ADVERTISEMENT

ಪ್ರಧಾನಿ ಮೋದಿ ಭೇಟಿಗೆ ಹೊಸಪೇಟೆಯ ಮಲಪನಗುಡಿ ಗ್ರಾಮ ಪಂಚಾಯಿತಿ ಆಯ್ಕೆಗೊಂಡಿದ್ದೇಕೇ?

ಮಲಪನಗುಡಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿದ ‘ಪ್ರಜಾವಾಣಿ’: ಪಂಚಾಯತ್‌ರಾಜ್‌ ದಿವಸ್‌ ಕಾರ್ಯಕ್ರಮ ಆಚರಣೆಗೆ ರಾಜ್ಯದ ಮೂರು ಗ್ರಾಮ ಪಂಚಾಯಿತಿಗಳ ಹೆಸರು ಆಯ್ಕೆ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 22 ಫೆಬ್ರುವರಿ 2022, 9:18 IST
Last Updated 22 ಫೆಬ್ರುವರಿ 2022, 9:18 IST
ಕಸ ಸಂಗ್ರಹಿಸುವ ವಾಹನ ಚಲಾಯಿಸುತ್ತಿರುವ ಸೂರ್ಯಕಾಂತಿ ಸಂಜೀವಿನಿ ಒಕ್ಕೂಟದ ಯುವತಿ
ಕಸ ಸಂಗ್ರಹಿಸುವ ವಾಹನ ಚಲಾಯಿಸುತ್ತಿರುವ ಸೂರ್ಯಕಾಂತಿ ಸಂಜೀವಿನಿ ಒಕ್ಕೂಟದ ಯುವತಿ   

ಹೊಸಪೇಟೆ (ವಿಜಯನಗರ): ಪ್ರಧಾನಿ ನರೇಂದ್ರ ಮೋದಿಯವರು ಪಾಲ್ಗೊಳ್ಳಲಿರುವ ಪಂಚಾಯತ್‌ರಾಜ್‌ ದಿವಸ್‌ ಕಾರ್ಯಕ್ರಮ ಆಚರಣೆಗೆ ರಾಜ್ಯದ ಮೂರು ಗ್ರಾಮ ಪಂಚಾಯಿತಿಗಳ ಹೆಸರು ಆಯ್ಕೆ ಮಾಡಲಾಗಿದ್ದು, ಈ ಪೈಕಿ ತಾಲ್ಲೂಕಿನ ಮಲಪನಗುಡಿಯೂ ಆಯ್ಕೆಯಾಗಿದೆ. ಹಾಗಿದ್ದರೆ ಮಲಪನಗುಡಿ ಆಯ್ಕೆ ಮಾಡಿದ್ದೇಕೇ?

ಇಂತಹದ್ದೊಂದು ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಸೋಮವಾರ ‘ಪ್ರಜಾವಾಣಿ’ ಮಲಪನಗುಡಿ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿತು. ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಸ್ಥಳೀಯ ಸ್ವಸಹಾಯ ಸಂಘಗಳನ್ನು ಒಳಗೊಂಡ ಸೂರ್ಯಕಾಂತಿ ಸಂಜೀವಿನಿ ಒಕ್ಕೂಟದ ಮಹಿಳೆಯರು ಘನತ್ಯಾಜ್ಯ ನಿರ್ವಹಣೆಯಲ್ಲಿ ಕೈಗೊಂಡಿರುವ ಕೆಲಸಗಳು ಕಣ್ಣಿಗೆ ರಾಚುವಂತಿದ್ದವು.

14,000 ಜನಸಂಖ್ಯೆ ಹೊಂದಿರುವ ಮಲಪನಗುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಹಳೆ ಮಲಪನಗುಡಿ, ಗಾಳೆಮ್ಮನಗುಡಿ, ಹೊಸ ಹಂಪಿ, ಕಡ್ಡಿರಾಂಪುರ ತಾಂಡಾ, ಮಲಪನಗುಡಿ ತಾಂಡಾ ಬರುತ್ತವೆ. 2018ರ ಇಸ್ವಿಗೂ ಮುನ್ನ ಈ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ದೊಡ್ಡ ಸಮಸ್ಯೆಯಾಗಿತ್ತು. ಕಸ ವಿಲೇವಾರಿ ಮಾಡುವುದಕ್ಕೆ ಯಾರೊಬ್ಬರೂ ಮುಂದೆ ಬಂದಿರಲಿಲ್ಲ. ಎಲ್ಲೆಂದರಲ್ಲಿ ಕಸ ಬಿದ್ದಿರುತ್ತಿತ್ತು. ಆದರೆ, 2018ರ ನಂತರ ಇದರ ಚಹರೆ ಬದಲಾಗಿದೆ. ಕಸ ಸಂಗ್ರಹ, ವಿಲೇವಾರಿ, ಸಂಸ್ಕರಣೆಗೆ ಈಗ ಮಾದರಿಯಾಗಿದೆ. ಸೂರ್ಯಕಾಂತಿ ಸಂಜೀವಿನಿ ಒಕ್ಕೂಟದ ಮಹಿಳೆಯರಿಂದ ಇದೆಲ್ಲ ಸಾಧ್ಯವಾಗಿದೆ.

ADVERTISEMENT

ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಂದು ಮನೆಗಳಿಂದ ಒಕ್ಕೂಟದ ಮಹಿಳೆಯರು ಕಸ ಸಂಗ್ರಹಿಸುತ್ತಾರೆ. ವಾಹನ ಚಾಲನೆ ಸೇರಿದಂತೆ ಪ್ರತಿಯೊಂದು ಕೆಲಸವನ್ನು ಹೆಣ್ಣುಮಕ್ಕಳೇ ನಿರ್ವಹಿಸುತ್ತಾರೆ. ಸಂಗ್ರಹಿಸಿದ ತ್ಯಾಜ್ಯವನ್ನು ಗಾಳೆಮ್ಮನಗುಡಿ ಸಮೀಪದ ಘನತ್ಯಾಜ್ಯ ಸಂಸ್ಕರಣೆ ಘಟಕಕ್ಕೆ ಕೊಂಡೊಯ್ಯುತ್ತಾರೆ. ಬಳಿಕ ಅಲ್ಲಿ ತ್ಯಾಜ್ಯವನ್ನು ವಿಂಗಡಿಸಲಾಗುತ್ತದೆ.

ಹಸಿ ಕಸದಿಂದ ಎರೆಹುಳ್ಳು ಗೊಬ್ಬರ ತಯಾರಿಸುತ್ತಾರೆ. ಪ್ಲಾಸ್ಟಿಕ್‌ ಬಾಟಲ್‌, ವಾಟರ್‌ ಪೌಚ್‌, ಕಾರ್ಡ್‌ ಬೋರ್ಡ್‌, ಟೂತ್‌ ಬ್ರಶ್‌, ದಿನಪತ್ರಿಕೆ ಸೇರಿದಂತೆ 21 ಬಗೆಯ ವಸ್ತುಗಳನ್ನು ವಿಂಗಡಿಸುತ್ತಾರೆ. ಹೀಗೆ ವಿಂಗಡಿಸಿದ ವಸ್ತುಗಳನ್ನು ಮಾರಾಟ ಮಾಡುತ್ತಾರೆ. ಅವುಗಳನ್ನು ಸಂಸ್ಕರಿಸಿ ಪುನಃ ಬಳಕೆಗೆ ಸಿದ್ಧಪಡಿಸಲಾಗುತ್ತದೆ. ಇದರಿಂದ ಒಕ್ಕೂಟಕ್ಕೆ ಆದಾಯ ಬರುತ್ತಿದೆ.

ಘಟಕದಲ್ಲಿ ಒಟ್ಟು 7 ಜನ ಕೆಲಸ ನಿರ್ವಹಿಸುತ್ತಿದ್ದಾರೆ. ಪ್ರತಿಯೊಬ್ಬರಿಗೂ ಮಾಸಿಕ ತಲಾ ₹5,000 ವೇತನ ನೀಡಲಾಗುತ್ತಿದೆ. ಈ ಹಿಂದೆ ಕೆಲಸವಿಲ್ಲದೆ ಮನೆಯಲ್ಲೇ ಕಾಲ ಕಳೆಯುತ್ತಿದ್ದ ಮಹಿಳೆಯರು ಈಗ ಸ್ವಾವಲಂಬಿಗಳಾಗಿದ್ದಾರೆ. ಕುಟುಂಬಕ್ಕೆ ಆಸರೆಯಾಗಿದ್ದು, ಇಡೀ ಪಂಚಾಯಿತಿಯ ಸ್ವಚ್ಛತೆಗೆ ಕಾರಣರಾಗಿದ್ದಾರೆ. ಜಲಜೀವನ್‌ ಮಿಷನ್‌, ಉದ್ಯೋಗ ಖಾತ್ರಿ ಯೋಜನೆ ಜಾರಿಯಲ್ಲೂ ಪಂಚಾಯಿತಿ ಉತ್ತಮ ಸಾಧನೆ ಮಾಡಿದೆ. ಪ್ರಧಾನಿ ಸಂಭಾವ್ಯ ಭೇಟಿ ಹಿನ್ನೆಲೆಯಲ್ಲಿ ಇನ್ನಷ್ಟು ಮೂಲಸೌಕರ್ಯ ಕಲ್ಪಿಸಲಾಗುತ್ತಿದೆ.

ಸಾಗಿ ಬಂದ ದಾರಿ

2018ರಲ್ಲಿ ಗಾಳೆಮ್ಮನಗುಡಿ ಬಳಿ ಘನತ್ಯಾಜ್ಯ ಸಂಸ್ಕರಣೆ ಘಟಕ ನಿರ್ಮಾಣಕ್ಕೆ ಪಂಚಾಯಿತಿಯಿಂದ ಎರಡು ಎಕರೆ ಜಮೀನು ನೀಡಲಾಗಿತ್ತು. ಸ್ವಚ್ಛ ಭಾರತ ಮಿಷನ್‌ ಯೋಜನೆಯಡಿ ಘಟಕ ನಿರ್ಮಾಣಕ್ಕೆ ₹20 ಲಕ್ಷ ದೇಣಿಗೆ ಹರಿದು ಬಂದಿತ್ತು. ಉದ್ಯೋಗ ಖಾತ್ರಿ ಯೋಜನೆಯಡಿ ಘಟಕದಲ್ಲಿ ತೊಟ್ಟಿ, ಎರೆಹುಳು ಗೊಬ್ಬರ ತಯಾರಿಕೆ ಸೇರಿದಂತೆ ಇತರೆ ಸೌಕರ್ಯ ಕಲ್ಪಿಸಲಾಗಿತ್ತು. ಇದರ ಬೆನ್ನಲ್ಲೇ ಸೂರ್ಯಕಾಂತಿ ಸಂಜೀವಿನಿ ಒಕ್ಕೂಟದವರು ಕೆಲಸ ಆರಂಭಿಸಿದ್ದರು. ಪಂಚಾಯಿತಿ ಅಧಿಕಾರಿಗಳು, ಒಕ್ಕೂಟದವರು ದಕ್ಷತೆಯಿಂದ ಕೆಲಸ ನಿರ್ವಹಿಸುತ್ತಿರುವುದರಿಂದ ಉತ್ತಮ ಫಲಿತಾಂಶ ಬಂದಿದೆ.

ಅವಿಭಜಿತ ಬಳ್ಳಾರಿ ಜಿಲ್ಲೆಯ ಹಲವೆಡೆ ಘನತ್ಯಾಜ್ಯ ವಿಲೇವಾರಿ ಘಟಕಗಳನ್ನು ಸ್ಥಾಪಿಸಲಾಗಿದೆ. ಆದರೆ, ಉತ್ತಮ ರೀತಿಯಲ್ಲಿ ನಡೆಯುತ್ತಿರುವುದು ಮಲಪನಗುಡಿಯ ಘಟಕವೊಂದೇ. ಈ ಕಾರಣಕ್ಕಾಗಿಯೇ ರಾಜ್ಯದಿಂದ ಆಯ್ಕೆಯಾದ ಮೂರು ಪಂಚಾಯಿತಿಗಳಲ್ಲಿ ಇದರ ಹೆಸರು ಸೇರ್ಪಡೆಯಾಗಿದ್ದು. ಮೂರರಲ್ಲಿ ಮಲಪನಗುಡಿ ಹೆಸರು ಅಂತಿಮಗೊಂಡರೆ ಪ್ರಧಾನಿ ಭೇಟಿ ಕೊಡುತ್ತಾರೆ.

ಮಹಿಳೆಯರಿಗೆ ಮಂಗಳೂರಿನಲ್ಲಿ ತರಬೇತಿ

ಘಟಕ ಆರಂಭಿಸುವುದಕ್ಕೂ ಮುನ್ನ 7 ಜನ ಮಹಿಳೆಯರಿಗೆ ತರಬೇತಿಗಾಗಿ ಮಂಗಳೂರಿಗೆ ಕಳುಹಿಸಿಕೊಡಲಾಗಿತ್ತು. ಅಲ್ಲಿ ತರಬೇತಿ ಪಡೆದು ಬಂದ ಮಹಿಳೆಯರು ಘನತ್ಯಾಜ್ಯ ವಿಲೇವಾರಿ, ವಿಂಗಡಣೆಯನ್ನು ವೈಜ್ಞಾನಿಕವಾಗಿ ಮಾಡುವುದನ್ನು ಕಲಿತರು. ಯಾವುದೇ ಹಿಂಜರಿಕೆಯಿಲ್ಲದೆ ಈ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಆರ್ಥಿಕವಾಗಿಯೂ ಸ್ವಾವಲಂಬಿಯಾಗಿದ್ದಾರೆ. ಈ ಕೆಲಸ ಮಾಡಲು ಹಿಂಜರಿಯುತ್ತಿದ್ದ ಮಹಿಳೆಯರು ಈಗ ಕೆಲಸ ಅರಸಿಕೊಂಡು ಬರುತ್ತಿದ್ದಾರೆ. ಪಂಚಾಯಿತಿ ವ್ಯಾಪ್ತಿಯಲ್ಲಿ ದೊಡ್ಡ ಬದಲಾವಣೆಗೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.