ADVERTISEMENT

ದಾಳಿಂಬೆ ಬೆಳೆದವರ ಬಾಳು ಸಿಹಿ: ಎರಡು ವರ್ಷಗಳ ನಷ್ಟಕ್ಕೆ ಈ ಬಾರಿ ಲಾಭದ ಸಾಂತ್ವನ

ಸಿ.ಶಿವಾನಂದ
Published 15 ನವೆಂಬರ್ 2025, 5:50 IST
Last Updated 15 ನವೆಂಬರ್ 2025, 5:50 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಗ್ರಾಮದಲ್ಲಿ ದಾಳಿಂಬೆ ಪ್ಯಾಕಿಂಗ್ ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕರು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಗ್ರಾಮದಲ್ಲಿ ದಾಳಿಂಬೆ ಪ್ಯಾಕಿಂಗ್ ಕೆಲಸದಲ್ಲಿ ನಿರತರಾಗಿರುವ ಕಾರ್ಮಿಕರು   

ಹಗರಿಬೊಮ್ಮನಹಳ್ಳಿ (ವಿಜಯನಗರ ಜಿಲ್ಲೆ): ಕಳೆದ ವರ್ಷ ಉತ್ತಮ ಬೆಲೆ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದ ತಾಲ್ಲೂಕಿನ ದಾಳಿಂಬೆ ಬೆಳೆಗಾರರು ಖುಷಿಯಲ್ಲಿದ್ದಾರೆ. ಈ ವರ್ಷ ಉತ್ತಮ ಇಳುವರಿಯ ಜೊತೆಗೆ ಒಳ್ಳೆಯ ಬೆಲೆಯೂ ಇದೆ.

ತಾಲ್ಲೂಕಿನಲ್ಲಿ ಒಟ್ಟು 2,160 ಹೆಕ್ಟೇರ್‌ನಲ್ಲಿ ಬಗವಾ ತಳಿಯ ದಾಳಿಂಬೆ ಬೆಳೆಯಲಾಗಿದ್ದು, 35 ಸಾವಿರ ಟನ್ ಇಳುವರಿ ಬಂದಿದೆ.  ಒಂದು ಕೆಜಿ ದಾಳಿಂಬೆ ಬೆಲೆ ₹ 150 ಇದ್ದು, ಸಮರ್ಪಕ ನಿರ್ವಹಣೆ ಕಾಣದ ದಾಳಿಂಬೆ ದರವು ₹80 ರಿಂದ ₹90 ಇದೆ.

‘ತಾಲ್ಲೂಕಿನ ಹಂಪಸಾಗರ, ಏಣಿಗಿ ಬಸಾಪುರ, ಕೋಡಿಹಳ್ಳಿ, ಏಣಗಿ, ಜಿ.ಕೋಡಿಹಳ್ಳಿ, ಬಾಚಿಗೊಂಡನಹಳ್ಳಿ, ಅಂಕಸಮುದ್ರ, ಗದ್ದಿಕೇರಿ, ಮರಬ್ಬಿಹಾಳು, ಅಡವಿ ಆನಂದೇವನಹಳ್ಳಿ ಸೇರಿ ಹಲವು ಗ್ರಾಮಗಳಲ್ಲಿ ರೈತರು ದಾಳಿಂಬೆ ಬೆಳೆದಿದ್ದಾರೆ. ಪ್ರತಿ ಹೆಕ್ಟೇರ್‌ಗೆ ಈ ಬಾರಿ 20 ರಿಂದ 22 ಟನ್ ಇಳುವರಿ ಬಂದಿದೆ’ ಎಂದು ಬಾಚಿಗೊಂಡನಹಳ್ಳಿಯ ರೈತ ಕೊಟ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ತಾಲ್ಲೂಕಿನ ದಾಳಿಂಬೆಗೆ ಬೆಂಗಳೂರು, ಮುಂಬೈ, ಕೋಲ್ಕತ್ತ ಮತ್ತು ಚೆನೈ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ನೇರ ಜಮೀನುಗಳಿಗೆ ಬರುವ ಖರೀದಿದಾರರು, ಕಟಾವು, ತೂಕ, ಪ್ಯಾಕಿಂಗ್ ಆದ ತಕ್ಷಣ ರೈತರಿಗೆ ಸ್ಥಳದಲ್ಲೇ ಮೊತ್ತ ಪಾವತಿಸುತ್ತಾರೆ. ಇದರಿಂದ ಬೆಳೆಗಾರರಿಗೆ ಮಾರುಕಟ್ಟೆ ಮತ್ತು ಸಾಗಣೆ ಕಿರಿಕಿರಿ ತಪ್ಪಿದೆ’ ಎಂದು ರೈತ ಗದ್ದಿಕೇರಿಯ ಸಿ.ಸುರೇಶ್ ತಿಳಿಸಿದರು.

ತಾಲ್ಲೂಕಿನ ರೈತರು ಎಕರೆಗೆ 300 ರಿಂದ 350 ಗಿಡಗಳನ್ನು ನಾಟಿ ಮಾಡಿ, ಅತ್ಯಂತ ಜತನವಾಗಿ ಬೆಳೆಸಿದ್ದಾರೆ. ತಾಲ್ಲೂಕಿನ ನೆಲ್ಕುದ್ರಿ ಗ್ರಾಮದ ಎಂಜಿನಿಯರಿಂಗ್ ಪದವೀಧರ ನಾಗರಾಜ ಮತ್ತು ಅವರ ಸಹೋದರ ಸಂತೋಷ್ ಜತೆಗೂಡಿ 6 ಎಕರೆಯಲ್ಲಿ ದಾಳಿಂಬೆ ಬೆಳೆದು, ₹46 ಲಕ್ಷ ಗಳಿಸಿದ್ದಾರೆ. ದಾಳಿಂಬೆ ಕಟಾವು ಮಾಡುವುದರಲ್ಲಿ ವಿಶೇಷ ಪರಿಣತಿಯುಳ್ಳ ತಾಲ್ಲೂಕಿನ ಹಂಪಾಪಟ್ಟಣ ಗ್ರಾಮದ ಯುವಕರಿಗೆ ಉದ್ಯೋಗ ದೊರಕಿದೆ, ಅವರಿಗೆ ಉತ್ತಮ ಕೂಲಿಯೂ ಸಿಗುತ್ತಿದೆ.

ದಾಳಿಂಬೆ ಕೈ ಹಿಡಿದಿದೆ ಉತ್ತಮ ಬೆಲೆ ಮತ್ತು ಇಳುವರಿ ಬಂದಿದೆ ಇನ್ನೂ 5 ಎಕರೆಯಲ್ಲಿ ದಾಳಿಂಬೆ ಬೆಳೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ
ಶೇಖರಪ್ಪ ದಾಳಿಂಬೆ ಬೆಳೆಗಾರ ನೆಲ್ಕುದ್ರಿ
ರೋಗಕ್ಕೆ ತುತ್ತಾಗದ ದಾಳಿಂಬೆ ಸಸಿಗಳನ್ನು ನಾಟಿ ಮಾಡಬೇಕು. ಬಗವಾ ತಳಿಯ ಗಾತ್ರ ಮತ್ತು ಕೆಂಪು ಬಣ್ಣದಿಂದ ಉತ್ತಮ ಇಳುವರಿ ಬೆಲೆ ಸಿಕ್ಕಿದೆ
ವಿಜಯ್ ನಿಚ್ಚಾಪುರ ಹಿರಿಯ ಸಹಾಯಕ ನಿರ್ದೇಶಕ ತೋಟಗಾರಿಕೆ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.