರ ಪರವಾಗಿ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ದಾದಾ ಕಲಂದರ್ ಪ್ರಶಸ್ತಿ ಸ್ವೀಕರಿಸಿದರು.

ಶಾಸಕರಾದ ಎಲ್‌.ಬಿ.ಪಿ. ಭೀಮಾ ನಾಯ್ಕ, ಪಿ.ಟಿ. ಪರಮೇಶ್ವರ ನಾಯ್ಕ, ಸಂಘದ ರಾಜ್ಯ ಅಧ್ಯಕ್ಷ ಜಲೀಲ್ ಸಾಬ್, ಜಿಲ್ಲಾಧ್ಯಕ್ಷ ಪಿ. ಹೊನ್ನೂರು ಸಾಬ್‌, ರಾಜ್ಯ ಮಂಡಳಿ ಸದಸ್ಯ ಪಿ. ಬಾಲೇ ಸಾಬ್‌ ಕಾರಿಗನೂರು, ಜಿಲ್ಲಾ ಗೌರವ ಅಧ್ಯಕ್ಷ ಬಾಬುಸಾಬ, ಎಮ್ಮಿಗನೂರು ವಾಮದೇವ ಮಹಾಂತ ಸ್ವಾಮೀಜಿ, ಕಾಂಗ್ರೆಸ್‌ ಮುಖಂಡರಾದ ರಾಜಶೇಖರ್‌ ಹಿಟ್ನಾಳ್‌, ಮಹಮ್ಮದ್‌ ಇಮಾಮ್‌ ನಿಯಾಜಿ, ಕುರಿ ಶಿವಮೂರ್ತಿ, ಎಚ್‌.ಆರ್‌. ವಿರೂಪಾಕ್ಷ, ಶೆಕ್ಷಾವಲಿ, ಕಾಸಿಂ ಸಾಬ್‌, ಸೈಯದ್‌ ನಾಜಿಂ, ಖಾದರ್‌ ರಫಾಯ್‌ ಇತರರಿದ್ದರು.

–––

‘ನಿಮ್ಮ ರೊಕ್ಕ ನಿಮಗೆ ಕೊಟ್ಟರೂ ಟೀಕೆ’
‘ಪಿಂಜಾರರ ಸಮುದಾಯ ಭವನ ನಿರ್ಮಾಣಕ್ಕೆ ಕಾರ್ಯಕ್ರಮದಲ್ಲಿ ಒಂದು ಕೋಟಿ ಆನಂದ್‌ ಸಿಂಗ್‌ ಕೊಡುತ್ತಿದ್ದಾರೆ ಎಂದು ಘೋಷಿಸಲಾಗಿದೆ. ಆದರೆ, ನಾನು ಕೊಡುತ್ತಿಲ್ಲ. ರಾಜ್ಯ ಸರ್ಕಾರ ಮಂಜೂರು ಮಾಡಿರುವ ₹75 ಲಕ್ಷ ಕೊಡುತ್ತಿರುವೆ. ನಿಮ್ಮ ರೊಕ್ಕ ನಿಮಗೆ ಕೊಡುತ್ತಿರುವೆ. ಕೊಟ್ಟರೂ ಟೀಕೆ ಮಾಡುತ್ತಿದ್ದಾರೆ. ಈ ಹಣವನ್ನು ನೇರ ನಿಮ್ಮ ಸಂಘದ ಖಾತೆಗೆ ಜಮೆ ಮಾಡಲಾಗುವುದು’ ಎಂದು ಸಚಿವ ಆನಂದ್‌ ಸಿಂಗ್‌ ಹೇಳಿ ಸರ್ಕಾರದ ಪತ್ರ ಸಮಾಜದ ಮುಖಂಡರಿಗೆ ಹಸ್ತಾಂತರಿಸಿದರು.
‘ಇದು ಸರ್ಕಾರದ ದುಡ್ಡು, ನಾನು ವೈಯಕ್ತಿಕವಾಗಿ ಕೊಡುತ್ತಿಲ್ಲ. ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಪಿಂಜಾರ ಸಂಘಕ್ಕೆ ವೈಯಕ್ತಿಕವಾಗಿ ₹5 ಲಕ್ಷ ಕೊಡುವೆ. ಅದನ್ನು ಮಕ್ಕಳ ಓದಿಗೆ ವ್ಯಯಿಸಬೇಕು. ನನ್ನ ಅವಧಿಯಲ್ಲಿ ಅನೇಕ ಸಮಾಜದ ಸಮುದಾಯ ಭವನಗಳನ್ನು ಮಾಡಿಸಿರುವೆ. ಈ ಸಮಾಜದ್ದು ಸ್ವಲ್ಪ ವಿಳಂಬವಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.